Advertisement

ಕನ್ನಡ ಮನಸ್ಸುಗಳ ಬೆಸೆಯುವಲ್ಲಿ ಯಶಕಂಡ ಆಳ್ವಾಸ್‌ ನುಡಿಜಾತ್ರೆ

09:57 AM Nov 19, 2018 | Team Udayavani |

ವಿದ್ಯಾಗಿರಿ (ಮೂಡಬಿದಿರೆ): ಸಾಹಿತ್ಯ ಹಾಗೂ ಸಾಂಸ್ಕೃತಿಕ ಸಂಭ್ರಮದೊಂದಿಗೆ ಮೂರು ದಿನಗಳಿಂದ ವಿದ್ಯಾಗಿರಿಯಲ್ಲಿ ನಡೆದ ಕನ್ನಡದ ಮನಸುಗಳನ್ನು ಬೆಸೆದ ಆಳ್ವಾಸ್‌ ನುಡಿಸಿರಿ ರವಿವಾರ ಸಮಾಪನ ಕಂಡಿದೆ. ಡಾ| ಎಂ. ಮೋಹನ ಆಳ್ವ ನೇತೃತ್ವದಲ್ಲಿ ನಡೆದ ಈ ಬಾರಿಯ ನುಡಿಸಿರಿ ಲಕ್ಷಕ್ಕೂ ಮಿಕ್ಕಿದ ಕನ್ನಡಪ್ರೇಮಿಗಳ ಮನ ತಣಿಸಿತು. ಕನ್ನಡದ ಉಸಿರಿನೊಂದಿಗೆ ಪಡಿಮೂಡಿದ ಅಕ್ಷರ ಜಾತ್ರೆ ಕನ್ನಡತನವನ್ನು ಜಗದೆಲ್ಲೆಡೆ ಜಾಗೃತಗೊಳಿಸುವ ವಿನೂತನ ಪ್ರಯತ್ನಕ್ಕೆ ಸಾಕ್ಷಿಯಾಯಿತು.

Advertisement

ರಜಾ ದಿನವಾದ್ದರಿಂದ ರವಿವಾರ ಬೆಳಗ್ಗಿನಿಂದಲೇ ಭಾರೀ ಸಂಖ್ಯೆಯಲ್ಲಿ ಜನರು ಆಗಮಿಸುತ್ತಿದ್ದರು. ವಿದ್ಯಾಗಿರಿಯು ಸಾಹಿತ್ಯ-ಸಂಸ್ಕೃತಿಯ ಚಿಂತನ-ಮಂಥನಕ್ಕೆ ಸಾಕ್ಷಿಯಾಯಿತು. ಸೆಲ್ಫಿ ಕ್ರೇಜ್‌ ಜೋರಾಗಿತ್ತು.ಕೃಷಿ ಸಿರಿ-ಪುಸ್ತಕ ಪ್ರದರ್ಶನ-ಮಳಿಗೆಗಳಲ್ಲಿ ಜನವೋ ಜನ. ಸಂಜೆಯಾಗುತ್ತಲೇ ಜನರ ಸಂಗಮ ಮತ್ತಷ್ಟು ಅಧಿಕಗೊಂಡಿತು.

ಸಂಜೆಯಾಗುತ್ತಿರುವಂತೆ ರಾಜ್ಯದ ಬೇರೆ ಬೇರೆ ಭಾಗಗಳಿಂದ ಆಗಮಿಸಿದ್ದ ಸಾಹಿತ್ಯಾಭಿಮಾನಿಗಳು ಬ್ಯಾಗ್‌ -ಸಾಮಗ್ರಿಗಳ ಸಹಿತ ನುಡಿಸಿರಿಯ ಅದ್ಭುತ ಕ್ಷಣಗಳನ್ನು ಮೆಲುಕು ಹಾಕುತ್ತ ತಮ್ಮೂರಿಗೆ ಪ್ರಯಾಣ ಬೆಳೆಸಿದರು. ‘ಮುಂದಿನ ವರ್ಷ ಮತ್ತೆ ನುಡಿಸಿರಿಯಲಿ ಸಿಗೋಣ’ ಎಂದು ಕೆಲವು ಆತ್ಮೀಯರು ಮಾತಾಡಿಕೊಂಡು ಬಸ್‌ ಹತ್ತಿದರು. ರಾತ್ರಿಯಾಗುತ್ತಿದ್ದಂತೆ ದೂರದ ಊರಿನ ಕೆಲವರು ಪ್ರಯಾಣ ಬೆಳೆಸಿದರೆ, ಉಳಿದವರು ಸೋಮವಾರ ಬೆಳಗ್ಗೆ ತೆರಳಲಿದ್ದಾರೆ.

‘ಕರ್ನಾಟಕ ದರ್ಶನ-ಬಹುರೂಪಿ ಆಯಾಮಗಳು’ ಎಂಬ ಆಶಯದೊಂದಿಗೆ ಈ ಬಾರಿಯ ಸಮ್ಮೇಳನ ಲಕ್ಷಕ್ಕೂ ಮಿಗಿಲಾದ ಕನ್ನಡದ ಮನಸ್ಸುಗಳ ಸಮ್ಮಿಲನದೊಂದಿಗೆ ನೆರವೇರಿತು. ಮೂರೂ ದಿನ ಜನಜಾತ್ರೆಯೇ ತುಂಬಿದ್ದರೂ ಒಂದಿನಿತೂ ಲೋಪವಾಗದಂತೆ, ಯಾರ ಮನಸ್ಸಿಗೂ ನೋವಾಗದಂತೆ ಅತ್ಯಂತ ಎಚ್ಚರಿಕೆಯಿಂದ ಸಮ್ಮೇಳನ ಸಂಪನ್ನವಾಯಿತು.

ಸಾಹಿತ್ಯ ಸಮ್ಮೇಳನಗಳೆಂದರೆ ಒಂದಷ್ಟು ಉಪನ್ಯಾಸ, ಸಮ್ಮಾನ, ಪುಸ್ತಕ ಪ್ರದರ್ಶನ, ಊಟೋಪಚಾರದ ಗದ್ದಲ, ಕಾರ್ಯಗತವಾಗ(ಲಾರ)ದ ನಿರ್ಣಯಗಳೊಂದಿಗೆ ಮುಗಿದು ಹೋಗುವ ಉತ್ಸವಗಳೆಂಬ ಭಾವನೆ ಸಹಜವಾಗಿ ಕೇಳಿಬರುತ್ತದೆ. ಆದರೆ ಅದಕ್ಕೂ ಮಿಗಿಲಾಗಿ ಸಾಹಿತ್ಯ ಸಮ್ಮೇಳನವೆಂದರೆ ಅದು ‘ಅಕ್ಷರ ಜಾತ್ರೆ’ ಮಾದರಿಯಲ್ಲಿ ಸಂಪೂರ್ಣ ತೊಡಗಿಸಿಕೊಳ್ಳುವ ಪರಿಧಿಯಲ್ಲಿ ಆಗಬೇಕು ಎಂಬ ತುಡಿತದೊಂದಿಗೆ ಕಳೆದ 14 ಸಮ್ಮೇಳನವನ್ನು ಯಶಸ್ವಿಯಾಗಿ ನಡೆಸಿದ ಮೋಹನ ಆಳ್ವ ಅವರ ಮಂತ್ರಗಾರಿಕೆ ಈ ಬಾರಿಯೂ ಯಶಸ್ವಿಯಾಗಿ ಜಾರಿಯಾಗಿದ್ದು, ಲಕ್ಷಾಂತರ ಜನರು ಸಾಹಿತ್ಯ-ಸಂಗೀತದ ಸುಧೆಯಲ್ಲಿ ಮಿಂದು ಸಂಭ್ರಮಿಸಲು ಸಾಧ್ಯವಾಗಿದೆ.

Advertisement

ದೂರವಾದ ಗಜ ಭೀತಿ !
ಮುಂಜಾನೆಯ ಮಂಜು ಹನಿಯ ಜತೆಗೆ ಚಳಿಯ ಆಹ್ಲಾದಕತೆಯೊಂದಿಗೆ ಆರಂಭವಾಗುವ ಇಲ್ಲಿನ ವಾತಾವರಣ ಬೆಳಗ್ಗೆ 10ರ ಬಳಿಕ ಸುಡುಬಿಸಿಲಿನತ್ತ ಹೊರಳಿದ್ದರೂ ಸಾಹಿತ್ಯದ ಸಂಭ್ರಮ-ಸಡಗರಕ್ಕೆ ಒಂದಿನಿತೂ ಸಮಸ್ಯೆ ಎದುರಾಗಲಿಲ್ಲ. ‘ಗಜ’ ಚಂಡಮಾರುತದಿಂದಾಗಿ ಕರಾವಳಿ ಭಾಗದಲ್ಲೂ ಮಳೆಯಾಗುವ ಸಾಧ್ಯತೆ ಇದೆ ಎಂಬ ಆತಂಕವಿತ್ತಾದರೂ ನುಡಿಸಿರಿಯ ಮೂರೂ ದಿನ ಮಳೆಯ ಆಗಮನವಾಗಿರಲಿಲ್ಲ. ಆದರೆ ಸೆಕೆ ಮಾತ್ರ ಹೆಚ್ಚೇ ಇತ್ತು. ಪರಿಣಾಮವಾಗಿ ಕೈಯಲ್ಲಿರುವ ಕರಪತ್ರ, ಪತ್ರಿಕೆ, ಆಮಂತ್ರಣ ಪತ್ರಿಕೆಗಳೇ ಫ್ಯಾನ್‌ ಆದದ್ದು ಕಂಡುಬಂತು. ಕಬ್ಬಿನ ಹಾಲು, ಕುಡಿಯುವ ನೀರು, ಪಾನೀಯಗಳು ಹೆಚ್ಚು ಬಳಕೆಯಾಗಿವೆ. ಜನಜಾತ್ರೆಯೇ ತುಂಬಿದ್ದರಿಂದ ಇಡೀ ಆಳ್ವಾಸ್‌ ಕ್ಯಾಂಪಸ್‌ನಲ್ಲಿ ಮೊಬೈಲ್‌ ನೆಟ್‌ವರ್ಕ್‌ ಜಾಮ್‌ ಆಗಿ ಕರೆ ಮಾಡುವುದಕ್ಕೆ ಸಾಧ್ಯವಾಗುತ್ತಿರಲಿಲ್ಲ.

125ಕ್ಕೂ ಅಧಿಕ ಸಾಂಸ್ಕೃತಿಕ ಕಾರ್ಯಕ್ರಮ 
ಸಾಂಸ್ಕೃತಿಕ ಲೋಕಕ್ಕೆ ಆಳ್ವಾಸ್‌ ಸಂಸ್ಥೆಯ ಕೊಡುಗೆ ಅಪಾರ. ಈ ಹಿಂದಿನ 14 ಆಳ್ವಾಸ್‌ ನುಡಿಸಿರಿ ಹಾಗೂ ವಿರಾಸತ್‌ನಲ್ಲಿ ದೇಶದ ಉದ್ದಗಲದ ಸಾಂಸ್ಕೃತಿಕ ಕಲಾವೈಭವವನ್ನು ಪರಿಚಯಿಸುವ ವಿಶೇಷ ಪ್ರಯತ್ನವನ್ನು ಮೋಹನ ಆಳ್ವರು ಮಾಡಿದ್ದಾರೆ. ಅದೇ ರೀತಿ ಈ ಬಾರಿಯ ನುಡಿಸಿರಿಯಲ್ಲೂ ರಾಜ್ಯದ ಎಲ್ಲ ಸಾಂಸ್ಕೃತಿಕ ಕಲಾಲೋಕವನ್ನು ಪರಿಚಯಿಸಲಾಗಿದೆ. ಸುಮಾರು 125 ಸಾಂಸ್ಕೃತಿಕ ಕಾರ್ಯಕ್ರಮಗಳು ಮೂರು ದಿನಗಳಲ್ಲಿ ನಡೆದಿವೆ. ಎಲ್ಲ ಕಾರ್ಯಕ್ರಮಗಳು ಆಳ್ವಾಸ್‌ನ ನಿಯಮದ ಪ್ರಕಾರ ‘ನಿಗದಿತ ಸಮಯ’ದಲ್ಲಿ ಆರಂಭವಾಗಿ ನಿಗದಿತ ಸಮಯದೊಳಗೆ ಮುಕ್ತಾಯ ಕಂಡಿದ್ದು ಇನ್ನೊಂದು ವಿಶೇಷ !

Advertisement

Udayavani is now on Telegram. Click here to join our channel and stay updated with the latest news.

Next