Advertisement
ರಾಜ್ಯದ ಮೂವತ್ತಾರು ಸಾವಿರ ಕೆರೆಗಳ ಬೃಹತ್ ಮಾಹಿತಿ ಹಿಡಿದು ಕೆರೆ ನೋಡುತ್ತ ಹೊರಟಿದ್ದೆ. ಸಾವಿರಾರು ಕೆರೆಗಳನ್ನು ಖುದ್ದಾಗಿ ನೋಡಿದ್ದಾಯ್ತು. ಕೆರೆಗಳನ್ನು ಸನಿಹ ಹೋಗುವುದಕ್ಕಿಂತ ಮುಂಚೆ ಪೂರ್ವಸಿದ್ಧತೆಯಾಗಿ ಅದರ ಸ್ವರೂಪ ಅರ್ಥಮಾಡಿಕೊಳ್ಳಲು ಕೈಯಲ್ಲಿದ್ದ ಟ್ಯಾಂಕ್ ರಿಜಿಸ್ಟರ್ ಓದುತ್ತಿದ್ದೆ. ಕೆರೆ ತೋರಿಸಲು ಬಂದವರು ನಕ್ಷೆ ತೋರಿಸುತ್ತ ಕಾಲುವೆಯ ಉದ್ದ, ಕೆರೆ ಭರ್ತಿಯಾದಾಗ ಹೆಚ್ಚುವರಿ ನೀರು ಹರಿಯುವ ಕೋಡಿಯ ದಿಕ್ಕು ಹೇಳುತ್ತಿದ್ದರು. ತೂಬಿನ ಎತ್ತರ ಗೊತ್ತಾದರೆ ಕೆರೆಯಲ್ಲಿ ಎಷ್ಟು ಹೂಳಿದೆಯೆಂದು ಅರ್ಥಮಾಡಿಕೊಳ್ಳಲು ಸುಲಭ. ಬೀದರ್‌ನಿಂದ ಚಾಮರಾಜನಗರದ ತುದಿ ತಲುಪಿದರೂ ಹಲವು ಕೆರೆಗಳ ತೂಬಿನ ವಿವರ ಕೈಯಲ್ಲಿತ್ತೇ ಹೊರತೂ ಅವು ಬಳಕೆಯಲಿಲ್ಲ. ಕೃಷಿಗೆ ನೀರುಣಿಸುವ ತೂಬಿನ ಬಾಯಿ ಮುಚ್ಚಿ ಕೆರೆಯಲ್ಲಿ ಭರ್ತಿ ನೀರು ನಿಲ್ಲಿಸಿ ಅಂತರ್ಜಲ ಹೆಚ್ಚಿಸುವ ಕಾಲಕ್ಕೆ ರಾಜ್ಯ ಬದಲಾಗಿದೆ. ಕೆರೆ ಕಾಲುವೆಯಲ್ಲಿ ಹರಿಯುತ್ತಿದ್ದ ಮೇಲ್ಮೆ„ ನೀರು ಬಳಕೆ ನಿಂತು ಕೊಳವೆ ಬಾವಿಯ ಅಂತರ್ಜಲ ಹೆಚ್ಚಳಕ್ಕೆ ಕೆರೆಯಲ್ಲಿ ನೀರು ನಿಲ್ಲಿಸುವ ಹಂತಕ್ಕೆ ನಾವೀಗ ತಲುಪಿದ್ದೇವೆ.
ತುಮಕೂರಿನ ಸ್ವಾಂದೇವನಹಳ್ಳಿ ಕೆರೆ ಐದು ಹೆಕ್ಟೇರ್ ವಿಸ್ತೀರ್ಣವಿದೆ. ದೇವರಾಯನದುರ್ಗ, ರಂಗನಾಥಸ್ವಾಮಿ ಬೆಟ್ಟದಲ್ಲಿ ಸುರಿದ ಮಳೆ ನೀರಿನಿಂದ ಈ ಕೆರೆ ತುಂಬಬೇಕು. ಕೆರೆ ನಂಬಿ ತೆಂಗು, ಜೋಳ, ಅಡಿಕೆ, ರಾಗಿ, ಹುರುಳಿ ಬೆಳೆಯುವ ಪ್ರದೇಶಕ್ಕೆ ಇಂದು ನೀರು ಹರಿಯುವುದಿಲ್ಲ. ರೈತರಿಗೆ ಕೆರೆ ತುಂಬಿದರೆ ಸಾಕು, ಅದರಿಂದ ಕೊಳವೆ ಬಾವಿಗೆ ನೀರಾಗುತ್ತದೆಂಬ ಆಸೆ. 88 ಹೆಕ್ಟೇರ್ ವಿಸ್ತೀರ್ಣದ ಹಾಸನದ ಬೇಲೂರಿನ ಮುಗಳೂರು ಕೆರೆಯದೂ ಇದೇ ಕಥೆ, ತೂಬನ್ನು ಹತ್ತು ವರ್ಷಗಳ ಹಿಂದೆಯೇ ಸಣ್ಣ ನೀರಾವರಿ ಇಲಾಖೆ ಮುಚ್ಚಿ ಭದ್ರಪಡಿಸಿದೆ. ಬಳ್ಳಾರಿಯ ಹಿರೇಹಡಗಲಿ ಕೆರೆ, ಚೆನ್ನಗಿರಿಯ ನೀತಿಗೆರೆ, ವದಿಗೆರೆ, ಬೆಂಕಿಕೆರೆ ಸೇರಿದಂತೆ ಯಾವ ಕೆರೆಗೆ ಹೋದರೂ ತೂಬು ಮುಚ್ಚಿ ಹನ್ನೆರಡು ವರ್ಷಗಳಾಗಿವೆ. ಸಮುದಾಯದ ನಿರ್ವಹಣೆಯಲ್ಲಿ ನೀರಾವರಿಯಾಗುತ್ತಿದ್ದ ಕೆರೆ ನಂಬಿ ಬದುಕುವುದಕ್ಕಿಂತ ಸ್ವಂತಕ್ಕೊಂದು ಕೊಳವೆ ಬಾವಿಯಲ್ಲಿ ಸ್ವಾವಲಂಬನೆ ಹೊಂದುವ ಹುಚ್ಚು ಆವರಿಸಿದೆ. ಬಳ್ಳಾರಿ, ಚಿತ್ರದುರ್ಗ, ಕೊಪ್ಪಳ, ದಾವಣಗೆರೆ, ಹಾವೇರಿ, ಹಾಸನ, ತುಮಕೂರು, ಚಾಮರಾಜನಗರ, ಧಾರವಾಡ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಜಿಲ್ಲಾಧಿಕಾರಿ ಅಥವಾ ಸಣ್ಣ ನೀರಾವರಿ ಇಲಾಖೆಯ ನೇತೃತ್ವದಲ್ಲಿ ತೂಬು ಮುಚ್ಚುವ ಕಾರ್ಯಾಚರಣೆ ಹತ್ತು ವರ್ಷಗಳ ಹಿಂದೆ ನಡೆದಿದೆ. ಕೆರೆಯ ನೀರು ನಿರ್ವಹಿಸುತ್ತಿದ್ದ ನೀರುಗಂಟಿಗಳು ನಿವೃತ್ತರಾಗಿದ್ದು ಒಂದು ಕಾರಣವಾದರೆ ತೂಬು ಬಿಟ್ಟರೆ ಕೆರೆ ನೀರೆಲ್ಲ ಖಾಲಿಯಾಗಿ ಬೇಸಿಗೆಯಲ್ಲಿ ಕುಡಿಯುವ ನೀರಿಗೂ ಸಂಕಷ್ಟವೆಂದು ಜಿಲ್ಲಾಡಳಿತ ಭವಿಷ್ಯದ ಜಲಸಂರಕ್ಷಣೆಗೆ ಈ ನಿರ್ಧಾರ ಮಾಡಿದೆ.
Related Articles
20 ವರ್ಷಗಳ ಹಿಂದೆ ಕೆರೆ ತಗ್ಗಿನ ಭೂಮಿಯಲ್ಲಿ ನೂರಡಿ ಆಳಕ್ಕೆ ನೀರು ದೊರೆಯುತ್ತಿದ್ದ ಪರಿಸ್ಥಿತಿಯಿತ್ತು. ಇಂದು ಸಾವಿರ ಅಡಿ ಕೊಳವೆ ಬಾವಿ ಕೊರೆದರೂ ನೀರಿಲ್ಲದ ದುಃಸ್ಥಿತಿಯಿದೆ. ದಾಖಲೆಯಲ್ಲಿ ಕೆರೆ ನೀರಾವರಿಯೆಂದು ನಮೂದಿಸಿದ ಭೂಮಿಗಳೆಲ್ಲ ಇಂದು ಕೊಳವೆ ಬಾವಿ ಆಶ್ರಿತವಾಗಿವೆ. ಮಳೆಗಾಲದಲ್ಲಿ ಮೂರು ನಾಲ್ಕು ತಿಂಗಳ ಭತ್ತ ಬೆಳೆಯುತ್ತಿದ್ದ ಪ್ರದೇಶಗಳು ಅಡಿಕೆ, ತೆಂಗಿನ ಬಹುವಾರ್ಷಿಕ ತೋಟಗಳಾಗಿ ಬದಲಾಗಿ ವರ್ಷವಿಡೀ ನೀರು ಬಯಸುತ್ತಿವೆ. ಚೆನ್ನಗಿರಿಯಿಂದ ಚಿತ್ರದುರ್ಗದತ್ತ ಹೋದರೆ ಕೆರೆ ಕಣಿವೆಯ ಕೃಷಿ ಭೂಮಿ ಬದಲಾಗಿದ್ದು ಕಾಣಿಸುತ್ತದೆ. ಸುರಿಯುವ ಮಳೆ ಲೆಕ್ಕ ಹಾಕಿ ನಿರ್ಮಿಸಿದ ಶತಮಾನದ ಕೆರೆಗಳು ನಿರ್ವಹಣೆಯಿಲ್ಲದೆ ಹಾಳಾಗುತ್ತಾ ಹೂಳು ತುಂಬಿವೆ. ಇಂಥ ಪರಿಸ್ಥಿತಿಯಲ್ಲಿ ಅಳಿದುಳಿದ ಕೆರೆಗಳನ್ನು ಉಳಿಸಿಕೊಳ್ಳಲು ಕೆರೆಗೆ ನೀರು ತುಂಬಿಸುವ ಕೆಲಸ ಮುಖ್ಯ. ಮಳೆ ನೀರಿನಿಂದ ಅಥವಾ ಅಣೆಕಟ್ಟೆ ಕಾಲುವೆಗಳ ಮೂಲಕ ಕೆರೆಗಳಿಗೆ ನೀರು ಭರ್ತಿಮಾಡಿ ಕೃಷಿ ಉಳಿಸುವ ಪ್ರಯತ್ನ ನಡೆದಿದೆ.
Advertisement
ನೀರು ಓಡಬಾರದು ಇಂಗಬೇಕುಕಣಿವೆಯ ಕೃಷಿ ಹಾಗೂ ಕುಡಿಯುವ ನೀರಿನ ದೊಡ್ಡ ಸಮಸ್ಯೆ ಇದರಿಂದ ಕಡಿಮೆಯಾಗುತ್ತದೆ. ಕೆರೆಗಳ ಹೂಳೆತ್ತಿ ಹೆಚ್ಚು ನೀರು ನಿಲ್ಲಿಸುವ ಅವಕಾಶ ಕಲ್ಪಿಸಬೇಕು. ಅಯ್ಯೋ! ಕೆರೆಯಿಂದ ನೀರು ಹರಿಯದಿದ್ದರೆ ಹೊಳೆ ಹಳ್ಳಗಳು ಒಣಗಬಹುದಲ್ಲವೇ? ಹಾಗೇನಿಲ್ಲ, ಒಂದು ಪ್ರಮಾಣದ ನೀರು ಭರ್ತಿಯಾದ ಬಳಿಕ ಒಸರು ಜಲವಾಗಿ, ಒರತೆಯಾಗಿ ತಗ್ಗಿನತ್ತ ನೀರು ಕಾಲುವೆಯಿಲ್ಲದಿದ್ದರೂ ಹೋಗೇ ಹೋಗುತ್ತದೆ. ವೇಗವಾಗಿ ನೀರು ಓಡುವ ಕಾಲುವೆಗಿಂತ ಭೂಮಿಯಲ್ಲಿ ಇಂಗಿ ಹೋಗುವ ಕ್ರಿಯೆಯಿಂದ ಜಲಸಮೃದ್ಧಿಯಾಗುತ್ತದೆ. – ಶಿವಾನಂದ ಕಳವೆ