Advertisement

ದಕ್ಷತೆ, ಪ್ರಾಮಾಣಿಕತೆಯಿಂದ ಕರ್ತವ್ಯ ನಿರ್ವಹಿಸಿ : ಅಧಿಕಾರಿಗಳಿಗೆ ಸಿಎಂ ಕಿವಿ ಮಾತು

10:48 PM Oct 31, 2021 | Team Udayavani |

ಬೆಂಗಳೂರು: ಜನರಿಗೆ ಒಳಿತಾಗುವ ಕೆಲಸವನ್ನು ದಕ್ಷತೆ, ಪ್ರಾಮಾಣಿಕತೆ ಹಾಗೂ ನಿಗದಿತ ಸಮಯದಲ್ಲಿ ನಿರ್ವಹಿಸುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧಿಕಾರಿಗಳಿಗೆ ಕಿವಿ ಮಾತು ಹೇಳಿದರು.

Advertisement

ರಾಷ್ಟ್ರೀಯ ಏಕತಾ ದಿನದ ಅಂಗವಾಗಿ ಸರ್ಧಾರ್‌ ವಲ್ಲಭಭಾಯಿ ಪಟೇಲ್‌ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ರಾಷ್ಟ್ರೀಯ ಏಕತಾ ದಿನದ ಪ್ರತಿಜ್ಞಾ ವಿಧಿಯನ್ನು ಬೋಧಿಸಿ ಮಾತನಾಡಿದ ಅವರು, ವಿಧಾನಸೌಧ ಒಂದು ಶಕ್ತಿ ಕೇಂದ್ರ. ನಾವೆಲ್ಲರೂ ಸರ್ಕಾರದ ಭಾಗವಾಗಿದ್ದೇವೆ. ಜನತಂತ್ರದ ಮುಖಾಂತರ ಜನರ ಶ್ರೇಯೋಭಿವೃದ್ಧಿಗೆ ನಾವೆಲ್ಲರೂ ದುಡಿಯಬೇಕಿದೆ. ನಮ್ಮೆಲ್ಲರ ಮೇಲೆ ಹೆಚ್ಚಿನ ಜವಾಬ್ದಾರಿ ಇದೆ. ಜನರ ಏಳಿಗೆಗಾಗಿ ದುಡಿದಾಗ ಮಾತ್ರ ಸರ್ಕಾರಿ ಕೆಲಸ, ದೇವರ ಕೆಲಸ ಎಂಬುದು ಸಾರ್ಥಕವಾಗುತ್ತದೆ ಎಂದು ತಿಳಿಸಿದರು.

ವಿವಿಧ ಭಾಷೆ ಪ್ರಾಂತ್ಯಗಳಲ್ಲಿ ಹಂಚಿ ಹೋಗಿದ್ದ ಈ ದೇಶವನ್ನು ಒಗ್ಗೂಡಿಸಿ ಗಣರಾಜ್ಯವನ್ನಾಗಿಸಿ, ಜನತಾಂತ್ರಿಕ ವ್ಯವಸ್ಥೆಯನ್ನು ತರುವಲ್ಲಿ ಪಟೇಲರ ಪಾತ್ರ ಬಹಳ ಹಿರಿದಾಗಿದೆ. ಇಡೀ ದೇಶದ ರೈತ ಭಾಂಧವರು ಮತ್ತು ಕಾರ್ಮಿಕ ವರ್ಗದವರು ಜಾಗೃತಗೊಂಡು ಸ್ವಾತಂತ್ರ್ಯ ಚಳವಳಿಯಲ್ಲಿ ಭಾಗವಹಿಸುವಲ್ಲಿ ಪಟೇಲರು ಪ್ರಮುಖ ಪಾತ್ರ ವಹಿಸಿದ್ದಾರೆ. ಗುಜರಾತ್‌ನ ಬಾರ್ಡೋಲಿ ರೈತ ಸತ್ಯಾಗ್ರಹ ಹಾಗೂ ಬಿಹಾರದ ಚಂಪಾರಣ್‌ ಪ್ಲಾಂಟೇಷನ್‌ ಕಾರ್ಮಿಕರ ಸತ್ಯಾಗ್ರಹದ ನೇತೃತ್ವವನ್ನು ವಹಿಸಿದ ಪಟೇಲರು ಬ್ರಿಟೀಷರು ಈ ದೇಶವನ್ನು ಬಿಟ್ಟುತೊಲಗುವಂತೆ ಮಾಡಿದರು. ಪಟೇಲರ ಸಂಘತನಾತ್ಮಕ ಶಕ್ತಿಯನ್ನು ಈ ದೇಶ ಗುರುತಿಸುತ್ತಿದೆ ಎಂದರು.

ಇದನ್ನೂ ಓದಿ : ಇಂದಿರಾ ಗಾಂಧಿ ಜನರ ಮನಸ್ಸಿನಲ್ಲಿ ದೇವರಾಗಿದ್ದರು: ಸಿದ್ದರಾಮಯ್ಯ

ಆಂತರಿಕ ಏಕತೆ, ಭದ್ರತೆ ಮುಖ್ಯ:
ದೇಶದಲ್ಲಿ ವಿವಿಧ ಭಾಷೆ, ಭೌಗೋಳಿಕವಾಗಿ ಹಾಗೂ ಆಡಳಿತಾತ್ಮಕ ದೃಷ್ಟಿಯಿಂದ ವಿವಿಧ ರಾಜ್ಯಗಳಾಗಿದ್ದರೂ ಸಹ, ಇಡೀ ದೇಶ ಏಕತೆ ಮತ್ತು ಅಖಂಡತೆಯಿಂದಿರುವುದು ಬಹಳ ಮುಖ್ಯ. ಈ ದೇಶದ ಗಡಿಗಳಲ್ಲಿನ ಸವಾಲುಗಳನ್ನು ಎದುರಿಸಬೇಕಾದರೆ ಆಂತರಿಕವಾಗಿ ಏಕತೆ, ಅಖಂಡತೆಯನ್ನು ಮತ್ತು ಭದ್ರತೆ ಇರುವುದು ಬಹಳ ಅವಶ್ಯಕ. ಆ ನಿಟ್ಟಿನಲ್ಲಿ ಪಟೇಲರ ಕಾರ್ಯವನ್ನು ಸ್ಮರಿಸುತ್ತೇವೆ ಎಂದರು.

Advertisement

ಸ್ವಾತಂತ್ರ್ಯದ ಬಳಿಕ ದೇಶದಲ್ಲಿ ನಡೆದ ಪ್ರಮುಖ ಘಟನಾವಳಿಗಳಲ್ಲಿ ಹಸಿರು ಕ್ರಾಂತಿ ಪ್ರಮುಖವಾದದ್ದು. ದೇಶದಲ್ಲಿ 30 ಕೋಟಿ ಇದ್ದ ಜನಸಂಖ್ಯೆ 130 ಕೋಟಿ ಆದರೂ ಕೂಡ ಎಲ್ಲರಿಗೂ ಅನ್ನ ಬೆಳೆದು ಸ್ವತಂತ್ರ, ಸ್ವಾಭಿಮಾನಿ ಹಾಗೂ ಸ್ವಾವಲಂಬಿ ದೇಶವಾಗಿದೆ. ರಾಷ್ಟ್ರೀಯ ಏಕತಾ ದಿನದಂದು ಸ್ಮರಿಸಿಕೊಂಡು ಸರ್ಧಾರ ವಲ್ಲಭ ಭಾಯ್‌ ಪಟೇಲ್‌ ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಾವೆಲ್ಲರು ನಡೆಯಬೇಕಿದೆ ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next