Advertisement

ಜಿಲ್ಲೆಯಲ್ಲಿ ಬಹಿರಂಗ ಪ್ರಚಾರಕ್ಕೆ ತೆರೆ

09:52 PM Apr 16, 2019 | Team Udayavani |

ದೇವನಹಳ್ಳಿ: ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಚುನಾವಣೆಯ ಬಹಿರಂಗ ಪ್ರಚಾರಕ್ಕೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಮಂಗಳವಾರ ಸಂಜೆ 6 ಗಂಟೆಗೆ ತೆರೆ ಬಿದ್ದಿದ್ದು, ರಾಜಕೀಯ ಪಕ್ಷಗಳ ಅಭ್ಯರ್ಥಿಗಳು ಹಾಗೂ ಬೆಂಬಲಿಗರು ಮನೆ ಮನೆ ಪ್ರಚಾರಕ್ಕೆ ಮುಂದಾಗಿದ್ದಾರೆ.

Advertisement

ಕಳೆದ ಕೆಲವು ದಿನಗಳಿಂದ ರಾಜಕೀಯ ಪಕ್ಷಗಳ ಮುಖಂಡರು ಹಾಗೂ ಕಾರ್ಯಕರ್ತರು ಮತದಾರರ ಮನವೊಲಿಸಲು ಭಾರೀ ಬಹಿರಂಗ ಸಭೆಗಳನ್ನು ನಡೆಸಿ, ಟಬ್ಬರದ ಪ್ರಚಾರ ಮಾಡುತ್ತಿದ್ದರು. ಇದೀಗ ಮತದಾನಕ್ಕೆ ಕ್ಷಣಗಣನೆ ಆರಂಭವಾಗಿರುವುದರಿಂದ ನಿಯಮದಂತೆ ಬಹಿರಂಗ ಪ್ರಚಾರವನ್ನು ಅಂತ್ಯಗೊಳಿಸಿದ್ದಾರೆ.

ಹಾಗಾಗಿ, ಮನೆ ಮನೆ ಪ್ರಚಾರಕ್ಕೆ ಮುಂದಾಗಿದ್ದಾರೆ. ಗಲ್ಲಿ, ಗಲ್ಲಿಗಳಲ್ಲಿ ಕಾರ್ಯಕರ್ತರು ಕರಪತ್ರಗಳನ್ನು ಹಿಡಿದು ಮನೆ ಮನೆಗೆ ತೆರಳಿ ತಮ್ಮ ಅಭ್ಯರ್ಥಿಗೆ ಮತ ನೀಡಬೇಕೆಂದು ಮನವಿ ಮಾಡುತ್ತಿದ್ದ ದೃಶ್ಯ ಕಂಡುಬಂದಿತು.

ಮನೆ ಮನೆ ಪ್ರಚಾರ: ಏ.18ರ ಗುರುವಾರ ಮತದಾನ ನಡೆಯುವುದರಿಂದ ಚುನಾವಣಾ ಆಯೋಗ ಏ.16ರ ಬುಧವಾರ ಸಂಜೆ 5 ಗಂಟೆ ವರೆಗೆ ಮಾತ್ರ ಬಹಿರಂಗ ಸಭೆ, ರೋಡ್‌ ಶೋ, ಧ್ವನಿ ವರ್ಧಕ ಬಳಕೆಗೆ ಅವಕಾಶ ನೀಡಿತ್ತು. ಹಾಗಾಗಿ, ಅಭ್ಯರ್ಥಿಗಳು ಹಾಗೂ ಬೆಂಬಲಿಗರು, ಕಾರ್ಯಕರ್ತರು ಸಂಜೆ 5 ಗಂಟೆ ನಂತರ ಮತದಾರರನ್ನು ಓಲೈಸಲು ಮನೆ ಮನೆ ಪ್ರಚಾರ ನಡೆಸಲು ಆರಂಭಿಸಿದರು.

ಈ ಹಿಂದೆ ರಾಜಕೀಯ ಪಕ್ಷಗಳ ಸ್ಥಳೀಯ ಕಾರ್ಯಕರ್ತರು ತಮ್ಮ ತಮ್ಮ ಅಭ್ಯರ್ಥಿಗಳ ಪರವಾಗಿ ಮತದಾರರ ಪಟ್ಟಿಗಳನ್ನು ಸಂಗ್ರಹಿಸಿ, ಸಂಬಂಧಿಸಿದ ಮತದಾರರ ಮನೆಗಳಿಗೆ ತಲುಪಿಸುತ್ತಿದ್ದರು. ಆದರೆ, ಈಗ ಮತದಾರರ ಚೀಟಿಗಳನ್ನು ಚುನಾವಣಾ ಸಿಬ್ಬಂದಿಯೇ ವಿತರಿಸುವುದರಿಂದ ಕಾರ್ಯಕರ್ತರು ಹಾಗೂ ಅಭ್ಯರ್ಥಿಗಳ ಬೆಂಬಲಿಗರು ಆ ಜವಾಬ್ದಾರಿಯಿಂದ ವಿಮುಕ್ತರಾಗಿದ್ದಾರೆ.

Advertisement

ಟೋಪಿ ಹಾಕಿಕೊಂಡು ಪ್ರಚಾರ: ರಾಜಕೀಯ ಪಕ್ಷಗಳ ಕಾರ್ಯಕರ್ತರು ಗರಿಷ್ಠ 37 ಡಿಗ್ರಿ ಬಿಸಿಲಿನ ತಾಪಮಾನದಲ್ಲೂ ತಮ್ಮ ಅಭ್ಯರ್ಥಿಗಳ ಪರ ಭರದ ಪ್ರಚಾರ ನಡೆಸಿದ್ದರು. ಬಿಸಿಲಿನ ತಾಪಕ್ಕೆ ರಾಜಕೀಯ ಪಕ್ಷಗಳ ಮುಖಂಡರು ಹೈರಾಣಾರಾಗುತ್ತಿದ್ದರು. ಮುಖಂಡರು ಜನರ‌ನ್ನು ಸೆಳೆಯುವ ದೃಷ್ಟಿಯಿಂದ ವಾಯು ವಿಹಾರ ಮತ್ತಿತರೆ ಜನನಿಬಿಡ ಪ್ರದೇಶಗಳಲ್ಲಿ ಪ್ರಚಾರ ಕೈಗೊಂಡಿದ್ದರು. ಕಾರ್ಯಕರ್ತರು ಬಿಸಿಲಿನ ತಾಪದಿಂದ ರಕ್ಷಣೆ ಪಡೆಯಲು ಟೋಪಿ ಹಾಕಿಕೊಂಡು ಪ್ರಚಾರದಲ್ಲಿ ತೊಡಿದ್ದರು.

ನೆತ್ತಿ ಸುಡುವ ಬಿಸಿಲಲ್ಲೂ ಪ್ರಚಾರ: ಮೈತ್ರಿ ಅಭ್ಯರ್ಥಿ ವೀರಪ್ಪ ಮೊಯ್ಲಿ ಮಂಗಳವಾರ ಬೆಳಗ್ಗೆ 10ಕ್ಕೆ ನಗರ ಹಾಗೂ ವಿಜಯಪುರದಲ್ಲಿ ರೋಡ್‌ ಶೋ ನಡೆಸಿ ಮತ ಯಾಚಿಸಿದರು. ಬೆಂಗಳೂರು ಗ್ರಾಮಾಂತರ ಜಿಲ್ಲೆಯ 4 ತಾಲೂಕುಗಳಲ್ಲಿ ಜಿಲ್ಲಾದ್ಯಂತ ಬಿಸಿಲಿನ ಅಬ್ಬರ ಹೆಚ್ಚಾಗಿದ್ದು, ಮನೆ ಮನೆ ಪ್ರಚಾರ ಮಾಡುತ್ತಿದ್ದ ಕಾರ್ಯಕರ್ತರ ನೆತ್ತಿ ಸುಡುತ್ತಿತ್ತು. ಬಹಿರಂಗ ಪ್ರಚಾರ ಅಂತ್ಯವಾಗಿರುವ ಹಿನ್ನೆಲೆಯಲ್ಲಿ ವಿವಿಧ ಪಕ್ಷಗಳ ಮುಖಂಡರು, ಕಾರ್ಯಕರ್ತರು ಮನೆ ಮನೆ ಪ್ರಚಾರದ ಮೂಲಕ ಅಂತಿಮ ಕಸರತ್ತಿಗೆ ಸಜ್ಜಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next