Advertisement
ಸಾಮಾನ್ಯವಾಗಿ ರಸ್ತೆ, ಹೆದ್ದಾರಿಗಳಲ್ಲಿ ಹೆಚ್ಚು ಅಪಘಾತಗಳು ಸಂಭಸುವುದು ತಡರಾತ್ರಿಯಲ್ಲಿ ಅಥವಾ ಬೆಳಗಿನ ಜಾವದಲ್ಲಿ. ದೇಹ ನಿದ್ದೆ ಅಥವಾ ವಿಶ್ರಾಂತಿ ಬಯಸುತ್ತಿದ್ದರೂ ವಾಹನಚಾಲನೆಯಂಥ ಅತ್ಯಂತ ಜಾಗರೂಕತೆಯ ಕೆಲಸಕ್ಕೆ ಅದನ್ನು ಒತ್ತಾಯಪೂರ್ವಕವಾಗಿ ತೊಡಗಿಸುವುದೇ ಇದಕ್ಕೆ ಕಾರಣ. ಇದೇ ರೀತಿ ಹಗಲಿನ ಲವಲವಿಕೆಯ ಸಮಯದಲ್ಲಿ ಬಲವಂತವಾಗಿ ವಿಶ್ರಮಿಸುವ ಅಥವಾ ನಿದ್ರಿಸುವ ಪ್ರಯತ್ನವೂ ಸಫಲವಾಗುವುದಿಲ್ಲ. ಇವೆಲ್ಲ ನಿಸರ್ಗದ ಜಾಯಮಾನಕ್ಕೆ ಒಗ್ಗದ ಕ್ರಿಯೆಗಳಾಗಿರುವುದೇ ಕಾರಣ.
Related Articles
Advertisement
ಮಾನವನಂತೆಯೇ ಇತರ ಪ್ರಾಣಿಪಕ್ಷಿಗಳ ವರ್ತನೆಗಳೂ ಹೀಗೇ ಇರುವುದನ್ನು ನಾವು ಕಾಣಬಹುದು. ಬೆಳಗಾಗುತ್ತಿದ್ದಂತೆ ಕೋಳಿ ಕೂಗತೊಡಗುತ್ತದೆ. ಹಕ್ಕಿಗಳ ಚಿಲಿಪಿಲಿ ಪ್ರಾರಂಭವಾಗುತ್ತದೆ. ಕಾಗೆಗಳು ಕಾ…ಕಾ.. ಎಂದು ಕೂಗುತ್ತಾ ಹಾರಾಡತೊಡಗುತ್ತವೆ. ಕೊಟ್ಟಿಗೆಯಲ್ಲಿ ಹಸು ಕರುಗಳು ಅಂಬಾ ಎಂದು ಕರೆಯಲಾರಂಭಿಸುತ್ತವೆ. ಮೂಕಪ್ರಾಣಿಗಳ ಈ ಎಲ್ಲ ವರ್ತನೆಗೂ ಜೈವಿಕ ಗಡಿಯಾರವೇ ಪ್ರೇರಣೆ.
ಸಸ್ಯ ಸಂಕುಲವೂ ಇದಕ್ಕೆ ಹೊರತಾಗಿಲ್ಲ. ಬೆಳಗಾಗುತ್ತಿದ್ದಂತೆ ಮಲ್ಲಿಗೆ, ಪಾರಿಜಾತ, ಗುಲಾಬಿಯಂಥ ಹೂವುಗಳು ಗಿಡದಲ್ಲಿ ಅರಳಿ ಘಮಘಮಿಸತೊಡಗುತ್ತವೆ. ಕೇವಲ ರಾತ್ರಿಯಲ್ಲೇ ಅರಳುವ ಬ್ರಹ್ಮಕಮಲದಂತಹ ಹೂವುಗಳೂ ಉಂಟು. ಋತುಮಾನಕ್ಕೆ ಅನುಗುಣವಾಗಿ ಚಿಗುರುವ, ಹೂ ಬಿಡುವ, ಕಾಯಿ ಬಿಟ್ಟು ಹಣ್ಣಾಗಿಸುವ ಗಿಡಮರಗಳ ವರ್ತನೆ ಅವುಗಳಲ್ಲಿನ ಜೈವಿಕ ಗಡಿಯಾರದ ಪ್ರಭಾವಕ್ಕೆ ಇನ್ನೊಂದು ನಿದರ್ಶನ ಎನ್ನಬಹುದು.ಇಷ್ಟೇ ಅಲ್ಲ, ಬಾಲ್ಯ, ಯೌವನ, ವೃದ್ಧಾಪ್ಯಗಳಂತಹ ದೈಹಿಕ ಬೆಳವಣಿಗೆಗಳ ಬದಲಾವಣೆಗಳಿಗೂ ಜೈವಿಕ ಗಡಿಯಾರವೇ ಕಾರಣ ಎಂದು ಸಹ ವಿಜಾnನಿಗಳು ಹೇಳುತ್ತಾರೆ.
ಇಂದಿನ ನಾಗರಿಕತೆಯ ನಾಗಾಲೋಟದಲ್ಲಿ ನಿಸರ್ಗ ನಿಯಮಗಳಿಗೆ ವಿರುದ್ಧವಾಗಿ ಅನೇಕ ಬಗೆಯ ಅಭಿವೃದ್ಧಿ ಪರ ಚಟುವಟಿಕೆಗಳು ತ್ವರಿತಗತಿಯಲ್ಲಿ ನಡೆಯುತ್ತಿರುವುದು ಜೈವಿಕ ಗಡಿಯಾರದ ಮೇಲೆ ದುಷ್ಪರಿಣಾಮವನ್ನುಂಟು ಮಾಡುತ್ತಿದೆ ಎಂದು ಪರಿಸರವಾದಿಗಳು ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಇಂಥ ಏರುಪೇರುಗಳಿಂದ ನೈಸರ್ಗಿಕ ಸಮತೋಲನ ತಪ್ಪುತ್ತಿದ್ದು ಭೂಕಂಪ, ಚಂಡಮಾರುತ, ಸುನಾಮಿ, ಭೀಕರ ಪ್ರವಾಹಗಳಂಥ ನೈಸರ್ಗಿಕ ವಿಕೋಪಗಳೂ ಸೇರಿದಂತೆ ಅನೇಕ ಬಗೆಯ ವ್ಯತಿರಿಕ್ತ ಪರಿಣಾಮಗಳು ಉಂಟಾಗಿ, ಇದರ ಪ್ರಭಾವ ಜೈವಿಕ ಗಡಿಯಾರದ ಮೇಲೂ ಕಂಡುಬರಬಹುದಾಗಿದೆ ಎಂದೂ ತಜ್ಞರು ಎಚ್ಚರಿಸುತ್ತಿದ್ದಾರೆ.
-ಡಿ. ವಿ. ಹೆಗಡೆ