ಬೆಂಗಳೂರು: ಮಂಡ್ಯದ ಸರ್ಕಾರಿ ಕಾಲೇಜು ಮತ್ತು ಬೆಂಗಳೂರಿನ ಮಹಾರಾಣಿ ಕಾಲೇಜಿಗೆ ಸ್ವಾಯತ್ತ ಸ್ಥಾನಮಾನನೀಡಿ ಕ್ಲಸ್ಟರ್ ವಿಶ್ವವಿದ್ಯಾಲಯವಾಗಿಸುವ ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯಗಳ (ತಿದ್ದುಪಡಿ) ವಿಧೇಯಕ-2019ಕ್ಕೆ ಉಭಯ ಸದನಗಳ ಅಂಗೀಕಾರ ದೊರೆತಿದೆ. ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ಅವರು ಮಂಡಿಸಿರುವ ಈ ತಿದ್ದುಪಡಿ ಮಸೂದೆಯಲ್ಲಿ ಮೈಸೂರು ವಿವಿ ವ್ಯಾಪ್ತಿಗೆ ಒಳಪಟ್ಟ ಮಂಡ್ಯ ಸರ್ಕಾರಿ ಕಾಲೇಜಿಗೆ ಸ್ವಾಯತ್ತ ಸ್ಥಾನಮಾನ ನೀಡಿ, ಅದನ್ನು ಕ್ಲಸ್ಟರ್ ವಿಶ್ವವಿದ್ಯಾಲಯವಾಗಿ ಮಾಡಲು ನಿರ್ಧರಿಸಲಾಗಿದೆ. ಹಾಗೆಯೇ ಬೇಂಗಳೂರಿನ ಹೃದಯ ಭಾಗದಲ್ಲಿರುವ ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜು, ಮಹಾರಾಣಿ ಮಹಿಳಾ ಕಲಾ, ವಾಣಿಜ್ಯ, ಮತ್ತು ವ್ಯವಸ್ಥಾಪನಾ ಕಾಲೇಜು ಮತ್ತು ಶ್ರೀಮತಿ ವಿ.ಎಚ್.ಡಿ. ಕೇಂದ್ರೀಯ ಗೃಹವಿಜ್ಞಾನ ಸಂಸ್ಥೆಯನ್ನು ಒಳಗೊಂಡು ಕ್ಲಸ್ಟರ್ ವಿವಿಯಾಗಿ ರೂಪಿಸಲು ಕಾಯ್ದೆಯಲ್ಲಿ ತಿದ್ದುಪಡಿ ಮಾಡಲಾಗಿದೆ.
ಬೆಂಗಳೂರು ಕೇಂದ್ರ ವಿವಿಯಿಂದ ಮಹಾರಾಣಿ ಕಾಲೇಜುಗಳನ್ನು ಪ್ರತ್ಯೇಕ ಗೊಳಿಸಿ, ಮೂರು ಶಿಕ್ಷಣ ಸಂಸ್ಥೆಯನ್ನು ಒಳಗೊಂಡು ಕ್ಲಸ್ಟರ್ ವಿವಿ ಮಾಡಲಾಗುತ್ತದೆ. ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜನ್ನು ಮುಖ್ಯಸ್ಥಂಸ್ಥೆಯಾಗಿಸಲಾಗುತ್ತದೆ. ಮೈಸೂರು ವಿವಿಯಿಂದ ಮಂಡ್ಯ ಸರ್ಕಾರಿ ಕಾಲೇಜನ್ನು ಪ್ರತ್ಯೇಕಿಸಿ, ಸ್ವಾಯತ್ತ ಸ್ಥಾನಮಾನ ನೀಡಿ, ಪ್ರಾದೇಶಿಕ ಅಧಿಕಾರ ವ್ಯಾಪ್ತಿಯನ್ನು ವಿಸ್ತರಿಸಲಾಗುತ್ತದೆ.
ಕ್ಲಸ್ಟರ್ ವಿವಿ ಮೂಲಕ ಅಂಚೆ ತೆರಪಿನ ಶಿಕ್ಷಣ, ಕುಲಪತಿಗಳೇ ನೇರವಾಗಿ ಇಬ್ಬರು ಸಿಂಡಿಕೇಟ್ ಸದಸ್ಯರನ್ನು ನಾಮನಿರ್ದೇಶನ ಮಾಡಲಿದ್ದಾರೆ. ವಿಶ್ವವಿದ್ಯಾಲಯಗಳ ನಿರ್ದೇಶಕರು ಇರುತ್ತಾರೆ. ಡೀನ್‌ಗಳು ವಿದ್ಯಾಲಯದ ನಿರ್ದೇಶಕರು ಮತ್ತು ವ್ಯಾಸಂಗ ವಿಭಾಗವು ವಿದ್ಯಾಲಯವಾ ಗಲಿದೆ. ವಿಶೇಷಾಧಿಕಾರಿಯನ್ನು ನೇಮಿಸಲಾಗುತ್ತದೆ. ವಿವಿಯು ರಚನೆಯಾಗುವವರೆಗೂ ವಿಶೇಷಾಧಿಕಾರಿಗಳು ಕುಲಪತಿಯ ಅಧಿಕಾರ ಚಲಾಯಿಸಬಹುದಾಗಿದೆ. ಒಂದು ವರ್ಷದಲ್ಲಿ ವಿವಿ ರಚನೆ ಮಾಡಿ, ಪ್ರಥಮ ಕುಲಪತಿ ನೇಮಿಸಲಾಗುತ್ತದೆ.