ಬೆಂಗಳೂರು: ಬಟ್ಟೆ ವ್ಯಾಪಾರಿಯೊಬ್ಬರನ್ನು ಅವರ ಮನೆಯ ಸ್ನಾನದ ಕೊಣೆಯಲ್ಲಿ ಚಾಕುವಿನಿಂದ ಇರಿದು ಕೊಂದು, ಬೆಂಕಿ ಹಚ್ಚಿ ಸುಟ್ಟ ಘಟನೆ ರಾಜಾಜಿನಗರದ ಬಾಷ್ಯಂ ವೃತ್ತದ ಬಳಿ ಭಾನುವಾರ ಬೆಳಗ್ಗೆ ನಡೆದಿದೆ. ರಾಜಾಜಿನಗರ ನಿವಾಸಿ ಜೈಕುಮಾರ್ (43) ಕೊಲೆಯಾದವರು. ಈ ಸಂಬಂಧ ಜೈಕುಮಾರ್ ಅವರ ಅಪ್ರಾಪ್ತ ಪುತ್ರಿ ಮತ್ತು ಆಕೆಯ ಸ್ನೇಹಿತನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಪಾಂಡಿಚೇರಿ ಮೂಲದ ಜೈಕುಮಾರ್ ಬಹಳ ವರ್ಷಗಳ ಹಿಂದೆಯೇ ಬೆಂಗಳೂರಿಗೆ ಬಂದು, ರಾಜಾಜಿನಗರದ ಬಾಷ್ಯಂ ವೃತ್ತದ ಬಳಿಯ ಬಾಡಿಗೆ ಮನೆಯಲ್ಲಿ ವಾಸವಾಗಿದ್ದಾರೆ. ರಾಜಾಜಿನಗರದಲ್ಲಿಯೇ ಬಟ್ಟೆ ಅಂಗಡಿ ನಡೆಸುತ್ತಿದ್ದು, ಹತ್ತಾರು ಮಂದಿ ಅವರ ಬಳಿ ಕೆಲಸ ಮಾಡುತ್ತಿದ್ದಾರೆ. ಜೈಕುಮಾರ್ ದಂಪತಿಗೆ ಒಬ್ಬ ಪುತ್ರ ಮತ್ತು ಒಬ್ಬ ಪುತ್ರಿ ಇದ್ದಾರೆ. ಕಾರ್ಯಕ್ರಮ ನಿಮಿತ್ತ ಜೈಕುಮಾರ್ ಪತ್ನಿ ಮತ್ತು ಪುತ್ರ ಹಾಗೂ ಕೆಲ ಸಂಬಂಧಿಕರು ಶನಿವಾರ ಮುಂಜಾನೆಯೇ ಪಾಂಡಿಚೇರಿಗೆ ಹೋಗಿದ್ದರು. ಮನೆಯಲ್ಲಿ ಜೈಕುಮಾರ್ ಮತ್ತು ಅವರ ಪುತ್ರಿ ಮಾತ್ರ ಇದ್ದರು ಎಂದು ಪೊಲೀಸರು ಹೇಳಿದರು.
ಭಾನುವಾರ ಬೆಳಗ್ಗೆ ಜೈಕುಮಾರ್ ಪುತ್ರಿ ತಿಂಡಿ ತಿನ್ನಲು ಮನೆ ಸಮೀಪದ ಸಂಬಂಧಿಕರ ಮನೆಗೆ ಹೋಗಿ, ವಾಪಸ್ ಮನೆಗೆ ಬಂದಿದ್ದಾರೆ. ನಂತರ ಬೆಡ್‌ರೂಂ ಕಡೆ ಹೋದಾಗ ತಂದೆ ಜೈಕುಮಾರ್‌ಗೆ ಬೆಂಕಿ ಹೊತ್ತಿಕೊಂಡಿರುವುದನ್ನು ಗಮನಿಸಿ ಜೋರಾಗಿ ಕೂಗಿಕೊಂಡಿದ್ದಾರೆ. ಆಕೆಯ ಕೂಗಾಟ ಕೇಳಿದ ಸ್ಥಳೀಯರು ಕೂಡಲೇ ಮನೆಗೆ ಬಂದು ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಧಾವಿಸಿದ ಸಿಬ್ಬಂದಿ ಬೆಂಕಿ ನಿಂದಿಸಿದ್ದಾರೆ. ಅಷ್ಟರಲ್ಲಿ ಜೈಕುಮಾರ್ ಮೃತಪಟ್ಟಿದ್ದರು. ವಿಚಾರ ತಿಳಿದು ಸ್ಥಳಕ್ಕೆ ಧಾವಿಸಿದ ರಾಜಾಜಿನಗರ ಪೊಲೀಸರು, ಸ್ಥಳ ಪರಿಶೀಲನೆ ನಡೆಸಿ, ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.
ಪುತ್ರಿ, ಸ್ನೇಹಿತನಿಂದಲೇ ಕೊಲೆ?: ಪೊಲೀಸ್ ಮೂಲಗಳ ಪ್ರಕಾರ ಜೈಕುಮಾರ್ ಅವರ ಪುತ್ರಿ ಖಾಸಗಿ ಶಾಲೆಯಲ್ಲಿ 9ನೇ ತರಗತಿ ವ್ಯಾಸಂಗ ಮಾಡುತ್ತಿದ್ದು, ಆಕೆಗೆ ಪವನ್ ಎಂಬಾತನ ಜತೆ ಸ್ನೇಹ ಇತ್ತು. ಹೀಗಾಗಿ ಶನಿವಾರ ರಾತ್ರಿ ಆಕೆ ಮತ್ತು ಆಕೆಯ ಸ್ನೇಹಿತ ಹಾಗೂ ಇತರರ ಜತೆ ಮನೆಯಲ್ಲಿ ಪಾರ್ಟಿ ಮಾಡಿದ್ದಾರೆ. ಅದನ್ನು ಕಂಡ ಜೈಕುಮಾರ್ ಪುತ್ರಿಯನ್ನು ಥಳಿಸಿದ್ದಾರೆ ಎಂಬ ಮಾಹಿತಿಯೂ ಲಭ್ಯವಾಗಿದೆ.
ಅದೇ ವಿಚಾರಕ್ಕೆ ಆಕೆ, ತನ್ನ ಸ್ನೇಹಿತನ ಜತೆ ಸೇರಿ ತಂದೆಯ ಕುತ್ತಿಗೆ ಮತ್ತು ಕೈಗೆ ಚಾಕುವಿನಿಂದ ಇರಿದು ಕೊಲೆಗೈದು, ಬಳಿಕ ಭಾನುವಾರ ಬೆಳಗ್ಗೆ ಬೆಂಕಿ ಹಚ್ಚಿರುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ. ಹೀಗಾಗಿ ಬಲಕಿ ಮತ್ತು ಆಕೆಯ ಸ್ನೇಹಿತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಸ್ನಾನದ ಕೊಣೆಗೆ ಹೊಂದಿಕೊಂಡಂತೆ ಇರುವ ಬೆಡ್‌ರೂಂನಲ್ಲಿ ಮೂರು ಬಾಟಲಿಗಳು ಸಿಕ್ಕಿದ್ದು, ಅವುಗಳನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದರು.
ಜೈಕುಮಾರ್ ಅವರ ಪತ್ನಿ ಸಂಬಂಧಿಕರ ಜತೆ ಪಾಂಡಿಚೇರಿಗೆ ಹೋಗಿದ್ದಾರೆ. ಈ ವೇಳೆ ಮನೆಯಲ್ಲಿ ಜೈಕುಮಾರ್ ಮತ್ತು ಅವರ ಪುತ್ರಿ ಮಾತ್ರ ಇದ್ದರು. ಜೈಕುಮಾರ್ ಅವರ ದೇಹದ ಮೇಲೆ ಚಾಕುವಿನಿಂದ ಇರಿದ ಗಾಯದ ಗುರುತುಗಳು ಪತ್ತೆಯಾಗಿದ್ದು, ಮನೆಯ ಬೆಡ್‌ರೂಂ ಮತ್ತು ಕೆಳ ಮನೆಯಲ್ಲಿ ರಕ್ತದ ಕಲೆಗಳು ಕಂಡು ಬಂದಿವೆ. ಜತೆಗೆ ಇತರೆ ಮಹತ್ವದ ಸಾಕ್ಷ್ಯಗಳು ಪತ್ತೆಯಾಗಿವೆ. ಹೀಗಾಗಿ ಘಟನಾ ಸ್ಥಳದಲ್ಲಿ ಸಿಕ್ಕ ಸಾಕ್ಷ್ಯಗಳನ್ನು ಗಮನಿಸಿದರೆ ಪರಿಚಿತರೇ ಕೊಲೆಗೈದಿರುವ ಸಾಧ್ಯತೆಯಿದೆ. ಈ ಸಂಬಂಧ ಜೈಕುಮಾರ್ ಅವರ ಪುತ್ರಿಯಿಂದ ಘಟನೆ ಬಗ್ಗೆ ಮಾಹಿತಿ ಪಡೆಯಲಾಗುತ್ತಿದೆ.
-ಎನ್.ಶಶಿಕುಮಾರ್, ಉತ್ತರ ವಿಭಾಗದ ಡಿಸಿಪಿ