ಬೆಂಗಳೂರು: ನಮ್ಮದು ವಿಪಕ್ಷ. ರಾಜ್ಯದ ಜನರ ಪರವಾಗಿ ನಾವು ಕೇಳುವ ಪ್ರಶ್ನೆಗೆ ಮುಖ್ಯಮಂತ್ರಿಗಳು, ಉಪ ಮುಖ್ಯಮಂತ್ರಿಗಳು ಉತ್ತರ ನೀಡಬೇಕು. ಆದರೆ ನಮ್ಮನ್ನೇ ಪ್ರಶ್ನಿಸುವ ಮೂಲಕ ಪ್ರಜಾಸತ್ತಾತ್ಮಕ ವ್ಯವಸ್ಥೆಯಲ್ಲಿ ಹಾಸ್ಯಾಸ್ಪದವಾದ ಹೊಸ ಸಂಪ್ರದಾಯವೊಂದನ್ನು ರಾಜ್ಯದ ಕಾಂಗ್ರೆಸ್ ಸರಕಾರ ಆರಂಭಿಸಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಟೀಕಿಸಿದ್ದಾರೆ.
ಮೈಸೂರು ಚಲೋ ಪಾದಯಾತ್ರೆಯ ನಡುವೆ ಸುದ್ದಿಗಾರರ ಜತೆ ಮಾತನಾಡಿ, ಸದನದಲ್ಲೂ ನಮ್ಮ ಪ್ರಶ್ನೆಗೆ ಉತ್ತರ ಸಿಕ್ಕಿಲ್ಲ. ಇವತ್ತೂ ಸಿಕ್ಕಿಲ್ಲ. ಈ ಪಾದಯಾತ್ರೆ ಮೂಲಕ ಅವರಿಗೆ ಚಾಟಿ ಬೀಸಿ ಬುದ್ಧಿ ಕಲಿಸುತ್ತೇವೆ ಎಂದರು.
ಸಿದ್ದರಾಮಯ್ಯ ರಾಜೀನಾಮೆ ಕೊಡುವ ದಿನಗಳು ಹತ್ತಿರ ಆಗುತ್ತಿರುವ ಬಗ್ಗೆ ನನಗೇನೂ ಅನುಮಾನ ಉಳಿದಿಲ್ಲ. ತನ್ನ ರಾಜಕೀಯ ಜೀವನದಲ್ಲಿ ಕಪ್ಪು ಚುಕ್ಕಿ ಇಲ್ಲ ಎಂದು ಮೊಂಡುವಾದ ಮಾಡುತ್ತಿದ್ದ ಅವರಿಂದು ಹಗರಣಗಳ ಸರಮಾಲೆಯಲ್ಲಿ ಸಿಲುಕಿದ್ದಾರೆ. ರಾಜ್ಯದ ಆಡಳಿತ ಪಕ್ಷದ ಪರಿಸ್ಥಿತಿ ಹಿರಿಯಕ್ಕನ ಚಾಳಿ ಮನೆಮಂದಿಗೆ ಎಂಬಂತಾಗಿದೆ; ಮುಖ್ಯಮಂತ್ರಿ, ಸಚಿವರಂತೆ ಆಡಳಿತ ಪಕ್ಷದ ಶಾಸಕರೂ ಭ್ರಷ್ಟಾಚಾರದಲ್ಲಿ ನಿರತರಾಗಿದ್ದಾರೆ. ಶಾಸಕರು ಕೇಳಿದ ಲಂಚ ಕೊಡಲಾಗದೆ ಶನಿವಾರ ಯಾದಗಿರಿಯಲ್ಲಿ ಪಿಎಸ್‌ಐ ಪರಶುರಾಮ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವಾಗ್ಧಾಳಿ ನಡೆಸಿದರು.
ಗಾಂಧಿ ಕುಟುಂಬಕ್ಕೆ ಕಪ್ಪ
2ನೇ ದಿನ ಬಿಡದಿಯಲ್ಲಿ ಪಾದಯಾತ್ರೆಗೆ ಚಾಲನೆ ನೀಡುವ ವೇಳೆ ಮಾತನಾಡಿದ ಬಿ.ವೈ. ವಿಜಯೇಂದ್ರ, ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಭ್ರಷ್ಟ ಕಾಂಗ್ರೆಸ್ ಸರಕಾರವು ಹಣವನ್ನು ಲೂಟಿ ಮಾಡಿ, ಸಿದ್ದರಾಮಯ್ಯನವರು ಮತ್ತು ಡಿ.ಕೆ. ಶಿವಕುಮಾರ್ ಅವರು ಗಾಂಧಿ ಕುಟುಂಬಕ್ಕೆ ಕಪ್ಪ ಕಾಣಿಕೆ ಸಲ್ಲಿಸುತ್ತಿದ್ದಾರೆ ಎಂದು ಆರೋಪಿಸಿದರು.
ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ಬಳಿಕ ಪರಿಶಿಷ್ಟ ಜಾತಿ/ ಪಂಗಡದ ಅಭಿವೃದ್ಧಿಗೆ ಮೀಸಲಿಟ್ಟ ಹಣವನ್ನು ಲೂಟಿ ಮಾಡಿರುವುದನ್ನು ಸ್ವತಃ ಮುಖ್ಯಮಂತ್ರಿಗಳೇ ಸದನದಲ್ಲಿ ಒಪ್ಪಿಕೊಂಡಿದ್ದಾರೆ. ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅಧಿಕಾರದ ದರ್ಪ, ಅಧಿಕಾರದ ಅಹಂನಿಂದ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ ಎಂದರು.
ಅಭಿವೃದ್ಧಿ ಕೆಲಸ ಶೂನ್ಯ
ಕಾಂಗ್ರೆಸ್ ಅಧಿಕಾರಕ್ಕೆ ಬಂದ ಬಳಿಕ ಬಿಡದಿಯಲ್ಲಿರುವ ಟೊಯೊಟಾ ಫ್ಯಾಕ್ಟರಿ ಕೂಡ ಹೊರರಾಜ್ಯಕ್ಕೆ ಹೋಗುವ ಪರಿಸ್ಥಿತಿ ಉದ್ಭವವಾಗಿದೆ. ಹೊಸ ಉದ್ಯಮಗಳು, ಕೈಗಾರಿಕೆಗಳು ನಮ್ಮ ರಾಜ್ಯಕ್ಕೆ ಬರುತ್ತಿಲ್ಲ. ನಿಮ್ಮ ದುರಹಂಕಾರದ ನಡವಳಿಕೆಯಿಂದ ರಾಜ್ಯದಲ್ಲಿ ಅಭಿವೃದ್ಧಿ ಕೆಲಸ ಆಗುತ್ತಿಲ್ಲ ಎಂದು ಟೀಕಿಸಿದರು.