Advertisement
ಪಾಂಡಿ ಸರಕಾರಿ ಹೈಯರ್ ಸೆಕೆಂಡರಿ ಶಾಲೆ ಕೆಲವು ವರ್ಷಗಳ ಹಿಂದೆ ಅತೀ ಹಿಂದುಳಿದ ಶಾಲೆಯಾಗಿತ್ತು. ಈ ಶಾಲೆಯಲ್ಲಿ ಶೇಕಡಾ 90ರಷ್ಟು ಪರಿಶಿಷ್ಟ ಜಾತಿ ಪರಿಶಿಷ್ಟ ವರ್ಗಕ್ಕೊಳಪಟ್ಟ ಬಡ ವಿದ್ಯಾರ್ಥಿಗಳು ವಿದ್ಯಾರ್ಜನೆಗೈಯ್ಯುತ್ತಿದ್ದಾರೆ. ಆದರೆ ಈಗ ಶಾಲಾ ಅಧ್ಯಾಪಕರ, ಪೋಷಕರು, ಹೆತ್ತವರ, ರಕ್ಷಕರ ಕಠಿನ ಪರಿಶ್ರಮದಿಂದ ವಿದ್ಯಾರ್ಥಿಗಳಲ್ಲಿ ಪಠ್ಯದ ಜತೆಯಲ್ಲಿ ಪಠ್ಯೇತರ ಚಟುವಟಿಕೆಗಳ ಕುರಿತು ಹೆಚ್ಚಿನ ಅರಿವು ಮೂಡಿಸುವುದರ ಮೂಲಕ ಈ ಶಾಲೆ ಇತರ ಶಾಲೆಗಳಿಗಿಂತ ಜಿಲ್ಲೆಯಲ್ಲಿಯೇ ವಿಭಿನ್ನ ಶೈಲಿಯ ಮಾದರಿ ಶಾಲೆಯಾಗಿ ಮಾರ್ಪಾಡುಗೊಂಡಿದೆ.
ಈ ಶಾಲೆಯ ರಕ್ಷಕರು ಹಾಗೂ ಮಕ್ಕಳು ಸೇರಿಕೊಂಡು ಬಟ್ಟೆ ಚೀಲ ನಿರ್ಮಾಣ ಘಟಕ ಆರಂಭಿಸಿದ್ದಾರೆ. ಬಟ್ಟೆ ಚೀಲ ನಿರ್ಮಾಣಕ್ಕಾಗಿ ಬಟ್ಟೆಬರೆಗಳನ್ನು ಶಾಲಾ ಅಧ್ಯಾಪಕರು ತಲುಪಿಸುತ್ತಾರೆ. ಪ್ಲಾಸ್ಟಿಕ್ ವಿಮುಕ್ತ ಗ್ರಾಮ ಎಂಬ ಗುರಿಯೊಂದಿಗೆ ಶಾಲಾ ಕ್ಯಾಂಪಸ್‌ನಲ್ಲಿಯೇ ಬಟ್ಟೆ ಚೀಲ ಘಟಕ ಆರಂಭಿಸಲಾಗಿದೆ. ಈ ಘಟಕದಲ್ಲಿ ಮಕ್ಕಳು ಹಾಗೂ ಹೆತ್ತವರು ಸೇರಿಕೊಂಡು ಬಟ್ಟೆಚೀಲ ತಯಾರಿಸುತ್ತಾರೆ.
Related Articles
Advertisement
ಕಳೆದ ಉಪಜಿಲ್ಲಾ ವಿಜ್ಞಾನ ಮೇಳದಲ್ಲಿ ಮಕ್ಕಳು ನಿರ್ಮಿಸಿದ ಬಟ್ಟೆ ಚೀಲಗಳನ್ನು ಸ್ಟಾಲ್‌ಗಳಿಗೂ ಹಾಗೂ ಇತರ ಸಾಮಗ್ರಿಗಳನ್ನು ಕೊಂಡೊಯ್ಯುವುದಕ್ಕೂ ವಿತರಿಸಲಾಗಿದೆ. ಈ ಘಟಕದಲ್ಲಿ ಈಗಾಗಲೇ 20 ಮಕ್ಕಳು ತರಬೇತಿ ಪಡೆದಿದ್ದು, ಇವರಲ್ಲಿ 10 ಮಕ್ಕಳು ಸ್ವಯಂ ಬಟ್ಟೆ ತುಂಡರಿಸಿ ಹೊಲಿಗೆ ಮಾಡಿ ಚೀಲ ತಯಾರಿಸುತ್ತಿದ್ದಾರೆ.
ಇತ್ತೀಚೆಗೆ ನಡೆದ ಉಪಜಿಲ್ಲಾ ವಿಜ್ಞಾನ ಮೇಳದ ಸಂದರ್ಭದಲ್ಲಿ ಮಕ್ಕಳು ತಯಾರಿಸಿದ ಬಟ್ಟೆ ಚೀಲವನ್ನು ಶಿಕ್ಷಣಾಧಿ ಕಾರಿಯವರಿಗೆ ಹಸ್ತಾಂತರಿಸಲಾಗಿದೆ.
ವಿದ್ಯಾರ್ಥಿಗಳ ಹರ ಸಾಹಸ
ಸಮೀಪದ ಪೇಟೆಯಿಂದ ಈ ಶಾಲೆಗೆ ವಿದ್ಯಾರ್ಥಿಗಳು ಸುಮಾರು ಕಿಲೋಮೀಟರ್‌ಗಳಷ್ಟು ದೂರದಿಂದ ನಡೆದುಕೊಂಡೇ ಬರಬೇಕಾಗಿದೆ. ಇಲ್ಲಿಗೆ ಕೆಲವು ಖಾಸಗಿ ವಾಹನಗಳು ಮಾತ್ರ ಸಂಚರಿಸುತ್ತಿದ್ದು, ಹೆಚ್ಚಿನ ವಾಹನ ಸೌಕರ್ಯವೂ ಇಲ್ಲ. ಕೇವಲ ಎರಡು ಬಸ್ ಮಾತ್ರ ಈಗ ಶಾಲಾ ಪಕ್ಕದಲ್ಲಿ ಸಂಚಾರ ನಡೆಸುತ್ತಿವೆೆ. ಆದರೆ ಅದು ಶಾಲಾ ತರಗತಿಗೆ ಒದಗುವ ರೀತಿಯಲ್ಲಿ ಬಸ್ ಸಮಯ ನಿಗದಿಯಿಲ್ಲ. ಆದುದರಿಂದ ವಿದ್ಯಾರ್ಥಿಗಳು ಇಲ್ಲಿ ವಿದ್ಯಾರ್ಜನೆ ಮಾಡಲು ನಡೆದುಕೊಂಡೇ ತೆರಳಬೇಕಾಗಿದೆ. ಎಲ್ಲರಿಗಿಲ್ಲ ಸಾರಿಗೆ ವ್ಯವಸ್ಥೆ
ಅತೀ ಹಿಂದುಳಿದಿರುವ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗಕ್ಕೊಳಪಟ್ಟ ಬಡ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಜನೆಗೈಯುತ್ತಿದ್ದಾರೆ. ವಿದ್ಯಾರ್ಥಿ ಗಳ ಸಾರಿಗೆ ಸಂಕಷ್ಟ ಮನಗಂಡು ರಕ್ಷಕರ ಶಿಕ್ಷಕರ ನೇತೃತ್ವದಲ್ಲಿ ಈಗ ವಿದ್ಯಾರ್ಥಿಗಳನ್ನು ಬೆಳಗ್ಗೆ ಮತ್ತು ಸಂಜೆಯ ವೇಳೆಯಲ್ಲಿ ಕರೆದುಕೊಂಡು ಹೋಗಲು ರಿಕ್ಷಾ, ಜೀಪುಗಳ ವ್ಯವಸ್ಥೆ ಮಾಡಿದ್ದಾರೆ. ಆದರೆ ಎಲ್ಲ ವಿದ್ಯಾರ್ಥಿಗಳಿಗೆ ಇದರ ಪ್ರಯೋಜನ ಲಭಿಸುತ್ತಿಲ್ಲ. ಸಮ ಪಂಕ್ತಿ ಭೋಜನ
ಸಮ ಪಂಕ್ತಿ ಭೋಜನ ಈ ಶಾಲೆಯ ವೈಶಿಷ್ಟéವಾಗಿದೆ. ಶಾಲಾ ಮಕ್ಕಳು ತಮ್ಮ ಮನೆಯಲ್ಲಿಯೇ ತಯಾರಿಸಿದ ಆಹಾರ ಪದಾರ್ಥಗಳನ್ನು ತಂದು ಪ್ಲಾಸ್ಟಿಕ್‌ನ ಯಾವುದೇ ವಸ್ತುಗಳನ್ನು ಬಳಸದೆಯೇ ಮನೆ ಪರಿಸರದಲ್ಲಿ ಬೆಳೆಯುವಂತಹ ಮುಂಡಿಎಲೆ, ಕೆಸುವಿನ ಎಲೆ, ಹಳಸಿನ ಎಲೆ, ಸಾಗುವಾನಿ ಎಲೆ, ಅಡಿಕೆ ಮರದ ಹಾಳೆ, ಕೂಂಬಾಳೆ, ಮಣ್ಣಿನ ಪಾತ್ರೆ, ಗೆರಟೆಗಳನ್ನು ಬಳಸಿ ಶಾಲೆಗೆ ತರುತ್ತಾರೆ. ಈ ಆಹಾರ ಪದಾರ್ಥಗಳೊಂದಿಗೆ ಒಟ್ಟಿಗೆ ಕುಳಿತುಕೊಂಡು ಬಡಿಸಿ ಸಮ ಪಂಕ್ತಿ ಭೋಜನ ಸೇವಿಸುವುದು ಇಲ್ಲಿನ ವೈಶಿಷ್ಟéವಾಗಿದೆ. ಎಲ್ಲ ಅನ್ನ, ಪದಾರ್ಥಗಳನ್ನು ಬಾಳೆಯಲ್ಲಿ ಬಡಿಸಿ ಒಟ್ಟಿಗೆ ಕುಳಿತುಕೊಂಡು ಸಹಭೋಜನ ಮಾಡುತ್ತಾರೆ. ಇದರಿಂದ ಮೇಲು-ಕೀಳು ಎಂಬ ಭಾವನೆಯನ್ನು ದೂರವಾಗಿಸುವ ನಿಟ್ಟಿನಲ್ಲಿ ಈ ಯೋಜನೆ ಹಮ್ಮಿಕೊಳ್ಳಲಾಗಿದೆ ಎಂದು ಅಧ್ಯಾಪಕರು ಹೇಳುತ್ತಾರೆ. ಕನ್ನಡ – ಮಲಯಾಳ ತರಗತಿ
ಪಾಂಡಿ ಸರಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಒಂದನೇ ತರಗತಿಯಿಂದ ಹನ್ನೆರಡನೇ ತರಗತಿಯ ತನಕ ಶಿಕ್ಷಣ ನೀಡಲಾಗುತ್ತಿದೆ. ಇದರಲ್ಲಿ ಒಂದನೇ ತರಗತಿಯಿಂದ ಹತ್ತನೇ ತರಗತಿಯ ವರೆಗೆ ಕನ್ನಡ, ಮಲಯಾಳ ಮಾದ್ಯಮ ತರಗತಿ ನಡೆಯುತ್ತಿದೆ. ಈ ಶಾಲೆಯಲ್ಲಿ ಹೆಚ್ಚಿನ ಅಧ್ಯಾಪಕರು ತಾತ್ಕಾಲಿಕವಾಗಿ ದಿನಗೂಲಿ ವೇತನದಲ್ಲಿ ಕರ್ತವ್ಯ ನಿರ್ವಹಿಸುವವರು ಆಗಿದ್ದಾರೆ. ಮುಂದಿನ ಹೆಜ್ಜೆ: ಪುನರ್ ಉಪಯೋಗ ವಸ್ತು
ಉಪಯೋಗ ಶೂನ್ಯವಾದ ಅಂದರೆ ಹಳೆಯ ಬಟ್ಟೆ ಗಳಾದ ಪ್ಯಾಂಟ್, ಶರ್ಟ್ ಹಾಗೂ ಹಳೆಯ ಉಪಯೋಗ ಶೂನ್ಯವಾದ ಬಟ್ಟೆಗಳಿಂದ ತಯಾರಿಸ ಬಹುದಾದ ಮ್ಯಾಟ್, ಡಸ್ಟರ್, ಬ್ಯಾಗ್, ಟೋಪಿ, ನೆಲ ಒರೆಸುವ ಯಂತ್ರಕ್ಕೆ ಬಳಸುವ ಬಟ್ಟೆ ಮೊದಲಾದವುಗಳನ್ನು ನಿರ್ಮಿ ಸುವುದು ಮುಂದಿನ ಹೆಜ್ಜೆಯಾಗಿದೆ. ಈಗಾಗಲೇ ಅದರ ತಯಾರಿ ಬಗ್ಗೆ ಆಲೋಚಿಸಲಾಗುತ್ತಿದೆ ಎಂದು ಶಾಲಾ ಅಧ್ಯಾಪಕರು ತಿಳಿಸಿದ್ದಾರೆ.