ಸಾಗರ: ತಾಲೂಕಿನಲ್ಲಿ ಸಹಾಯಕ ಕಾರ್ಯಪಾಲಕ ಮತ್ತು ಕಿರಿಯ ಅಭಿಯಂತರರ ಕೊರತೆ ಇದೆ. ಕೊರತೆ ಇರುವ ಇಂಜಿನೀಯರ್‌ಗಳನ್ನು ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲು ಮುಖ್ಯಮಂತ್ರಿಗಳು ಸಮ್ಮತಿಸಿದ್ದಾರೆ ಎಂದು ಶಾಸಕ ಎಚ್.ಹಾಲಪ್ಪ ಹರತಾಳು ತಿಳಿಸಿದರು.
ಇಲ್ಲಿನ ಪ್ರವಾಸಿ ಮಂದಿರದಲ್ಲಿ ಗುರುವಾರ ಸಾಗರ, ಹೊಸನಗರ ಅಭಿಯಂತರರ ಜೊತೆ ಸಮಾಲೋಚನೆ ಮತ್ತು ಸೊರಬ ರಸ್ತೆ ಅಗಲೀಕರಣಕ್ಕೆ ಸಂಬಂಧಪಟ್ಟಂತೆ ಅಧಿಕಾರಿಗಳ ಜೊತೆ ಚರ್ಚೆ ನಡೆಸಿ ಮಾತನಾಡಿದ ಅವರು, ಗುತ್ತಿಗೆ ಅಭಿಯಂತರರಿಗೆ 21 ರಿಂದ 28 ಸಾವಿರ ರೂಪಾಯಿವರೆಗೆ ವೇತನ ನೀಡಲಾಗುತ್ತದೆ ಎಂದರು.
ತಾಲೂಕಿನಲ್ಲಿ ಇಂಜಿನಿಯರ್‌ಗಳ ಕೊರತೆಯಿಂದ ಮತ್ತು ಕೆಲವು ತಾಂತ್ರಿಕ ಸಮಸ್ಯೆಯಿಂದ ಕಾಮಗಾರಿಗಳು ವಿಳಂಬವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಪ್ರತಿ ಗುರುವಾರ ಅಧಿಕಾರಿಗಳ ಸಭೆ ನಡೆಸಿ ಬಾಕಿ ಇರುವ ಕಾಮಗಾರಿಗಳನ್ನು ಪೂರೈಸಲು ಅಗತ್ಯ ಕ್ರಮ ಕೈಗೊಳ್ಳಲು ಚರ್ಚೆ ನಡೆಸಲಾಗಿದೆ. ನೆರೆಹಾನಿಯಿಂದ ಸಂಕಷ್ಟದಲ್ಲಿರುವವರಿಗೆ ಸರ್ಕಾರ ಪೂರಕವಾಗಿ ಸ್ಪಂದಿಸುತ್ತಿದೆ. ಪರಿಹಾರ ಮೊತ್ತವನ್ನು ಹಂತಹಂತವಾಗಿ ವಿತರಣೆ ಮಾಡಲಾಗುತ್ತಿದೆ. ೧೯೨ಎ ಕಾಯ್ದೆ ತಿದ್ದುಪಡಿಯಿಂದ ಸಾಕಷ್ಟು ರೈತರಿಗೆ ಅನುಕೂಲವಾಗುತ್ತದೆ. ಇದನ್ನು ಚುನಾವಣೆ ಗಿಮಿಕ್ ಎನ್ನುವ ಕಾಂಗ್ರೆಸ್ಸಿಗರು ತಮ್ಮ ಅವಧಿಯಲ್ಲಿ ಏಕೆ ಜಾರಿಗೆ ತರಲಿಲ್ಲ ಎಂದು ಪ್ರಶ್ನಿಸಿದರು.
ಸೊರಬ ರಸ್ತೆ ಅಗಲೀಕರಣ ಶೀಘ್ರ
ಮಳೆ ಹಿನ್ನೆಲೆಯಲ್ಲಿ ಸೊರಬ ರಸ್ತೆ ಅಗಲೀಕರಣಕ್ಕೆ ಸ್ವಲ್ಪ ತೊಂದರೆಯಾಗಿದೆ. ರಸ್ತೆ ಅಗಲೀಕರಣಕ್ಕೆ ೨೦ ಕೋಟಿ ರೂ. ಮಂಜೂರಾಗಿದ್ದು ಈ ಪೈಕಿ ೧೬ ಕೋಟಿ ರೂ. ಪರಿಹಾರ ನೀಡಲಾಗಿದ್ದು, ಇನ್ನು ೪ ಕೋಟಿ ರೂ. ಇದ್ದು ಅದನ್ನು ಪರಿಹಾರಕ್ಕೆ ವಿನಿಯೋಗಿಸಲಾಗುತ್ತಿದೆ. ರಸ್ತೆ ನಿರ್ಮಾಣಕ್ಕೆ 10 ಕೋಟಿ ರೂ. ಮೀಸಲಿರಿಸಲಾಗಿದೆ. ರಸ್ತೆ ಅಗಲೀಕರಣಕ್ಕೆ ಹಣಕಾಸಿನ ಸಮಸ್ಯೆ ಇಲ್ಲ. ನಿವಾಸಿಗಳು ತಮ್ಮ ಜಾಗ ಬಿಟ್ಟು ಕೊಡಲು ಸ್ವಲ್ಪ ವಿಳಂಬವಾಗಿತ್ತು. ಅವರ ಮನವೊಲಿಸುವ ಪ್ರಯತ್ನ ನಡೆಸಲಾಗುತ್ತಿದೆ. ಈತನಕ ಅಗಲೀಕರಣಕ್ಕೆ ಜಾಗ ಬಿಟ್ಟು ಕೊಡದೆ ಇರುವವರು ತಕ್ಷಣ ಜಾಗ ಬಿಟ್ಟು ಕೊಟ್ಟರೆ ಅಗಲೀಕರಣ ಕಾಮಗಾರಿ ತಕ್ಷಣ ನಡೆಯುತ್ತದೆ ಎಂದು ಹೇಳಿದರು.
ನಗರಸಭೆ ಅಧ್ಯಕ್ಷೆ ಮಧುರಾ ಶಿವಾನಂದ್, ಉಪಾಧ್ಯಕ್ಷ ವಿ.ಮಹೇಶ್, ಸದಸ್ಯ ಟಿ.ಡಿ.ಮೇಘರಾಜ್, ಸಹಾಯಕ ಆಯುಕ್ತೆ ಪಲ್ಲವಿ ಸಾತೇನಹಳ್ಳಿ, ತಹಶೀಲ್ದಾರ್ ಮಲ್ಲೇಶ್ ಬಿ. ಪೂಜಾರ್, ಸಾಗರ ಮತ್ತು ಹೊಸನಗರ ತಾಲೂಕಿನ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.