“ನನ್ನ 38 ವರ್ಷಗಳ ಸಿನಿಮಾ ಜರ್ನಿ ಸಾರ್ಥಕವೆನಿಸಿದೆ. ಸಿನಿಮಾರಂಗದಲ್ಲಿ ನೆಮ್ಮದಿ ಸಿಕ್ಕಾಗಿದೆ. ಇನ್ನು ಸಾಕು ಅಂದುಕೊಂಡಿದ್ದೆ. ಆದರೆ, ಕವಿರಾಜ್, ನೀವು ಸುಮ್ಮನೆ ನಿಲ್ಲಬಾರದು, ಓಡಬೇಕು ಸರ್, ಅಂತ ಕರೆದು, ಪಾಠ ಮಾಡೋಕೆ ಹೇಳಿದ್ರು. ಎಲ್ಲರೂ ಪಾಠ ಕೇಳಿ ಚಪ್ಪಾಳೆ ತಟ್ಟಿದ್ದಾರೆ. ಇದಕ್ಕಿಂತ ಖುಷಿ ಬೇರೆ ಇಲ್ಲ…’ ಜಗ್ಗೇಶ್ ಹೀಗೆ ಹೇಳುತ್ತಾ ಹೋದರು. ಅವರು ಹೇಳಿಕೊಂಡಿದ್ದು, “ಕಾಳಿದಾಸ ಕನ್ನಡ ಮೇಷ್ಟ್ರು’ ಚಿತ್ರದ ಬಗ್ಗೆ. ಹಾಗೆ ಹೇಳ್ಳೋಕೆ ಕಾರಣ, ಚಿತ್ರ ಯಶಸ್ವಿ 25 ದಿನ ಪೂರೈಸಿರುವುದು.
25 ದಿನದ ಸಂಭ್ರಮ ಹಂಚಿಕೊಳ್ಳಲೆಂದೇ ಪತ್ರಕರ್ತರ ಮುಂದೆ ಬಂದಿದ್ದ ಜಗ್ಗೇಶ್ ಹೇಳಿದ್ದಿಷ್ಟು. “ಒಳ್ಳೆಯ ಕಥೆ, ಪಾತ್ರ ಇದ್ದರೆ ಮಾತ್ರ ಮಾಡೋಣ ಅಂತ ನಿರ್ಧರಿಸಿದ್ದೆ. ಕವಿರಾಜ್ ಈ ಕಥೆ ಹಿಡಿದು ಬಂದು, ನೀವು ಮಾಡಲೇಬೇಕು. ಅಂದ್ರು. ಅವರು ಹೇಳಿದಂತೆಯೇ ಚಿತ್ರ ಮಾಡಿದರು. ಅದು ಎಲ್ಲರಿಗೂ ಇಷ್ಟವಾಗಿ ಗೆಲುವು ಕೊಟ್ಟಿದೆ. ಒಳ್ಳೆಯ ಚಿತ್ರ ಇದ್ದರೆ, ಜನ ಖಂಡಿತ ನೋಡುತ್ತಾರೆ. ನಮ್ಮನ್ನು ಜನರು ದಡ ಸೇರಿಸಿದ್ದಾರೆ. ಇಲ್ಲಷ್ಟೇ ಅಲ್ಲ, ಈಗ ಸಾಗರದಾಚೆಯೂ ಮೇಷ್ಟ್ರು ಪಾಠ ಮಾಡೋಕೆ ಹೋಗುತ್ತಿದ್ದಾರೆ ಎಂಬುದು ಖುಷಿ.
ಬಿಡುಗಡೆ ವೇಳೆ ಕನ್ನಡ ಸೇರಿ ಹಲವು ಭಾಷೆಯ ಚಿತ್ರಗಳು ಬಂದರೂ, ಅವೆಲ್ಲವನ್ನೂ ಫೇಸ್ ಮಾಡಿ, ಚಿತ್ರ ಮೆಚ್ಚುಗೆ ಪಡೆದಿದೆ ಅಂದರೆ, ಅದು ಜನರು ನಮ್ಮ ಭುಜ ತಟ್ಟಿದ್ದಕ್ಕೆ. ಮುಖ್ಯವಾಗಿ ಮಾಧ್ಯಮ, ಪತ್ರಿಕೆಗಳು ಚಿತ್ರದಲ್ಲಿರುವ ಒಳ್ಳೆಯ ಅಂಶದ ಬಗ್ಗೆ ಹೇಳಿವೆ. ಕೆಲವು ಕಡೆ ಜನರ ಬೇಡಿಕೆ ಮೇರೆಗೆ ಚಿತ್ರ ಬಿಡುಗಡೆಯಾಗಿದೆ. ಇನ್ನು, ಒಂದು ಶೋ ಕೊಡ್ತೀವಿ ಅಂತ ಹೇಳಿದವರು, ನಾಲ್ಕು ಶೋ ಕೊಡುವಂತಾಗಿದೆ.
ಅದಕ್ಕೆ ಕಾರಣ, ಚಿತ್ರದಲ್ಲಿರುವ ಕಂಟೆಂಟ್. ಚಿತ್ರದಲ್ಲಿ ಧಮ್ ಇದ್ದರೆ ಚಿತ್ರಮಂದಿರದಲ್ಲಿ ಸಿನಿಮಾ ಇರುತ್ತೆ ಎನ್ನುವುದಕ್ಕೆ ನಮ್ಮ ಚಿತ್ರ ಸಾಕ್ಷಿ. ಅದೇಕೋ ಏನೋ, ಜನರು ಚಿತ್ರಮಂದಿರಕ್ಕೆ ಬರುತ್ತಿಲ್ಲ. ಕಾರಣ ಗೊತ್ತಿಲ್ಲ. ಅದು ದುರಂತ. ಒಳ್ಳೆಯ ಚಿತ್ರ ಬಂದರೆ, ಖಂಡಿತ ಜನ ಚಿತ್ರಮಂದಿರಕ್ಕೆ ಬಂದೇ ಬರುತ್ತಾರೆ ಎಂಬ ನಂಬಿಕೆ ನನ್ನದು. ಈ ಚಿತ್ರಕ್ಕೆ ಎಲ್ಲೆಡೆಯಿಂದಲೂ ಮೆಚ್ಚುಗೆ ಬಂದಿದೆ. ನನ್ನ ಸಿನಿಜರ್ನಿಯಲ್ಲಿ ಒಳ್ಳೆಯ ಚಿತ್ರಗಳ ಸಾಲಿಗೆ ಈ ಚಿತ್ರವೂ ಸೇರಿದೆ.
ಇಷ್ಟರಲ್ಲೇ ಮುಖ್ಯಮಂತ್ರಿಗಳಿಗೆ ಸಿನಿಮಾ ತೋರಿಸುತ್ತೇನೆ. ಈಗಾಗಲೇ ಒಮ್ಮೆ ಅವರೊಂದಿಗೆ ಮಾತುಕತೆ ನಡೆಸಿದ್ದೇನೆ. ಚುನಾವಣೆ, ಫಲಿತಾಂಶ ನಂತರ ಚಿತ್ರ ನೋಡುವುದಾಗಿ ಹೇಳಿದ್ದರು. ಖಂಡಿತವಾಗಿಯೂ ಸಿನಿಮಾ ತೋರಿಸುತ್ತೇನೆ. ಸರ್ಕಾರದ ಶಿಕ್ಷಣ ಸಚಿವರು ಕೂಡ ಸಿನಿಮಾ ನೋಡಲಿದ್ದಾರೆ. ಇಂಥದ್ದೊಂದು ಒಳ್ಳೆಯ ಚಿತ್ರದಲ್ಲಿ ಕೆಲಸ ಮಾಡಲು ಅವಕಾಶ ಸಿಕ್ಕಿದ್ದು ಅದೃಷ್ಟ. ಇಡೀ ತಂಡದ ಶ್ರಮಕ್ಕೆ ಫಲ ಸಿಕ್ಕಿದೆ’ ಎಂದಷ್ಟೇ ಹೇಳಿಕೊಂಡರು ಜಗ್ಗೇಶ್.