Advertisement

ಜುಲೈ ಮಧ್ಯಭಾಗದಲ್ಲಿ ಮೋಡ ಬಿತ್ತನೆ

10:04 AM May 18, 2017 | Harsha Rao |

ಬೆಂಗಳೂರು: ಮೋಡ ಬಿತ್ತನೆಯಿಂದ ಮಳೆ ಬರುತ್ತದೆಯೇ ಇಲ್ಲವೇ ಎಂಬ ಕುರಿತು ಚರ್ಚೆ ನಡೆಯುತ್ತಿರುವಾಗಲೇ
ಜುಲೈ ಮಧ್ಯಭಾಗದಲ್ಲಿ ರಾಜ್ಯದಲ್ಲಿ ಮೋಡ ಬಿತ್ತನೆಗೆ ಚಾಲನೆ ನೀಡಲು ರಾಜ್ಯ ಸರ್ಕಾರ ತೀರ್ಮಾನಿಸಿದೆ.

Advertisement

ಮೋಡ ಬಿತ್ತನೆ ಯೋಜನೆ ಕುರಿತಂತೆ ಬುಧವಾರ ವಿಧಾನ ಸೌಧದಲ್ಲಿ ಸಭೆ ನಡೆಸಿದ ಬಳಿಕ ಈ ಕುರಿತು ಸುದ್ದಿಗಾರರಿಗೆ
ಮಾಹಿತಿ ನೀಡಿದ ಗ್ರಾಮೀಣಾಭಿವೃದ್ಧಿ ಸಚಿವ ಎಚ್‌.ಕೆ. ಪಾಟೀಲ್‌, ಜುಲೈ ಮಧ್ಯಭಾಗದಲ್ಲಿ ಮೋಡ ಬಿತ್ತನೆಗೆ ಚಾಲನೆ
ನೀಡಲು ತೀರ್ಮಾನಿಸಲಾಗಿದ್ದು, ಅದಕ್ಕೆ ಬೇಕಾದ ಅಗತ್ಯ ಪ್ರಕ್ರಿಯೆ ಮತ್ತು ಸಿದ್ಧತೆಗಳನ್ನು ತ್ವರಿತವಾಗಿ ಕೈಗೊಳ್ಳುವಂತೆ
ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.

ಜುಲೈ ಮಧ್ಯಭಾಗದಲ್ಲಿ ಆರಂಭವಾಗುವ ಮೋಡ ಬಿತ್ತನೆ ಕಾರ್ಯವನ್ನು 60 ದಿನಗಳ ಕಾಲ ಮುಂದುವರಿಸಲು
ಯೋಚಿಸಲಾಗಿದೆ. ಈ ಬಾರಿ ಎರಡು ಏರ್‌ಕ್ರಾಫ್ಟ್ ಹಾಗೂ ಮೂರು ರಾಡರ್‌ ನೆರವಿನೊಂದಿಗೆ ಈ ಕಾರ್ಯ
ಕೈಗೊಳ್ಳಲಾಗುತ್ತಿದ್ದು, ಅದಕ್ಕಾಗಿ ಶೀಘ್ರವೇ ಅಲ್ಪಾವಧಿ ಟೆಂಡರ್‌ ಕರೆಯಲಾಗುವುದು ಎಂದು ತಿಳಿಸಿದರು.

ಮೋಡ ಬಿತ್ತನೆ ಕಾರ್ಯಕ್ಕೆ ಸುಮಾರು 300 ಗಂಟೆಗಳ ಅವಶ್ಯಕತೆಯಿದೆ. ಮೋಡ ಸಾಂದ್ರತೆ ಹೆಚ್ಚಾಗಿರುವ
ಪ್ರದೇಶಗಳಲ್ಲಿ ಮಾತ್ರ ಬಿತ್ತನೆ ಸಾಧ್ಯ. ಈ ಹಿನ್ನೆಲೆಯಲ್ಲಿ ಮೋಡ ಸಾಂದ್ರತೆ ಹೆಚ್ಚಾಗಿರುವ ಹೈದರಾಬಾದ್‌ ಕರ್ನಾಟಕ,
ಮಧ್ಯ ಕರ್ನಾಟಕ ಹಾಗೂ ಮೈಸೂರು ಕರ್ನಾಟಕದ ತಲಾ ಒಂದು ಭಾಗದಲ್ಲಿ ಬಿತ್ತನೆ ನಡೆಸಲು ಉದ್ದೇಶಿಸಲಾಗಿದೆ.
ಅದಕ್ಕೆ ಅನುಕೂಲವಾಗುವಂತೆ ಶಹಾಪುರ, ಗದಗ ಮತ್ತು ಬೆಂಗಳೂರು ಭಾಗದಲ್ಲಿ ರಡಾರ್‌ ಹಾಕಲು ತಜ್ಞರು ಸಲಹೆ
ನೀಡಿದ್ದಾರೆ. ಅದರಂತೆ ಮೋಡ ಬಿತ್ತನೆಗೆ ಅತ್ಯಾಧುನಿಕ ತಂತ್ರಜ್ಞಾನ ಬಳಸುವಂತೆ ಟೆಂಡರ್‌ ಪಡೆಯುವ ಸಂಸ್ಥೆಗಳಿಗೆ
ಸೂಚಿಸಲಾಗುವುದು ಎಂದು ಹೇಳಿದರು.

ಮೋಡ ಬಿತ್ತನೆಗಾಗಿ ಬಜೆಟ್‌ನಲ್ಲಿ 30 ಕೋಟಿ ರೂ. ಅನುದಾನ ಒದಗಿಸಲಾಗಿದೆ. ಟೆಂಡರ್‌ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಎಷ್ಟು ವೆಚ್ಚವಾಗುತ್ತದೆಂಬ ಖಚಿತ ಮಾಹಿತಿ ಲಭ್ಯವಾಗಲಿದೆ. ಮೋಡ ಬಿತ್ತನೆ ಮಾಡಬೇಕಾದರೆ ಕೇಂದ್ರ ಸರ್ಕಾರದ ಅನುಮತಿ ಬೇಕಿದ್ದು, ಇದನ್ನು ಟೆಂಡರ್‌ ಪಡೆದ ಸಂಸ್ಥೆಯೇ ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ಸಭೆಯಲ್ಲಿ ಗ್ರಾಮೀಣಾಭಿವೃದ್ಧಿ ಇಲಾಖೆ ಪ್ರಧಾನ ಕಾರ್ಯದರ್ಶಿ ಸೇರಿ ಹಲವು ತಜ್ಞರು ಭಾಗವಹಿಸಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next