ಮೈಸೂರು: ಜಿಲ್ಲೆಯಲ್ಲಿ ಸಾಕಷ್ಟು ಸದ್ದು ಮಾಡಿದ್ದ ಬಟ್ಟೆ ಬ್ಯಾಗ್‌ಗಳ ಖರೀದಿ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಗೆ ಆದೇಶಿಸಲಾಗಿದೆ. ಜಿಲ್ಲೆಯ ವ್ಯಾಪ್ತಿಯಲ್ಲಿ ಪರಿಸರ ಸ್ನೇಹಿ ಬಟ್ಟೆ ಬ್ಯಾಗ್ ಗಳ ಸರಬರಾಜು ಸಂಬಂಧ ನಡೆದಿರುವ ಅಕ್ರಮ ಕುರಿತು ತನಿಖೆ ನಡೆಸಿ ಕಾನೂನು ಕ್ರಮ ಕೈಗೊಳ್ಳುವಂತೆ ಪೌರಾಡಳಿತ ನಿರ್ದೇಶನಾಲಯವು ಜಿಲ್ಲಾಧಿಕಾರಿಗೆ ನಿರ್ದೇಶನ ನೀಡಿದೆ.
ಈ ಪ್ರಕರಣದಲ್ಲಿ ಅವ್ಯವಹಾರ ನಡೆದಿದೆ ಎಂದು ಶಾಸಕ ಸಾ.ರಾ.ಮಹೇಶ್ ಆರೋಪಿಸಿದ್ದರು. ಈ ಕುರಿತು 2021ರ ಸೆಪ್ಟೆಂಬರ್ 3ರಂದು ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ತನಿಖೆಗೆ ಆದೇಶ ಹೊರ ಬಿದ್ದಿದೆ. ಆದ್ಯತೆ ಮೇಲೆ ತನಿಖೆ ನಡೆಸಿ ಅಭಿಪ್ರಾಯ ಸಹಿತ ವರದಿ ನೀಡುವಂತೆ ಸೂಚಿಸಲಾಗಿದೆ.
ನಗರ ಮತ್ತು ಸ್ಥಳೀಯ ಸಂಸ್ಥೆಗಳ ಮೂಲಕ ಬ್ಯಾಗ್ ಖರೀದಿಸುವ ಸಂಬಂಧ ಜಿಲ್ಲಾಧಿಕಾರಿಯು 2021ರ ಏ.9ರಂದು ಕಾರ್ಯಾದೇಶ ಹೊರಡಿಸಿದ್ದರು. ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮದಿಂದ ಮೈಸೂರು ಜಿಲ್ಲಾ ವ್ಯಾಪ್ತಿಗೆ ಸರಬರಾಜು ಮಾಡುವ ಸಂಬಂಧ ವಿನಾಯಿತಿಯಡಿಯಲ್ಲಿ ದರ ಪಟ್ಟಿ ಪಡೆದಿದ್ದಾರೆ. ಅದರಂತೆ 5 ಕೆ.ಜಿ ಮತ್ತು 10 ಕೆ.ಜಿ ಸಾಮರ್ಥ್ಯದ ಬಟ್ಟೆ ಬ್ಯಾಗ್‌ಗೆ ಜಿಎಸ್‌ಟಿ ಸೇರಿ 52 ರೂ.ಗೆ ನಿಗದಿಪಡಿಸಿ ಒಟ್ಟು 14.71 ಲಕ್ಷ ಬ್ಯಾಗ್ ಖರೀದಿಸಲು ಅನುಮೋದನೆ ನೀಡಿರುವುದು ಕಾರ್ಯಾದೇಶದಲ್ಲಿದೆ. ಬ್ಯಾಗ್ ವಿತರಣೆ ಸಂಬಂಧ ಮೈಸೂರು ಮಹಾನಗರ ಪಾಲಿಕೆ, ಪುರಸಭೆಗಳ ಸಾಮಾನ್ಯ ಸಭೆಯಲ್ಲಿ ಯಾವುದೇ ಅನುಮೋದನೆ ಪಡೆದಿರುವುದಿಲ್ಲ ಎಂದು ಈಗಿನ ಜಿಲ್ಲಾಧಿಕಾರಿಗೆ ಬರೆದಿರುವ ಪತ್ರದಲ್ಲಿ ನಮೂದಿಸಲಾಗಿದೆ.
ನಿಗಮದವರು ಸರಬರಾಜು ಮಾಡಿರುವ ಬಟ್ಟೆ ಬ್ಯಾಗ್‌ಗಳಷ್ಟೇ ಗುಣಮಟ್ಟ ಮತ್ತು ಗಾತ್ರ ಹೊಂದಿರುವ ಬ್ಯಾಗ್‌ಗಳು ಮುಕ್ತ ಮಾರುಕಟ್ಟೆಯಲ್ಲಿ ಜಿಎಸ್‌ಟಿ ಸೇರಿ 10ರಿಂದ 13 ರೂ. ದರಕ್ಕೆ ಮಾರುಕಟ್ಟೆಯಲ್ಲಿ ಲಭ್ಯ ಇದೆ. ಆದರೆ, ಈ ಪ್ರಕರಣದಲ್ಲಿ 52 ರೂ. ನಿಗದಿಪಡಿಸಿ ಅನುಮೋದನೆ ನೀಡಿ ಸಾರ್ವಜನಿಕರ ತೆರಿಗೆ ಹಣ ಪೋಲು ಮಾಡಲಾಗಿದೆ. ಬ್ಯಾಗ್‌ಗಳನ್ನು ನಿಗಮದಿಂದಲೇ ತಯಾರಿಸಿ ಸರಬರಾಜು ಮಾಡುವ ಬದಲು ಮಧ್ಯವರ್ತಿಯಿಂದ ಬ್ಯಾಗ್ ಖರೀದಿಸಿ ಸರಬರಾಜು ಮಾಡಿರುತ್ತಾರೆ. ಈ ಸಂಬಂಧ ಸಂಪೂರ್ಣ ಪ್ರಕ್ರಿಯೆಯನ್ನು ತನಿಖೆ ನಡೆಸಿ, ಕಾರ್ಯಾದೇಶ ನೀಡಿದ್ದ ಜಿಲ್ಲಾಕಾರಿ ಹಾಗೂ ಸಂಬಂಧಪಟ್ಟವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸಾ.ರಾ.ಮಹೇಶ್ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ ಎಂದು ಪೌರಾಡಳಿತ ನಿರ್ದೇಶನಾಲಯದ ನಿರ್ದೇಶಕರು ಪತ್ರದಲ್ಲಿ ಉಲ್ಲೇಖೀಸಿದ್ದಾರೆ. ಈ ವಿಷಯವಾಗಿ ಸಾ.ರಾ.ಮಹೇಶ್ ಮತ್ತು ಹಿಂದಿನ ಜಿಲ್ಲಾಧಿಕಾರಿಯಾಗಿದ್ದ ರೋಹಿಣಿ ಸಿಂಧೂರಿ ನಡುವೆ ಆರೋಪ-ಪ್ರತ್ಯಾರೋಪ ನಡೆಯುವ ರಂಪಾಟವೇ ನಡೆದಿತ್ತು.