Advertisement

ವರ್ಷದಿಂದ ಮುಚ್ಚಿರುವ ಪಾಪೆಮಜಲು ಬಿಎಸ್ಸೆನ್ನೆಲ್‌ ಕೇಂದ್ರ

10:54 PM Dec 15, 2019 | Team Udayavani |

ವಿಶೇಷ ವರದಿಬಡಗನ್ನೂರು: ಅರಿಯಡ್ಕ ಗ್ರಾಮದ ಪಾಪೆಮಜಲು ಬಿಎಸ್ಸೆನ್ನೆಲ್‌ ದೂರವಾಣಿ ವಿನಿಮಯ ಕೇಂದ್ರ ಒಂದೊಮ್ಮೆ ಅತ್ಯಂತ ಹೆಚ್ಚು ಚಟುವಟಿಕೆಯ ಕೇಂದ್ರವಾಗಿತ್ತು. ಈ ಕೇಂದ್ರದಲ್ಲಿ ಕರ್ತವ್ಯದಲ್ಲಿದ್ದ ಅಧಿಕಾರಿ ನಿವೃತ್ತರಾದ ಬಳಿಕ ಒಂದು ವರ್ಷದಿಂದ ಕಚೇರಿ ಬಾಗಿಲು ತೆರೆದಿಲ್ಲ. ಅಲ್ಲಿ ಸಿಬಂದಿಯೂ ಇಲ್ಲ. ಇರುವ ಯಂತ್ರಗಳು ಕೆಲಸ ಮಾಡುತ್ತಿಲ್ಲ. ಭೂತ ಬಂಗಲೆಯಂತೆ ಗೋಚರಿಸುವ ಈ ದೂರವಾಣಿ ಕೇಂದ್ರದಲ್ಲಿ ಶ್ಮಶಾನ ಮೌನ ಆವರಿಸಿದೆ.

Advertisement

ಮೊಬೈಲ್‌ ಬಂದ ಬಳಿಕ ಸ್ಥಿರ ದೂರವಾಣಿ ಸ್ತಬ್ಧಗೊಂಡಿದೆ. ಆದರೆ ಸರಕಾರಿ ಕಚೇರಿಗಳಲ್ಲಿ ಇಂದಿಗೂ ಸ್ಥಿರ ದೂರವಾಣಿಯ ಅಗತ್ಯ ಇದೆ. ಗ್ರಾ.ಪಂ. ಕಚೇರಿ, ಗ್ರಾಮಕರಣಿಕರ ಕಚೇರಿ, ಆರೋಗ್ಯ ಕೇಂದ್ರ, ಸರಕಾರಿ ಶಾಲೆ, ಕಾಲೇಜುಗಳಲ್ಲಿ ಚಾಲ್ತಿಯಲ್ಲಿದೆ. ಆದರೆ, ಸ್ಥಿರ ದೂರವಾಣಿಗಿಂತ ಅಗ್ಗದಲ್ಲಿ ಮೊಬೈಲ್‌ ದೊರೆಯುತ್ತದೆ. ಇತರ ಹಲವು ಅನುಕೂಲಗಳೂ ಇವೆ. ಈ ಕಾರಣಕ್ಕಾಗಿ ಸ್ಥಿರ ದೂರವಾಣಿ ಸಂಪರ್ಕಕ್ಕೆ ಜನರು ಇತಿಶ್ರೀ ಹಾಡಿದ್ದಾರೆ. ಬಡಗನ್ನೂರು ಮತ್ತು ಸಂಟ್ಯಾರ್‌ ವಿನಿಯಮ ಕೇಂದ್ರದಲ್ಲಿ ಒಟ್ಟು 1,500ಕ್ಕೂ ಮಿಕ್ಕಿ ಸ್ಥಿರ ದೂರವಾಣಿ ಸಂಪರ್ಕಗಳು ಇದ್ದವು. ಈಗ 100ರಷ್ಟು ಮಾತ್ರ ಉಳಿದುಕೊಂಡಿವೆ. ಆದರೆ ಇಲಾಖೆ ವಿನಿಮಯ ಕಚೇರಿಯನ್ನು ಸಾರ್ವಜನಿಕರ ಉಪಯೋಗಕ್ಕೆ ಉಳಿಸಿಕೊಂಡಿತ್ತು.

ಸೆಕ್ಯೂರಿಟಿಯೂ ಇಲ್ಲಿಲ್ಲ
ಬಿಎಸ್ಸೆನ್ನೆಲ್‌ನಲ್ಲಿ ಹೊಸ ಸಿಬಂದಿ ನೇಮಕಾತಿ ನಡೆಯದ ಕಾರಣ ಬಹುತೇಕ ವಿನಿಮಯ ಕೇಂದ್ರಗಳು ಬಾಗಿಲು ಮುಚ್ಚಿವೆ. ಪಟ್ಟಣದಲ್ಲಿರುವ ಕೇಂದ್ರಗಳು ಕಾರ್ಯಾಚರಿಸುತ್ತಿವೆ. ಆದರೆ ಗ್ರಾಮೀಣ ಭಾಗದಲ್ಲಿ ಇದರ ಅಗತ್ಯ ಇಂದಿಗೂ ಇದ್ದರೂ ಕಚೇರಿ ಮುಚ್ಚಿದೆ. ಪಾಪೆಮಜಲು ವಿನಿಮಯ ಕೇಂದ್ರದ ಸಿಬಂದಿಗೆ ನಿವೃತ್ತಿಯಾಗಿದೆ. ಅಲ್ಲಿದ್ದ ಸೆಕ್ಯೂರಿಟಿ ಗಾರ್ಡ್‌ ಗುತ್ತಿಗೆದಾರರಿಂದ ವೇತನ ಸಿಗದ ಕಾರಣ ಕೆಲಸ ಬಿಟ್ಟು ತೆರಳಿದ್ದಾರೆ. ಒಂದು ವರ್ಷದಿಂದ ಕಚೇರಿ ಬಾಗಿಲು ತೆರೆದಿಲ್ಲ.

ಸಾರ್ವಜನಿಕರ ಆಕ್ರೋಶ
ಸ್ಥಿರ ದೂರವಾಣಿಯಲ್ಲಿ ಸಮಸ್ಯೆ ಕಂಡುಬಂದರೆ ಯಾರಿಗೆ ತಿಳಿಸಬೇಕು ಎಂಬ ಮಾಹಿತಿ ಬಳಕೆದಾರರಿಗೆ ಇಲ್ಲ. ಇರುವ 100ಕ್ಕೂ ಮಿಕ್ಕಿ ಸಂಪರ್ಕದಲ್ಲಿ ವ್ಯತ್ಯಯ ಉಂಟಾದರೆ ಅದನ್ನು ದುರಸ್ತಿ ಮಾಡಿಸಲು ಹರಸಾಹಸ ಪಡಬೇಕಾಗಿದೆ. ಈ ಮೊದಲು ವಿನಿಮಯ ಕೇಂದ್ರಕ್ಕೆ ಬಂದು ದೂರು ನೀಡುತ್ತಿದ್ದರು. ಆದರೆ ಒಂದು ವರ್ಷದಿಂದ ಈ ಭಾಗದಲ್ಲಿ ತೀವ್ರ ಸಮಸ್ಯೆಯಾಗಿದೆ. ಇಲಾಖೆ ಬದಲಿ ವ್ಯವಸ್ಥೆ ಮಾಡದೆ ಏಕಾಏಕಿ ಕಚೇರಿಗೆ ಬೀಗ ಹಾಕಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

 ಸರಕಾರಿ ಮಟ್ಟದಲ್ಲಿ ಕೆಲಸವಾಗಬೇಕು
ಸಿಬಂದಿ ಇಲ್ಲದ ಕಾರಣ ಕೇಂದ್ರಕ್ಕೆ ಬೀಗ ಹಾಕಲಾಗಿದೆ. ಸಂಟ್ಯಾರ್‌ ಮತ್ತು ಬಡಗನ್ನೂರು ವಿನಿಮಯ ಕೇಂದ್ರಕ್ಕೆ ಓರ್ವ ಸಿಬಂದಿ ಇದ್ದಾರೆ. ಅವರು ಕಚೇರಿಗೆ ಬರುವುದಿಲ್ಲ. ದುರಸ್ತಿ ಕಾರ್ಯ ಇದ್ದಲ್ಲಿ ಅವರಿಗೆ ಕರೆ ಮಾಡಬಹುದಾಗಿದೆ. ಸರಕಾರ ವಿನಿಮಯ ಕೇಂದ್ರಕ್ಕೆ ಸಿಬಂದಿ ನೇಮಕ ಮಾಡಿದರೆ ಕಚೇರಿ ಬಾಗಿಲು ತೆರೆಯಬಹುದು. ಅದೇನಿದ್ದರೂ ಸರಕಾರಿ ಮಟ್ಟದಲ್ಲಿ ಆಗುವ ಕೆಲಸ
– ವಿನೋದ್‌, ಜೆ.ಇ. ಬಿಎಸ್ಸೆನ್ನೆಲ್‌, ಪುತ್ತೂರು

Advertisement

 ಸರಕಾರವೇ ನೇರ ಕಾರಣ
ಬಿಎಸ್ಸೆನ್ನೆಲ್‌ ದೂರವಾಣಿ ವಿನಿಮಯ ಕೇಂದ್ರ ಬಾಗಿಲು ಮುಚ್ಚಿರುವುದು ಅತ್ಯಂತ ದುಃಖದ ವಿಚಾರ. ಕೇಂದ್ರದ ವ್ಯವಸ್ಥೆ ಈ ಮಟ್ಟದಲ್ಲಿ ಅಧಃಪತನಕ್ಕೆ ತಲುಪಲು ಸರಕಾರವೇ ನೇರ ಕಾರಣವಾಗಿದೆ. ಖಾಸಗಿ ಮೊಬೈಲ್‌ಗ‌ಳಿಗೆ ಸ್ಪರ್ಧೆ ನೀಡಲು ಆಗದೆ ಬಿಎಸ್ಸೆನ್ನೆಲ್‌ ಈ ಮಟ್ಟಕ್ಕೆ ತಲುಪಿದೆ. ಸರಕಾರ ಮತ್ತೆ ಅದಕ್ಕೆ ಚಾಲನೆ ಕೊಡುವ ಕೆಲಸ ಮಾಡಬೇಕು.
– ಶಿವರಾಮ ಮಣಿಯಾಣಿ,
ಮಾಜಿ ಸದಸ್ಯರು,ಅರಿಯಡ್ಕಗ್ರಾ.ಪಂ.

Advertisement

Udayavani is now on Telegram. Click here to join our channel and stay updated with the latest news.

Next