ಚಿಕ್ಕಮಗಳೂರು: ಶ್ರೀರಾಮಸೇನೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಈ ವರ್ಷದ ದತ್ತಮಾಲಾ ಅಭಿಯಾನಕ್ಕೆ ಭಾನುವಾರ ತೆರೆ ಬಿತ್ತು. ಅ.6ರಿಂದ ಒಂದು ವಾರ ಕಾಲ ನಡೆದ ದತ್ತಮಾಲಾ ಅಭಿಯಾನದ ಅಂತಿಮ ದಿನವಾದ ಭಾನುವಾರ, ದತ್ತಮಾಲಾಧಾರಿಗಳು ದತ್ತಪೀಠಕ್ಕೆ ತೆರಳಿ ದತ್ತಪಾದುಕೆಗಳ ದರ್ಶನ ಮಾಡಿ, ಹೋಮ, ಹವನಗಳನ್ನು ನಡೆಸಿದರು. ನಂತರ, ಅಭಿಯಾನ ಸಂಪೂರ್ಣಗೊಂಡಿತು.
ಭಾನುವಾರ ಬೆಳಗ್ಗೆ ನಗರದ ಶಂಕರಮಠದ ಮುಂಭಾಗದಲ್ಲಿ ಧಾರ್ಮಿಕ ಸಭೆ ನಡೆದ ನಂತರ ಶೋಭಾಯಾತ್ರೆಯಲ್ಲಿ ದತ್ತಾತ್ರೇಯರ ಶಿಲಾಮೂರ್ತಿ ಮೆರವಣಿಗೆಗೆ ಜಿಲ್ಲಾಡಳಿತ ಅನುಮತಿ ನೀಡದಿರು ವುದನ್ನು ಖಂಡಿಸಿ ದತ್ತಮಾಲಾಧಾರಿಗಳು ಶೋಭಾ ಯಾತ್ರೆ ರದ್ದುಗೊಳಿಸಿ, ಬಾಯಿಗೆ ಕಪ್ಪು ಬಟ್ಟೆ ಕಟ್ಟಿಕೊಂಡು ಮೌನ ಪ್ರತಿಭಟನೆ ನಡೆಸಿದರು. ಬಳಿಕ ವಾಹನಗಳಲ್ಲಿ ದತ್ತಪೀಠಕ್ಕೆ ತೆರಳಿದ ದತ್ತಮಾಲಾಧಾರಿ ಗಳು, ಹೊನ್ನಮ್ಮನ ಹಳ್ಳದಲ್ಲಿ ಮಿಂದು, ಅಲ್ಲಿಂದ ಕೆಲವರು ಕಾಲ್ನಡಿಗೆಯಲ್ಲಿ ಉಳಿದವರು ವಾಹನಗಳಲ್ಲಿ ಪೀಠಕ್ಕೆ ತೆರಳಿದರು.
ಪಾದುಕೆಗಳ ದರ್ಶನ: ದತ್ತಪೀಠದ ಆವರಣದಲ್ಲಿ ಹಾಕಲಾದ ಬ್ಯಾರಿಕೇಡ್ ಮೂಲಕ ಸರತಿ ಸಾಲಿನಲ್ಲಿ ನಿಂತು ಭಜನೆ ಮಾಡುತ್ತ ಹಿಂದೂ ಪರ ಘೋಷಣೆ ಗಳನ್ನು ಕೂಗುತ್ತ ತೆರಳಿದ ಭಕ್ತರು, ಗುಹೆಯೊಳಗೆ ತೆರಳುವ ಮುನ್ನ ಇರುಮುಡಿಯನ್ನು ಸಮರ್ಪಿಸಿದರು. ನಂತರ, ಗುಹೆಯೊಳಗೆ ಹೋಗಿ ದತ್ತ ಪಾದುಕೆಗಳ ದರ್ಶನ ಪಡೆದರು. ಸ್ವಾಮೀಜಿಗಳು, ಸಂಘಟನೆಯ ಪ್ರಮುಖರನ್ನು ವಿಶೇಷ ದ್ವಾರದ ಮೂಲಕ ಗುಹೆಯೊಳಗೆ ಕಳುಹಿಸಲಾಯಿತು.
ಪ್ರವಾಸಿಗರಿಗೆ ನಿರ್ಬಂಧ: ಯಾವುದೇ ಅಹಿತಕರ ಘಟನೆಗಳಿಗೆ ಅವಕಾಶವಾಗದಂತೆ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿತ್ತು. ಜಿಲ್ಲಾಡಳಿತ ಪ್ರವಾಸಿ ಗರ ಭೇಟಿಗೆ ನಿರ್ಬಂಧ ಹೇರಿತ್ತು. ಮಾರ್ಗ ಮಧ್ಯೆಯಲ್ಲಿಯೇ ಚೆಕ್‌ಪೋಸ್ಟ್‌ಗಳಲ್ಲಿ ಪ್ರವಾಸಿ ವಾಹನಗಳನ್ನು ತಡೆದು ದತ್ತಪೀಠಕ್ಕೆ ತೆರಳುವಂತಿಲ್ಲ ಎಂದು ತಿಳಿಸಿ ವಾಪಸ್ ಕಳುಹಿಸಲಾಗುತ್ತಿತ್ತು. ದತ್ತಮಾಲಾಧಾರಿಗಳಿಗೆ ಮಾತ್ರ ದತ್ತಪೀಠಕ್ಕೆ ಪ್ರವೇಶ ನೀಡಲಾಗಿತ್ತು.
ದತ್ತಗುಹೆಯ ಬಲಭಾಗದಲ್ಲಿ ಋತ್ವಿಕರ ಸಮ್ಮುಖದಲ್ಲಿ ಶ್ರೀ ಸತ್ಯದತ್ತ ವ್ರತ, ಗಣಪತಿ ಹೋಮ ಹಾಗೂ ದತ್ತ ಹೋಮಗಳು ನಡೆದವು. ಪೂರ್ಣಾಹುತಿಯಲ್ಲಿ ಶ್ರೀರಾಮಸೇನೆಯ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್, ಶ್ರೀರಾಮಸೇನೆ ರಾಜ್ಯ ಕಾರ್ಯಾಧ್ಯಕ್ಷ ಗಂಗಾಧರ ಕುಲಕರ್ಣಿ, ಉಪಾಧ್ಯಕ್ಷ ಮಹೇಶ್ ಕುಮಾರ್ ಇತರರಿದ್ದರು.