ಜೀವನದಲ್ಲಿ ಕೆಲವೊಮ್ಮೆ ರೋಚಕ ಅನುಭವಗಳು ಮುಂದಿನ ಹೆಜ್ಜೆಗೆ ದಾರಿದೀಪವಾಗುತ್ತದೆ ಎಂಬ ಮಾತುಗಳನ್ನು ಕೇಳಿದ್ದೆ. ಆದರೆ, ಅಂತಹ ಅನುಭವ ನಮಗೂ ಒಮ್ಮೊಮ್ಮೆ ಮೈನವಿರೇಳುವಂತೆ ಮಾಡುತ್ತದೆ. ಹೌದು, ಹೀಗೊಂದು ಮರೆಯಲಾಗದ ಅನುಭವ ನಮಗೂ ಆಗಿತ್ತು.
ಪತ್ರಿಕೋದ್ಯಮ ವಿದ್ಯಾರ್ಥಿಗಳಾದ ನಮಗೆ ಒಂದಲ್ಲ ಒಂದು ಪ್ರಾಕ್ಟಿಕಲ್ ಕೆಲಸಗಳನ್ನು ಕಾಲೇಜಿನಲ್ಲಿ ಹಂಚುತ್ತಿದ್ದರು. ಹೀಗಿರುವಾಗ, ಒಂದು ದಿನ ಡಾಕ್ಯುಮೆಂಟರಿ ಮಾಡಲು ನಮ್ಮ ತಂಡಕ್ಕೆ ದೊರಕಿತ್ತು. ಹಾಗಾಗಿ, ನಾವು ಸುಳ್ಯದ ಸಮೀಪವಿರುವ ಅರಂತೋಡಿನ ದೇವರಗುಂಡಿ ಜಲಪಾತವನ್ನು ನಮ್ಮ ವಿಷಯವಾಗಿ ಆರಿಸಿಕೊಂಡಿದ್ದೆ. ಇದಕ್ಕೆ ಕಾಲೇಜಿನಿಂದಲೂ ಅಪ್ಪಣೆ ದೊರಕಿತ್ತು. ಹಾಗಾಗಿ, ಒಂದು ಶನಿವಾರದಂದು ಮಧ್ಯಾಹ್ನದ ನಂತರ ಆ ಸ್ಥಳಕ್ಕೆ ಹೋಗಿ ಚಿತ್ರೀಕರಣವನ್ನು ಪ್ರಾರಂಭಿಸಿದ್ದೆವು. ಹಳ್ಳಿ ಪ್ರದೇಶವಾಗಿದ್ದರಿಂದ ಅಲ್ಲಿಗೆ ಬಸ್ಸಿನ ಸೌಲಭ್ಯ ಕೊಂಚ ಕಮ್ಮಿಯೇ. ಹಾಗಾಗಿ, ಗಂಟೆಗೆ ಒಂದು ಬಸ್ಸು ಮಾತ್ರ ಆ ಮಾರ್ಗವಾಗಿ ಸಾಗುತ್ತಿತ್ತು. ಕಾಲೇಜು ಮುಗಿಸಿ ಬರುವಾಗಲೇ ತಡವಾಗಿದ್ದರಿಂದ ಕೊನೆಯ ಬಸ್ ಎಷ್ಟು ಗಂಟೆಗೆ ಎಂದು ನಾವು ಬಸ್‌ಚಾಲಕನಲ್ಲಿ ವಿಚಾರಿಸಿದ್ದೆವು. ಅವರು “5 ಗಂಟೆಗೆ’ ಎಂದಿದ್ದರು. ಹಾಗಾಗಿ, ಆದಷ್ಟು ಬೇಗ ಅಲ್ಲಿನ ಚಿತ್ರಣವನ್ನು ಮುಗಿಸಿ ಕೊನೆಗೆ ಜಲಪಾತದ ಬಳಿ ಹೊರಟೆವು. ನಮ್ಮಲ್ಲಿ ಮೂರು ಜನ ಹುಡುಗಿಯರು ಮತ್ತು ಒಬ್ಬ ಹುಡುಗ ಇದ್ದ. ನಮ್ಮಲ್ಲಿ ಆ ಜಲಪಾತವಿರುವ ಜಾಗ ತಿಳಿದಿದ್ದು ನನ್ನ ಇಬ್ಬರು ಗೆಳತಿಯರಿಗೆ ಮಾತ್ರ.
ಹಚ್ಚಹಸಿರಿನ ನಿಸರ್ಗದ ಸೌಂದರ್ಯವನ್ನು ಸವಿಯುತ್ತ ನಮ್ಮ ಪಯಣ ಸಾಗಿತ್ತು. ನನ್ನ ಗೆಳತಿಯರಿಗೆ ಆ ಸ್ಥಳ ಮುಂಚಿತವಾಗಿಯೇ ಪರಿಚಯವಿದ್ದ ಕಾರಣ ನಾನು ದಾರಿಯಲ್ಲಿರುವ ಫಲಕವನ್ನು ಅಷ್ಟೊಂದಾಗಿ ಗಮನಿಸಿರಲಿಲ್ಲ. ಮುಂದೆ ಸಾಗಿದಷ್ಟು ದಾರಿ ಸಾಗುತ್ತಲೇ ಇತ್ತು. ಎಲ್ಲೋ ಏನೋ ತಪ್ಪಿದೆ ಎಂದು ನನಗೆ ಅನುಮಾನ ಬಂದು ಗೆಳತಿಯನ್ನು ಕೇಳಿದೆ, “ಇನ್ನು ಎಷ್ಟು ದೂರ ಕ್ರಮಿಸಬೇಕು? ಮೊದಲೇ ತಡವಾಗಿದೆ. ಕಾಡು ಪ್ರದೇಶ ಬೇರೆ, ಜನರ ಸುಳಿವಿಲ್ಲ’ ಎಂದು. ಅಷ್ಟರಲ್ಲಿ ಅವರಿಗಿಬ್ಬರಿಗೂ ನಾವು ದಾರಿ ತಪ್ಪಿದ್ದೇವೆ ಎಂಬ ಅನುಮಾನ ಖಚಿತವಾಗಿತ್ತು. “ಕಡಿದಾದ ತಗ್ಗು ಪ್ರದೇಶವಾಗಿದ್ದರಿಂದ ನೀನು ಹೋಗಿ ಗೆಳೆಯನನ್ನು ಕರೆದುಕೊಂಡು ಬಾ. ಇಲ್ಲೇ ಮುಂದೆ ಜಲಪಾತವಿದೆ. ನಾವು ನಡೆದುಕೊಂಡು ಹೋಗುತ್ತೇವೆ’ ಎಂದು ಸೂಚಿಸಿದರು. ಅಂತೆಯೇ ನಾನು ಗೆಳೆಯನನ್ನು ಕರೆದುಕೊಂಡು ಬರಲು ಹಿಂತಿರುಗಿದೆ.
ಅವನ ಜೊತೆ ಬರುವಾಗ ನಮ್ಮ ಕೈಯಲ್ಲಿ ಕೆಮರಾ ಇರುವುದನ್ನು ಕಂಡ ಊರ ಜನರು, “ನೀವು ಜಲಪಾತ ವೀಕ್ಷಣೆಗೆ ಹೋಗುತ್ತಿರುವುದೆ? ಹಾಗಾದರೆ ಈ ಮಾರ್ಗವಲ್ಲ, ಇಲ್ಲೇ ಹಿಂದೆ ಒಂದು ಅಡ್ಡ ದಾರಿಯಿದೆ. ಅಲ್ಲಿಂದ ಹೋಗಬೇಕು’ ಎಂದು ಸೂಚಿಸಿದರು. ಆದರೆ, ನಾನು ನನ್ನ ಗೆಳತಿಯರನ್ನು ಆ ಕಾಡಿನ ನಡುವೆ ಬಿಟ್ಟು ಬಂದಿದ್ದೇನೆ ಎಂದು ಅವರಿಗೆ ಸೂಚಿಸಿ, “ಗೆಳತಿಯರು ಇರುವ ಕಡೆ ಹೋಗು’ ಎಂದು ನನ್ನ ಗೆಳೆಯನಿಗೆ ತಿಳಿಸಿದೆ. ಕರೆ ಮಾಡಿ ಗೆಳತಿಯರಿಗೆ ಹಿಂತಿರುಗಿ ಬನ್ನಿ ಎಂದು ಸೂಚಿಸೋಣವೆಂದರೆ ಬಿಎಸ್‌ಎನ್‌ಎಲ್‌ನ ಅಲ್ಪಸ್ಪಲ್ಪ ನೆಟ್‌ವರ್ಕ್ ಬಿಟ್ಟರೆ ಬೇರಾವುದೇ ನೆಟ್‌ವರ್ಕ್‌ನ ಸುಳಿವೂ ಇರಲಿಲ್ಲ. ನಮ್ಮ ಅದೃಷ್ಟಕ್ಕೆ ನನ್ನಲ್ಲೂ ನನ್ನ ಗೆಳತಿಯಲ್ಲೂ ಬಿಎಸ್‌ಎನ್‌ಎಲ್ ಸಿಮ್ ಇತ್ತು. ದೇವರೇ ಅದ್ಹೇಗೆ ಕರೆ ಮಾಡಲಿ ಎನ್ನುವಷ್ಟರಲ್ಲಿ ನನ್ನ ಗೆಳತಿಯ ಕರೆ, “ನಾವು ದಾರಿ ತಪ್ಪಿದ್ದೇವೆ, ಇದ್ಯಾವುದೋ ಕಾಡಿನೊಳಗೆ ಸಿಲುಕಿಕೊಂಡಿದ್ದೇವೆ. ತುಂಬ ಭಯವಾಗುತ್ತಿದೆ ಬೇಗ ಬಾ’ ಎಂದು ಒಂದೇ ಉಸಿರಿನಲ್ಲಿ ಹೇಳಿದಳು. ಅದನ್ನು ಕೇಳಿದ ನನಗೆ ಕೈಕಾಲು ಆಡಲಿಲ್ಲ. “ಬೇಗ ಅವರಿರುವ ಜಾಗಕ್ಕೆ ತೆರಳು’ ಎಂದು ಗೆಳೆಯನಿಗೆ ಸೂಚಿಸಿದೆ.
ಅಂತೂ ನನ್ನ ಗೆಳತಿಯರು ಸಿಕ್ಕಿದರು. ಅಷ್ಟರಲ್ಲಿ ಗಂಟೆ 4.30. ಇನ್ನು ನಮ್ಮ ಕೈಯಲ್ಲಿ ಇದ್ದದ್ದು ಕೇವಲ ಅರ್ಧ ಗಂಟೆ. ಹಾಗಾಗಿ, ಬಂದ ಕೆಲಸ ಅಪೂರ್ಣವಾಗುವುದು ಬೇಡ, ನೀವಿಬ್ಬರು ಆ ಜಲಪಾತದ ಬಳಿ ಹೋಗಿ ಎಂದಳು ಗೆಳತಿ. ದೇವರ ಮೇಲೆ ಭಾರ ಹಾಕಿ ನಾನೂ ಗೆಳೆಯ ದೇವರಗುಂಡಿ ಜಲಪಾತದ ಬಳಿ ತೆರಳಿದೆವು.
ಹಚ್ಚಹಸಿರಿನ ನಡುವೆ ಭೋರ್ಗರೆಯುವ ಜಲಪಾತವದು. ಅದೆಷ್ಟೋ ವಿಸ್ಮಯಗಳನ್ನು ತನ್ನ ಮಡಿಲಿನಲ್ಲಿ ಇಟ್ಟಿರುವ ಈ ಜಲಪಾತವನ್ನು ನೋಡಲು ಎರಡು ಕಣ್ಣು ಸಾಲದು. ಅಲ್ಲಿ ನಮ್ಮ ಕೆಲಸ ಮುಗಿಸಿ ಗೆಳತಿಗೆ ಕರೆ ಮಾಡೋಣವೆಂದರೆ ನೆಟ್‌ವರ್ಕ್ ಇಲ್ಲ.
ಆ ಸಂದರ್ಭದಲ್ಲಿ ನಮ್ಮ ಕೈ ಹಿಡಿದದ್ದು ಬಿಎಸ್‌ಎನ್‌ಎಲ್ ನೆಕ್‌ವರ್ಕ್. ಅದೆಷ್ಟೋ ಹಳ್ಳಿಗಳಲ್ಲಿ ಇಂದಿಗೂ ಬಿಎಸ್‌ಎನ್‌ಎಲ್ ಸೌಲಭ್ಯವನ್ನು ಬಳಸುತ್ತಿರುವ ಸಾಕಷ್ಟು ಜನರಿದ್ದಾರೆ. ನಮ್ಮ ಕಷ್ಟದ ಸಂದರ್ಭದಲ್ಲೂ ಆ ಕಾಡಿನೊಳಗೆ ನಮಗೆ ದಾರಿದೀಪವಾಗಿ ನಿಂತದ್ದು ಇದೇ ಬಿಎಸ್‌ಎನ್‌ಎಲ್.
ಸುಷ್ಮಾ ಸದಾಶಿವ್
ದ್ವಿತೀಯ ಬಿಎ (ಎಂಸಿಜೆ ) ವಿವೇಕಾನಂದ ಕಾಲೇಜು, ಪುತ್ತೂರು