Advertisement

ಮತ್ತೆ ನಿರ್ಮಾಣಗೊಳ್ಳಲಿದೆ ‘ಕ್ಲಾಕ್‌ ಟವರ್‌’

11:38 AM Dec 28, 2017 | Team Udayavani |

ಮಹಾನಗರ: ಮಂಗಳೂರಿನ ಹೆಗ್ಗುರುತಾಗಿದ್ದ ಹಂಪನಕಟ್ಟೆಯ ‘ಕ್ಲಾಕ್‌ ಟವರ್‌’ ಇದ್ದ ಜಾಗದಲ್ಲಿಯೇ ವಿನೂತನ ಶೈಲಿಯ ‘ಕ್ಲಾಕ್‌ ಟವರ್‌’ ನಿರ್ಮಾಣ ಮಾಡುವ ಮೂಲಕ ಮಂಗಳೂರಿನ ಹಳೆಯ ನೆನಪುಗಳನ್ನು ಕಾಪಾಡುವ ಮಹತ್ವದ ಕಾರ್ಯಕ್ಕೆ ಮಂಗಳೂರು ಸಿದ್ಧಗೊಳ್ಳುತ್ತಿದೆ.

Advertisement

ಮಂಗಳೂರು ಮೇಯರ್‌ ಕವಿತಾ ಸನಿಲ್‌ ಅವರ ಆಗ್ರಹದ ಮೇರೆಗೆ ಸ್ಮಾರ್ಟ್‌ ಸಿಟಿ ಯೋಜನೆಯಲ್ಲಿ ನೂತನ ಕ್ಲಾಕ್‌ ಟವರ್‌ ನಿರ್ಮಾಣಕ್ಕೆ ಒಪ್ಪಿಗೆ ನೀಡಲಾಗಿದೆ. ಈ ಹಿಂದೆ ಪ್ರಸ್ತಾವಿತ ಸ್ಮಾರ್ಟ್‌ ಸಿಟಿ ಯೋಜನೆಯಲ್ಲಿ ಕ್ಲಾಕ್‌ ಟವರ್‌ ನಿರ್ಮಾಣದ ಬಗ್ಗೆ ಉಲ್ಲೇಖವಿರಲಿಲ್ಲ. ಆ ಬಳಿಕ ನಡೆದ ಸಭೆಯಲ್ಲಿ ಮೇಯರ್‌ ಅವರ ಒತ್ತಾಯದ ಹಿನ್ನೆಲೆಯಲ್ಲಿ ಇದನ್ನು ಸೇರಿಸಿಕೊಳ್ಳಲಾಗಿದ್ದು, ಇದೀಗ ಸಿದ್ಧತೆ ನಡೆಸಲಾಗಿದೆ.

ಶೀಘ್ರದಲ್ಲಿ ಶಿಲಾನ್ಯಾಸ
ಸ್ಮಾರ್ಟ್‌ಸಿಟಿ ಯೋಜನೆಯಲ್ಲಿ ಜಾರಿಯಾಗಲಿರುವ ಈ ಯೋಜನೆಗೆ ಈಗಾಗಲೇ 90 ಲಕ್ಷ ರೂ. ಅಂದಾಜಿಸಲಾಗಿದೆ. ತುರ್ತಾಗಿ ಯೋಜನೆ ಜಾರಿಯಾಗಬೇಕು ಎಂಬ ಇರಾದೆಯಿಂದ ಮೇಯರ್‌ ಅವರು ಈಗಾಗಲೇ ಇದರ ನೀಲನಕಾಶೆ ಸಿದ್ಧಪಡಿಸಿ ಟೆಂಡರ್‌ ಕರೆಯುವ ಪ್ರಕ್ರಿಯೆಯನ್ನು ನಡೆಸಿದ್ದಾರೆ. ಈ ಮೂಲಕ ನೂತನ ಯೋಜನೆ ಶೀಘ್ರದಲ್ಲಿ ಶಿಲಾನ್ಯಾಸಗೊಳ್ಳುವ ನಿರೀಕ್ಷೆ ಇದೆ. ಪುರಭವನದ ಮುಂಭಾಗದ ಈಗಿನ ಕ್ಲಾಕ್‌ ಟವರ್‌ ಸ್ಥಳದ ಸಮೀಪದಲ್ಲಿಯೇ ನೂತನ ಕ್ಲಾಕ್‌ ಟವರ್‌ ನಿರ್ಮಾಣ ಮಾಡಲಾಗುತ್ತದೆ. ಹತ್ತಿರದ ಪಾರ್ಕ್‌ಗೆ ಹೊಂದಿಕೊಂಡಂತೆ ಟವರ್‌ ನಿರ್ಮಿಸಲಾಗುತ್ತದೆ.

ಟವರ್‌ನ ಸುತ್ತಲೂ ಸ್ಮಾರ್ಟ್‌ಸಿಟಿಗೆ ಪೂರಕವಾಗುವಂತೆ ಹಸಿರಿನ ವಾತಾವರಣವನ್ನು ಕಲ್ಪಿಸಲಾಗುತ್ತದೆ. ಟವರ್‌ನ ಮೇಲ್ಭಾಗದಲ್ಲಿ 4 ಬೃಹತ್‌ ಗಡಿಯಾರಗಳನ್ನು ಅಳವಡಿಸಲಾಗುತ್ತದೆ. ಟವರ್‌ನ ಕೆಳಭಾಗದಲ್ಲಿ ಸುತ್ತಲೂ ಸಣ್ಣ ಹೂದೋಟ ನಿರ್ಮಿಸಲಾಗುತ್ತದೆ.

ಹಲವು ವರ್ಷಗಳ ಹಿಂದೆ ದೂರ ದೂರಿನಿಂದ ನಗರದತ್ತ ಬಂದಾಗ ಹಂಪನಕಟ್ಟೆಯಲ್ಲಿ ಕಾಣಸಿಗುವ ‘ಕ್ಲಾಕ್‌ ಟವರ್‌’ ಕಂಡಾಗಲೇ ‘ಮಂಗಳೂರು ಬಂತು’ ಎಂದೇ ಹೇಳಲಾಗುತ್ತಿತ್ತು. ಮಂಗಳೂರಿನ ಗುರುತೇ ‘ಕ್ಲಾಕ್‌ ಟವರ್‌’ ಎನ್ನುವಷ್ಟರ ಮಟ್ಟಿಗೆ ಪ್ರಸಿದ್ಧಿಯಾಗಿತ್ತು. ಜನರು ಈ ‘ಕ್ಲಾಕ್‌ ಟವರ್‌’ ಮೂಲಕವೇ ಮಂಗಳೂರನ್ನು ಕಂಡು ಹಿಡಿಯುತ್ತಿದ್ದರು. ಕ್ಲಾಕ್‌ ಟವರ್‌ ಅನ್ನೇ ಆಧಾರವಾಗಿರಿಸಿ ಜನರು ತಮ್ಮ ನಿತ್ಯ ಪಯಣ ನಡೆಸುತ್ತಿದ್ದರು. ಅಷ್ಟರ ಮಟ್ಟಿಗೆ ಕ್ಲಾಕ್‌ ಟವರ್‌ ಫೇಮಸ್‌ ಆಗಿತ್ತು.

Advertisement

ಕ್ಲಾಕ್‌ ಟವರ್‌ ನೆನಪಲ್ಲಿಯೇ
ಸುಮಾರು 10-20 ವರ್ಷಗಳ ಹಿಂದೆ ಮಂಗಳೂರು ಪಾಲಿಕೆಯ ನಿರ್ಧಾರದಿಂದ ಕ್ಲಾಕ್‌ ಟವರ್‌ ನೆನಪಲ್ಲಿಯೇ ಉಳಿಯುವಂತಾಗಿತ್ತು. ರಸ್ತೆ ವಿಸ್ತರಣೆ ಮಾಡುವ ನೆಪದಲ್ಲಿ ಮಂಗಳೂರಿನ ಹೆಗ್ಗುರುತು ಕ್ಲಾಕ್‌ ಟವರನ್ನೇ ಅಂದು ನೆಲಸಮ ಮಾಡಲಾಯಿತು. ಅಂದಿನಿಂದ ಕ್ಲಾಕ್‌ ಟವರ್‌ ಸ್ಥಳ ಕ್ಲಾಕ್‌ ಟವರ್‌ ಇಲ್ಲದೆ, ಅದರ ಹೆಸರಿನಲ್ಲಿಯೇ ಬಾಕಿಯಾಯಿತು. ಈಗಲೂ ಕ್ಲಾಕ್‌ ಟವರ್‌ ಇದ್ದ ಸ್ಥಳವನ್ನು ಕ್ಲಾಕ್‌ ಟವರ್‌ ಎಂದೇ ಕರೆಯುತ್ತಾರೆ. ಅಷ್ಟರ ಮಟ್ಟಿಗೆ ಕ್ಲಾಕ್‌ ಟವರ್‌ ಹೆಸರು ಫೇಮಸ್‌ ಆಗಿದೆ. 

ಕ್ಲಾಕ್‌ ಟವರ್‌ನ ಬಗ್ಗೆ
ಕ್ಲಾಕ್‌ ಟವರ್‌ ಮುಖ್ಯ ಬಿಲ್ಡಿಂಗ್‌ ಕೆಲಸಗಳಿಗೆ 35 ಲಕ್ಷ ರೂ. ನಿಗದಿ ಮಾಡಲಾಗಿದೆ. ಉಳಿದಂತೆ ಯಾರ್ಡ್‌ ಕಾಮಗಾರಿ, ಅಲ್ಯೂಮಿನಿಯಂ ಲ್ಯಾಡರ್‌ಗಳ ಬಳಕೆ, 4 ಬೃಹತ್‌ ಗೋಡೆ ಗಡಿಯಾರ ಸೇರಿದಂತೆ ಇತರ ಉಪಕರಣ ಅಳವಡಿಕೆ, ಎಲೆಕ್ಟ್ರಿಕ್‌ ಕೆಲಸ, ಲ್ಯಾಂಡ್‌ಸ್ಕೇಪಿಂಗ್‌ ಕೆಲಸಗಳು ನಡೆಯಲಿವೆ. ಇದಕ್ಕಾಗಿ ಒಟ್ಟು 90 ಲಕ್ಷ ರೂ.ಗಳನ್ನು ನಿಗದಿಗೊಳಿಸಲಾಗಿದೆ. ಕ್ಲಾಕ್‌ ಟವರ್‌ನ ಮುಖ್ಯ ಬಿಲ್ಡಿಂಗ್‌ನಲ್ಲಿ ಗಾಂಧೀಜಿಯವರ ಪ್ರತಿಮೆ ಇರಲಿದೆ. ಆಕರ್ಷಕ ಶೈಲಿಯಲ್ಲಿ ಟವರ್‌ ನಿರ್ಮಾಣ ನಡೆಯಲಿದೆ.

‘ಕ್ಲಾಕ್‌ ಟವರ್‌ ನನ್ನ ಕನಸು’
ಹಂಪನಕಟ್ಟೆಯ ಹಳೆ ಕ್ಲಾಕ್‌ ಟವರ್‌ ಇದ್ದ ಜಾಗದಲ್ಲಿ ಅದೇ ಮಾದರಿಯಲ್ಲಿ ಹೊಸ ಕ್ಲಾಕ್‌ ಟವರ್‌ ನಿರ್ಮಿಸುವುದು ನನ್ನ ಬಹು ಕಾಲದ ಕನಸಾಗಿತ್ತು. ಹಾಗಾಗಿ ಸ್ಮಾರ್ಟ್‌ ಸಿಟಿ ಯೋಜನೆಗೆ ಅದನ್ನು ಸೇರ್ಪಡೆ ಮಾಡಲಾಗಿದೆ. ಹಳೆ ಕ್ಲಾಕ್‌ ಟವರ್‌ ಮಾದರಿಯಲ್ಲಿ 21 ಮೀಟರ್‌ ಉದ್ದದ ಹೊಸ ಟವರ್‌ ಅನ್ನು ನಿರ್ಮಾಣ ಮಾಡಲಾಗುತ್ತದೆ.
  – ಕವಿತಾ ಸನಿಲ್‌,
    ಮೇಯರ್‌

Advertisement

Udayavani is now on Telegram. Click here to join our channel and stay updated with the latest news.

Next