ಎಚ್.ಡಿ.ಕೋಟೆ: ಅಧಾರ್ ಕಾರ್ಡ್ ನೋಂದಣಿ ಹಾಗೂ ತಿದ್ದುಪಡಿಗಾಗಿ ಪಟ್ಟಣದ ಅಂಚೆ ಕಚೇರಿಯ ಮುಂಭಾಗ ಪ್ರತಿದಿನವೂ ಬೆಳಗಿನ ಜಾವವೇ ಸಹಸ್ರಾರು ಮಂದಿ ಸರತಿ ಸಾಲಿನಲ್ಲಿ ನಿಲ್ಲಬೇಕಾಗಿದೆ. ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಹೆಚ್ಚುವರಿ ಕೌಂಟರ್ ತೆರೆದು ಆಧಾರ್ ನೋಂದಣಿಗೆ ಅವಕಾಶ ಮಾಡಿಕೊಡಬೇಕಾಗಿದೆ.
ಆಧಾರ್ ತಿದ್ದುಪಡಿಗಾಗಿ ಅಂಚೆ ಕಚೇರಿಯಲ್ಲಿ ಎಲ್ಲರಿಗೂ ಟೋಕನ್ ವಿತರಿಸಲು ಅಂಚೆ ಕಚೇರಿಯ ಬಾಗಿಲು ತೆರೆಯಲು ಸಿಬ್ಬಂದಿ ಬೆಳಗ್ಗೆ 9 ಗಂಟೆಗೆ ಆಗಮಿಸುವಷ್ಟರಲ್ಲಿ ಟೋಕನ್‌ಗಾಗಿ ನಿಂತಿದ್ದ ಕ್ಯೂ ಹನುಮಂತನ ಬಾಲದಂತೆ ಬೆಳೆದು ದಿನಲೂ ಸುಮಾರು 300 ಮೀಟರ್ ನಷ್ಟು ಉದ್ದದ ಕ್ಯೂನಲ್ಲಿ ಜನರು ಜಮಾವಣೆಗೊಳ್ಳುತ್ತಿದ್ದಾರೆ.
ಸಂಚಾರ ವ್ಯತ್ಯಯ: ಪಟ್ಟಣದ ಮೊದಲ ಮುಖ್ಯ ರಸ್ತೆಯಲ್ಲಿ ಪ್ರತಿದಿನ ಸಾವಿರಕ್ಕೂ ಹೆಚ್ಚು ಜನರು ಜಮಾವಣೆಗೊಳ್ಳುವುದರಿಂದ ಶಾಲಾ ವಾಹನಗಳು ಮತ್ತು ಸಾರಿಗೆ ಬಸ್ ಸಂಚರಿಸಲು ಹರಸಾಹಸ ಪಡುವಂತಾಗಿದೆ. ಟೋಕನ್‌ಗಾಗಿ ಬಂದವರ ದ್ವಿಚಕ್ರ ವಾಹನಗಳು ರಸ್ತೆಯುದ್ದಕ್ಕೂ ಗಂಟಗಟ್ಟಲೇ ನಿಲ್ಲುವುದರಿಂದ ಈ ಭಾಗದ ಶಾಲೆಗಳಿಗೆ ಬರುವ ಶಾಲೆಗಳ ಮಕ್ಕಳು ಹಾಗೂ ಪಾದಚಾರಿಗಳು ರಸ್ತೆ ಮಧ್ಯೆಯೇ ಸಂಚಾರಿಸಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ.
ಮಕ್ಕಳ ಜತೆ ಆಗಮನ: ಇನ್ನೂ ಅಂಚೆ ಕಚೇರಿಯ ಆಧಾರ್ ಕೇಂದ್ರದಲ್ಲಿ ಪ್ರತಿದಿನ ಕ್ಯೂನಲ್ಲಿ ನಿಲ್ಲವ ಎಲ್ಲರಿಗೂ ಒಂದೇ ದಿನ ಟೋಕನ್‌ಗಳನ್ನು ನೀಡದೆ ದಿನಾಂಕಗಳನ್ನು ನಿಗದಿ ಮಾಡಿ ಟೋಕನ್ ವಿತರಿಸುತ್ತಿದ್ದಾರೆ. ಅದರೂ ತಾಲೂಕಿನ ವಿವಿಧ ಗ್ರಾಮಗಳ ಜನರು ದೈನಂದಿನ ಕೆಲಸ ಕಾರ್ಯಕ್ಕೂ ತೆರಳದೆ, ಮುಂಜಾನೆಯೇ ಬಂದು ಪಟ್ಟಣದ ಅಂಚೆ ಕಚೇರಿಯ ಮುಂಭಾಗ ಮಕ್ಕಳ ಜೊತೆಗೆ ಬಂದು ನಿಲ್ಲುತ್ತಿದ್ದಾರೆ.
ದಿನಕ್ಕೆ ಕನಿಷ್ಠ ನೋಂದಣಿ: ಆಗಸ್ಟ್ ತಿಂಗಳ ಅಂತ್ಯದವರೆಗೂ ದಿನಾಂಕವನ್ನು ಬರೆದು ಟೋಕನ್‌ಗಳನ್ನು ಈಗಾಗಲೇ ವಿತರಿಸಿದ್ದಾರೆ. ಅದರೂ ಇಲ್ಲಿ ಪ್ರತಿ ದಿನ ಕೇವಲ 15 ರಿಂದ 20 ಜನರಿಗೆ ಮಾತ್ರ ನೋಂದಣಿ ಮಾಡಲು ಸಾಧ್ಯವಾಗಿದೆ. ಹೀಗಾಗಿ ತಾಲೂಕಿನ ಜನರು ತಾಲೂಕು ಆಡಳಿತ ಮತ್ತು ಇಲ್ಲಿನ ಜನಪ್ರತಿನಿಧಿಗಳಿಗೆ ಹಿಡಿಶಾಪ ಹಾಕುತ್ತಿರುವುದು ಸಾಮಾನ್ಯವಾಗಿದೆ.
ಇನ್ನಾದರೂ ಕ್ಷೇತ್ರದ ಶಾಸಕರು, ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನಹರಿಸಿ ಆಧಾರ್ ತಿದ್ದುಪಡಿ ಹಾಗೂ ನೋಂದಣಿಗೆ ಹೆಚ್ಚುವರಿ ಕೌಂಟರ್‌ಗಳನ್ನು ತೆರೆದು ಸಮಸ್ಯೆಗೆ ಸೂಕ್ತ ಪರಿಹಾರ ಕಲ್ಪಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಸಾರ್ವಜನಿಕರ ಒತ್ತಾಯದಂತೆ ಇಲ್ಲಿ ಜಮಾಯಿಸಿರುವ ಜನರಿಗೆ ಟೋಕನ್ ವಿತರಿಸಿದ್ದೇವೆ. ಪ್ರತಿದಿನವೂ ಎಷ್ಟು ಸಾಧ್ಯವೋ ಅಷ್ಟು ಜನರಿಗೆ ನೋಂದಣಿ ಮತ್ತು ತಿದ್ದುಪಡಿ ಮಾಡಲು ಕ್ರಮ ವಹಿಸುತ್ತೇವೆ. ಇನ್ನುಳಿದವರು ಟೋಕನ್‌ನಲ್ಲಿ ನಮೂದಿಸಿರುವ ದಿನಾಂಕದ ದಿನದಂದು ಬರಬೇಕು.
-ಶ್ರೀಕಾಂತ್, ಅಂಚೆ ಕಚೇರಿ ವ್ಯವಸ್ಥಾಪಕ
ತಾಲೂಕು ಕೇಂದ್ರದಲ್ಲಿ ಆಧಾರ್ ಮೇಳವನ್ನು ನಡೆಸಿ ತಾಲೂಕಿನ ಸಾಕಷ್ಟು ಜನರು ಒಂದೇ ಬಾರಿಗೆ ಆಧಾರ್ ನೋಂದಣಿ ಮತ್ತು ತಿದ್ದುಪಡಿ ಮಾಡಿಸಿಕೊಳ್ಳಲು ಅವಕಾಶ ಮಾಡಿಕೊಡಿ ಎಂದು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡುತ್ತೇನೆ.
-ಮಂಜುನಾಥ್, ತಹಶೀಲ್ದಾರ್