ಮದ್ದೂರು: ತಮ್ಮ ಖಾಸಗಿ ಆಪ್ತ ಕಾರ್ಯದರ್ಶಿ ರಘು ವಿವಾಹದ ಬೀಗರ ಔತಣಕೂಟಕ್ಕೆ ಆಗಮಿಸಿದ್ದ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಮಾಧ್ಯಮಗಳಿಂದ ಅಂತರ ಕಾಯ್ದುಕೊಂಡಿದ್ದರು.
ಕೊಡಗಿನ ಇಬ್ಬನಿ ರೆಸಾರ್ಟ್‌ನಲ್ಲಿ ಎರಡು ದಿನಗಳಿಂದ ವಿಶ್ರಾಂತಿ ಪಡೆಯುತ್ತಿದ್ದ ಸಿಎಂ ಕುಮಾರಸ್ವಾಮಿ ಭಾನುವಾರ ರೆಸಾರ್ಟ್‌ನಿಂದ ಹೊರಟು ಮೈಸೂರಿನ ಇಲವಾಲ ಮಾರ್ಗವಾಗಿ ಮಂಡ್ಯ ಮೂಲಕ ಮದ್ದೂರು ಪಟ್ಟಣದ ಸೋಮನಹಳ್ಳಿಯ ತಿಮ್ಮದಾಸ್ ಹೋಟೆಲ್ ಪಕ್ಕದಲ್ಲಿ ಆಯೋಜಿಸಿದ್ದ ಔತಣಕೂಟಕ್ಕೆ ಮಧ್ಯಾಹ್ನ 3.15ಕ್ಕೆ ಆಗಮಿಸಿದರು.
ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಆಗಮಿಸುತ್ತಿದ್ದಂತೆ ಜೆಡಿಎಸ್ ಕಾರ್ಯಕರ್ತರು ಅವರ ಪರ ಜೈಕಾರ ಕೂಗಿದರು. ಬಳಿಕ ನೂತನ ವಧು-ವರರಿಗೆ ಶುಭ ಹಾರೈಸಿದರು. ಸಿಎಂ ಆಗಮನದ ಹಿನ್ನಲೆಯಲ್ಲಿ ಮಾಧ್ಯಮದವರಿಗೆ ನಿರ್ಬಂಧ ವಿಧಿಸಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.
ವೈದ್ಯರ ಸಲಹೆ ಮೇರೆಗೆ ಮಾಂಸಾಹಾರ ಭೋಜನದಿಂದ ದೂರ ಉಳಿದಿದ್ದ ಸಿಎಂ ಕುಮಾರಸ್ವಾಮಿ ಅವರು, ಇಂದು ನಾಟಿ ಕೋಳಿ ಸಾರು, ನಾಟಿ ಕೋಳಿ ಮೊಟ್ಟೆ, ಮುದ್ದೆ, ಅನ್ನ, ಮಜ್ಜಿಗೆಯನ್ನಷ್ಟೇ ಸೇವಿಸಿದರು. ಬೀಗರ ಔತಣಕೂಟದಲ್ಲಿ ನಾನಾ ಬಗೆಯ ಮಾಂಸಹಾರಿ ಖಾದ್ಯಗಳನ್ನು ತಯಾರಿಸಲಾಗಿತ್ತು. ಅದರೆ, ಸಿಎಂ ಆ ಖಾದ್ಯಗಳಿಂದ ದೂರವೇ ಉಳಿದರು.
ಸಿದ್ದರಾಮಯ್ಯ ಸಿಎಂ ಆಗೋ ಬಗ್ಗೆ ಕೈ ಶಾಸಕರ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಲು ನಿರಾಕರಿಸಿದ ಸಿಎಂ ಕುಮಾರಸ್ವಾಮಿ ಅಂತರ ಕಾಯ್ದುಕೊಂಡರು. ಮೇ 23ಕ್ಕೆ ಮಾತನಾಡುತ್ತೇನೆ ಎಂದಷ್ಟೇ ಹೇಳಿ ಅಲ್ಲಿಂದ ನಿರ್ಗಮಿಸಿದರು.
ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ, ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ವಿಶ್ವನಾಥ್, ಶಾಸಕ ಕೆ.ಸುರೇಶ್‌ಗೌಡ, ಮೈತ್ರಿ ಅಭ್ಯರ್ಥಿ ನಿಖೀಲ್ ಕುಮಾರಸ್ವಾಮಿ, ಜೆಡಿಎಸ್ ತಾಲೂಕು ಘಟಕದ ಅಧ್ಯಕ್ಷ ಚಿಕ್ಕತಿಮ್ಮೇಗೌಡ, ಯುವ ಘಟಕದ ಅಧ್ಯಕ್ಷ ಸಿ.ಟಿ.ಶಂಕರ್ ಇತರರಿದ್ದರು.