Advertisement

ಕರಾವಳಿಯಲ್ಲಿ ಮೋಡದ ವಾತಾವರಣ, ಸಾಧಾರಣ ಮಳೆ; ಕೆಲವೆಡೆ ಹಾನಿ

12:03 AM May 26, 2024 | Team Udayavani |

ಮಂಗಳೂರು/ಉಡುಪಿ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶನಿವಾರ ಹಗಲು ಮೋಡ ಕವಿದ ವಾತಾವರಣದೊಂದಿಗೆ ಅಲ್ಲಲ್ಲಿ ಹಗುರ ಮಳೆಯಾಗಿದೆ. ಮುಂಜಾನೆಯಿಂದಲೇ ಮೋಡ ಕವಿದ ಆಕಾಶ ಕಂಡು ಬಂದಿದ್ದು, ಬಹುತೇಕ ದಿನವಿಡೀ ಸೂರ್ಯನ ದರ್ಶನವಾಗಿಲ್ಲ. ಸಂಜೆ ಬಳಿಕ ಅಲ್ಲಲ್ಲಿ ಸಾಧಾರಣ ಮಳೆಯಾಗಿದೆ. ಉಡುಪಿ ಜಿಲ್ಲೆಯಲ್ಲಿ ಶುಕ್ರವಾರ ರಾತ್ರಿ 26 ಮನೆಗಳಿಗೆ ಹಾನಿ ಸಂಭವಿಸಿದೆ.

Advertisement

ರವಿವಾರ ಮುಂಜಾನೆ ವರೆಗೆ “ಎಲ್ಲೋ ಅಲರ್ಟ್‌’ ಇದೆ. ಅನಂತರ ಯಾವುದೇ ಅಲರ್ಟ್‌ ಇಲ್ಲ. ಮುನ್ಸೂಚನೆ ಪ್ರಕಾರ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯ ಹಲವೆಡೆ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.

ತಾಪಮಾನ ಇಳಿಕೆ
ಗರಿಷ್ಠ ತಾಪಮಾನದಲ್ಲಿ ತೀವ್ರ ಇಳಿಕೆಯಾಗಿದ್ದು, ಮಂಗಳೂರಿನಲ್ಲಿ ಸಾಮಾನ್ಯಕ್ಕಿಂತ 5.5 ಡಿ.ಸೆ. ಕಡಿಮೆಯಾಗಿ 27.8 ಡಿ.ಸೆ. ದಾಖಲಾಗಿದೆ. ಕನಿಷ್ಠ ತಾಪಮಾನವೂ ಸಾಮಾನ್ಯಕ್ಕಿಂತ 1.8 ಡಿ.ಸೆ. ಕಡಿಮೆಯಾಗಿ 23.2 ಡಿ.ಸೆ. ದಾಖಲಾಗಿದೆ.

ಬಂಗಾಲಕೊಲ್ಲಿ: ಚಂಡಮಾರುತ
ಬಂಗಾಲಕೊಲ್ಲಿಯಲ್ಲಿ ಉಂಟಾಗಿರುವ ಚಂಡಮಾರುತ ತೀವ್ರತೆ ಪಡೆದಿದ್ದು, ಉತ್ತರ ದಿಕ್ಕಿನತ್ತ ಸಾಗುತ್ತಿದ್ದು, ಬಾಂಗ್ಲಾದೇಶ, ಪಶ್ಚಿಮ ಬಂಗಾಲ ಕರಾವಳಿಯತ್ತ ಸಾಗುತ್ತಿದೆ ಎಂದು ಹವಾಮಾನ ಇಲಾಖೆ ವರದಿಯಲ್ಲಿ ಉಲ್ಲೇಖಿಸಿದೆ.

ಶುಕ್ರವಾರ ರಾತ್ರಿ ಭಾರೀ ಮಳೆ
ಶುಕ್ರವಾರ ರಾತ್ರಿ ಮಂಗಳೂರು ನಗರ ವ್ಯಾಪ್ತಿಯಲ್ಲಿ ಸುರಿದ ಭಾರೀ ಮಳೆಗೆ ನಗರದ ವಿವಿಧೆಡೆ ತಗ್ಗು ಪ್ರದೇಶಗಳು ಜಲಾವೃತಗೊಂಡಿದ್ದವು. ರಾತ್ರಿ 9ಕ್ಕೆ ಆರಂಭವಾದ ಮಳೆ ತಡರಾತ್ರಿ ವರೆಗೆ ಸುರಿಯುತ್ತಲೇ ಇತ್ತು. ಹೆದ್ದಾರಿ ಸೇರಿದಂತೆ ನಗರ ರಸ್ತೆಗಳಲ್ಲಿ ಭಾರೀ ಪ್ರಮಾಣದಲ್ಲಿ ಮಳೆ ನೀರು ಹರಿದು ವಾಹನ ಸಂಚಾರಕ್ಕೂ ಅಡ್ಡಿಯಾಯಿತು. ಕೊಟ್ಟಾರಚೌಕಿ ಭಾಗದಲ್ಲಿ ರಸ್ತೆ ಜಲಾವೃತಗೊಂಡಿತ್ತು. 20ಕ್ಕೂ ಅಧಿಕ ಮನೆಗಳು, ಅಂಗಡಿಗಳಿಗೆ ನೀರು ನುಗ್ಗಿ ಅಪಾರ ಹಾನಿ ಸಂಭವಿಸಿದೆ.

Advertisement

ಆವರಣ ಗೋಡೆ ಕುಸಿದು 2 ಕಾರುಗಳಿಗೆ ಹಾನಿ
ಉಳ್ಳಾಲ: ದೇರಳಕಟ್ಟೆ ಯೇನಪೊಯ ಆಸ್ಪತ್ರೆ ಬಳಿ ಮರದ ಮಿಲ್ಲೊಂದರ ಆವರಣ ಗೋಡೆ ಕುಸಿದು 2 ಕಾರು ಮತ್ತು 1 ಕೈಗಾಡಿಗೆ ಹಾನಿಯಾದ ಘಟನೆ ಶನಿವಾರ ಸಂಜೆ ಸಂಭವಿಸಿದೆ.

ಕೆಲವು ದಿನಗಳಿಂದ ಸುರಿಯುತ್ತಿರುವ ಮಳೆಗೆ ಆವರಣಗೋಡೆ ಒದ್ದೆಯಾಗಿದ್ದು, ಎತ್ತರದ ಹಳೆ ಗೋಡೆಯಾಗಿದ್ದು, ಸಂಜೆ ವೇಳೆಗೆ ಕುಸಿದು ಬಿದ್ದಿದೆ. ಬೇಲ್‌ಪುರಿ ಮಾರಾಟ ಗಾಡಿಯೊಂದು ಕಲ್ಲಿನಡಿಗೆ ಸಿಕ್ಕಿ ಸಂಪೂರ್ಣ ಹಾನಿಗೀಡಾಗಿದೆ. ಎರಡು ದಿನಗಳ ಹಿಂದೆ 15 ಸಾವಿರ ರೂ. ಪಾವತಿ ಮಾಡಿ ಕೈಗಾಡಿ ಖರೀದಿಸಿರುವುದಾಗಿ ಬೇಲ್‌ಪುರಿ ಮಾರಾಟಗಾರ ಅಳಲು ತೋಡಿಕೊಂಡಿದ್ದಾನೆ.

ಕಾಂಪೌಂಡ್‌ ಕುಸಿದು ವಾಹನಗಳು ಜಖಂ
ಉಡುಪಿ: ಜಿಲ್ಲೆಯಾದ್ಯಂತ ಶುಕ್ರವಾರ ತಡರಾತ್ರಿಯಿಂದ ಮುಂಜಾನೆವರೆಗೂ ಸುರಿದ ಭಾರೀ ಮಳೆಗೆ ಹಲವೆಡೆ ಹಾನಿ ಸಂಭವಿಸಿದೆ. ಉಡುಪಿ, ಕಾಪು ಪರಿಸರದಲ್ಲಿ ಅತ್ಯಧಿಕ ಮಳೆಯಾಗಿದೆ. ನಗರ, ಗ್ರಾಮಾಂತರ ಭಾಗದಲ್ಲಿ ಗುಡುಗು, ಸಿಡಿಲು ಸಹಿತ ಧಾರಾಕಾರವಾಗಿ ಮಳೆ ಸುರಿದಿದೆ. ನಗರ, ಗ್ರಾಮಾಂತರ ಭಾಗದಲ್ಲಿ ತಗ್ಗು ಪ್ರದೇಶಗಳಲ್ಲಿ ಹಲವೆಡೇ ನೀರು ನಿಂತು ಕೃತಕ ನೆರೆ ಸೃಷ್ಟಿಯಾಗಿತ್ತು. ನಗರದ ಹಳೆ ಬಸ್‌ ನಿಲ್ದಾಣ ಸಮೀಪ ಆವರಣದ ಗೋಡೆ ಕುಸಿದು 3 ವಾಹನ ಸಂಪೂರ್ಣ ಜಖಂಗೊಂಡಿವೆ.

ಉಡುಪಿಗೆ ನೀರು ಪೂರೈಸುವ ಸ್ವರ್ಣಾ ನದಿಯಲ್ಲಿ ಒಳಹರಿವು ಆರಂಭಗೊಂಡಿದೆ. ನಿಟ್ಟೆ, ಕಟ್ಟಿಂಗೇರಿ, ಮಲ್ಲಾರು, ಶಿರ್ವ, ತಗ್ಗರ್ಸೆ, ಬೈಂದೂರು. ಯಳಜಿತ್‌, ಯಡ್ತರೆ, ಪಡುವರಿ, ಬೈಂದೂರು, ಮೊಳಹಳ್ಳಿ, ಅಂಪಾರು ಭಾಗದಲ್ಲಿ ವ್ಯಾಪಕ ಮಳೆ ಸುರಿದಿದ್ದು, 26ಕ್ಕೂ ಅಧಿಕ ಮನೆಗಳ ಮೇಲೆ ಮರ ಬಿದ್ದು ಹಾನಿ ಸಂಭವಿಸಿದೆ. ಶನಿವಾರ ಬೆಳಗ್ಗಿನಿಂದ ಸಂಜೆ ವರೆಗೂ ಬಿಸಿಲು-ಮೋಡ ಕವಿದ ವಾತಾವರಣದ ನಡುವೆ ಹಲವೆಡೆ ಸಣ್ಣದಾಗಿ ಮಳೆಯಾಗಿದ್ದು, ಕೃತಕ ನೆರೆ ಪ್ರಮಾಣ ತಗ್ಗಿತ್ತು.

200 ವಿದ್ಯುತ್‌ ಕಂಬಗಳಿಗೆ ಹಾನಿ
ರಾತ್ರಿ ಸುರಿದ ಗಾಳಿ ಮಳೆಯಿಂದ ಉಡುಪಿ ಜಿಲ್ಲೆಯಲ್ಲಿ 200ಕ್ಕೂ ಅಧಿಕ ವಿದ್ಯುತ್‌ ಕಂಬಗಳಿಗೆ ಮತ್ತು ವಿದ್ಯುತ್‌ ಪರಿವರ್ತಕ, 3 ಕಿ.ಮೀ. ವಿದ್ಯುತ್‌ ತಂತಿಗೆ ಹಾನಿ ಸಂಭವಿಸಿದೆ. ಮಣಿಪಾಲ, ಗುಂಡಿಬೈಲು, ದೊಡ್ಡಣಗುಡ್ಡೆ, ಮಲ್ಪೆ, ಕಾಪು ಸಹಿತ ಮೊದಲಾದ ಭಾಗದಲ್ಲಿ ರಾತ್ರಿ ಸ್ಥಗಿತಗೊಂಡಿದ್ದ ವಿದ್ಯುತ್‌ ಸಂಪರ್ಕ ಶನಿವಾರ ಬೆಳಗ್ಗೆ ಬಂದಿದೆ.

ಕೆರೆಯಂತಾದ ಪುತ್ತಿಗೆ ಸೇತುವೆ ಪರಿಸರ
ಹೆಬ್ರಿ: ಶುಕ್ರವಾರ ರಾತ್ರಿ ಸುರಿದ ಭಾರೀ ಮಳೆಗೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಹಿರಿಯಡಕದ ಪುತ್ತಿಗೆ ಸೇತುವೆ ಸುತ್ತು ಮುತ್ತ ನೀರು ನಿಂತು ಕೆರೆಯಂತೆ ಆಯಿತು.

ಪುತ್ತಿಗೆಯಲ್ಲಿ ನೂತನ ಸೇತುವೆ ನಿರ್ಮಾಣ, ರಸ್ತೆ ಕಾಮಗಾರಿಯ ವೇಳೆ ಅವೈಜ್ಞಾನಿಕ ಚರಂಡಿ ವ್ಯವಸ್ಥೆಯಿಂದಾಗಿ ನೀರು ಸರಾಗವಾಗಿ ಹರಿಯದಿರುವುದು ಕಾರಣ. ಒಂದು ಕಡೆ ಇಕ್ಕೆಲಗಳಲ್ಲಿ ಇರುವ ತಡೆಬೇಲಿ ಬೀಳುವ ಸ್ಥಿತಿಯಲ್ಲಿದೆ. ಇನ್ನೊಂದು ಕಡೆ ಸೇತುವೆ ನಿರ್ಮಾಣಕ್ಕಾಗಿ ಹೊಳೆಗೆ ತುಂಬಿಸಿರುವ ಮಣ್ಣನ್ನು ಕಾಮಗಾರಿ ಮುಗಿದ ಬಳಿಕ ಹಾಗೆಯೇ ಬಿಟ್ಟಿರುವುದರಿಂದ ಇಡೀ ಹೊಳೆಯಲ್ಲಿ ತುಂಬಿಕೊಂಡಿದೆ. ಇದೆ ರೀತಿ ಮಳೆ ಮುಂದುವರಿದರೆ ಅಪಾಯ ಖಂಡಿತ ಎಂದು ಸಾಮಾಜಿಕ ಕಾರ್ಯಕರ್ತ ಶ್ರೀಧರ ಶೆಟ್ಟಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next