Advertisement
ಇಲ್ಲಿ 50ಕ್ಕೂ ಅಧಿಕ ಮನೆಗಳಿವೆ. ಕೆಲ ಮನೆಗಳು ಹರಿಹರ ವ್ಯಾಪ್ತಿಯಲ್ಲಿವೆ. ಕಲ್ಲಾಜೆ-ಇಜ್ಜಿನಡ್ಕ ನಡುವೆ ಸಂಪರ್ಕ ಸಾಧಿಸುವ ಇಜ್ಜಿನಡ್ಕದಲ್ಲಿ ಹರಿಯುವ ತೋಡಿಗೆ ಸೇತುವೆ ಇಲ್ಲ. ತಾತ್ಕಾಲಿಕ ಸೇತುವೆ ನಿರ್ಮಿಸಿ ಅದರ ಮೇಲೆ ಜನ ನಡೆದಾಡುತ್ತಿದ್ದಾರೆ. ಮಳೆಗಾಲದಲ್ಲಿ ನೆರೆ ಬಂದು ಸೇತುವೆ, ತಾತ್ಕಾಲಿಕ ಸೇತುವೆ ಎರಡೂ ಮುಳುಗಿದರೆ ಸಂಪರ್ಕ ಅಸಾಧ್ಯ. ಇಜ್ಜಿನಡ್ಕದಿಂದ ಕಲ್ಲಾಜೆ ಶಾಲೆಗೆ ಮಕ್ಕಳು ಬರುತ್ತಿದ್ದು, ಜಾಸ್ತಿ ಮಳೆಯಾದಾಗೆಲ್ಲ ಶಾಲೆಗೆ ರಜೆ ಘೋಷಿಸಬೇಕಾದ ಅನಿವಾರ್ಯತೆಯೂ ಎದುರಾಗುತ್ತದೆ.
ಸುಬ್ರಹ್ಮಣ್ಯ- ಸುಳ್ಯ- ಮಡಿಕೇರಿ ರಾಜ್ಯ ಹೆದ್ದಾರಿಯ ಮಧ್ಯೆ ಕಲ್ಲಾಜೆ ಪೇಟೆ ಸಿಗುತ್ತದೆ. ಬೆಟ್ಟಗುಡ್ಡಗಳ ನಡುವಿನ ಈ ಊರಲ್ಲಿ ಸಮಸ್ಯೆಗಳೂ ಬೃಹದಾಕಾರವಾಗಿವೆ. ದೈನಂದಿನ ಕೆಲಸ ಕಾರ್ಯಗಳಿಗೆ ಮೂಲಸೌಕರ್ಯ ಇಲ್ಲದೆ ತೊಡಕಾಗಿದೆ. ಸುಮಾರು 1,000 ಜನಸಂಖ್ಯೆ ಇಲ್ಲಿದೆ. ಇಜ್ಜಿನಡ್ಕ, ಬಳ್ಳಡ್ಕ, ಉಪ್ಪಳಿಕೆ, ಮಾಣಿಬೈಲು, ಅಲೆಪ್ಪಾಡಿ, ಪದೇಲ ಕುಜುಂಬಾರು, ಅರಂಪಾಡಿ ಮೊದಲಾದ ಕಂದಾಯ ಗ್ರಾಮಗಳು ಇರುವ ಈ ಭಾಗಗಳಿಗೆಲ್ಲ ಸರಿಯಾದ ಸಂಪರ್ಕ ಸೇತುವೆಗಳಿಲ್ಲ. ಈ ಭಾಗಕ್ಕೆ ವಿದ್ಯುತ್ ಸಂಪರ್ಕವಾಗಿದ್ದು ಕೇವಲ 8 ವರ್ಷಗಳ ಹಿಂದೆ. ಸಂಪರ್ಕ ವ್ಯವಸ್ಥೆ ಇಲ್ಲ
ಕಲ್ಲಾಜೆ ಸುತ್ತಮುತ್ತಲ ಜನವಸತಿ ಪ್ರದೇಶಗಳಿಗೆ ಯಾವುದೇ ಸಂಪರ್ಕ ವ್ಯವಸ್ಥೆಗಳಿಲ್ಲ. ಸ್ಥಿರ ಹಾಗೂ ಮೊಬೈಲ್ ಸಾಧನಗಳಿಲ್ಲ. ಇಲ್ಲಿನ ಹಲವು ಮನೆಗಳಿಗೆ ಬಿಎಸ್ಸೆನ್ನೆಲ್ ಸ್ಥಿರ ದೂರವಾಣಿ ಕಲ್ಪಿಸಲಾಗಿದ್ದರೂ ಅವುಗಳು ಕೆಟ್ಟು ಹೋಗಿವೆ. ಭಾರತ 5ಜಿ ಕ್ರಾಂತಿಯತ್ತ ಚಿತ್ತ ನೆಟ್ಟಿದ್ದರೂ, ಡಿಜಿಟಲ್ ವ್ಯವಸ್ಥೆಯಲ್ಲಿ ದಾಪುಗಾಲಿಡುತ್ತಿದ್ದರೂ, ಕಲ್ಲಾಜೆಯಲ್ಲಿ ನೆಟ್‌ವರ್ಕ್ ಇಲ್ಲದೆ ಇಂಟರ್ನೆಟ್ ಬಿಡಿ, ಫೋನ್ ಕರೆಯೂ ಸಿಗುವುದಿಲ್ಲ. ಸಂಬಂಧಪಟ್ಟ ಅಧಿಕಾರಿಗಳು, ಜನಪ್ರತಿನಿಧಿಗಳಿಗೆ ಸ್ಥಳೀಯರು ಹಲವು ಬಾರಿ ಮನವಿ ನೀಡಿದ್ದರು. ಭರವಸೆ ಸಿಕ್ಕಿದೆ. ಬೇಡಿಕೆ ಮಾತ್ರ ಈಡೇರಿಲ್ಲ. ಕಲ್ಲಾಜೆಯಲ್ಲಿ ಸ.ಹಿ.ಪ್ರಾ. ಶಾಲೆ, ಅಂಚೆ ಕಚೇರಿ, ಸಹಕಾರಿ ಸಂಘದ ಪಡಿತರ ಬ್ರಾಂಚ್ ಇತ್ಯಾದಿ ಇದೆ. ಮಳೆಗಾಲದಲ್ಲಿ ಮಕ್ಕಳು ಶಾಲೆಗೆ ಬರಲು ಸಂಪರ್ಕ ಸೇತುವೆ ಇಲ್ಲ. ಮಕ್ಕಳ ಶೈಕ್ಷಣಿಕ ಬದುಕು ಕೂಡ ದುಸ್ತರವಾಗಿದೆ.
Related Articles
ಇಲ್ಲಿ ಕೃಷಿ ಅವಲಂಬಿತರು ಹೆಚ್ಚಿದ್ದಾರೆ. ತಾವು ಬೆಳೆದ ಕೃಷಿ ಉತ್ಪನ್ನಗಳ ಮಾರಾಟ ಮತ್ತು ಖರೀದಿಗೆ ತೆರಳಲು ರಸ್ತೆ, ಸೇತುವೆಗಳ ಆವಶ್ಯಕತೆ ಇದೆ. ತುರ್ತು ಸಂದರ್ಭ ತತ್‌ಕ್ಷಣಕ್ಕೆ ಸಂಪರ್ಕಿಸಲು ಮೊಬೈಲ್ ಸಂಪರ್ಕದ ಅಗತ್ಯವೂ ಇದೆ. ಯಾರಲ್ಲಾದರೂ ಮೊಬೈಲ್ ಇದ್ದರೆ ಅವರು ಸಿಗ್ನಲ್ ಸಿಗಲು ಪಕ್ಕದ ಗುಡ್ಡ ಹತ್ತಬೇಕು. ಇದರ ಜತೆಗೆ ಬೇಸಗೆಯಲ್ಲಿ ವಿದ್ಯುತ್ ಲೋ ವೋಲ್ಟೇಜ್, ವನ್ಯಜೀವಿ ಹಾವಳಿ, ಮಳೆಗಾಲದಲ್ಲಿ ವಿದ್ಯುತ್ ಕಡಿತ, ಸೇತುವೆ ಸಂಪರ್ಕ ಕಡಿತಗೊಳ್ಳುವ ಭೀತಿಯೊಂದಿಗೆ ಜನರು ಬದುಕುತ್ತಿದ್ದಾರೆ.
Advertisement
ಟವರ್ ಬೇಡಿಕೆ: ಯಾರೂ ಸ್ಪಂದಿಸಿಲ್ಲಕಲ್ಲಾಜೆ ಹಾಗೂ ಸುತ್ತಮುತ್ತಲಿನ ಜನವಸತಿ ಪ್ರದೇಶಗಳ ಜನತೆಯ ಅನುಕೂಲಕ್ಕಾಗಿ ಟವರ್ ನಿರ್ಮಿಸುವಂತೆ ಸ್ಥಳೀಯರು ಸಂಸದ ನಳಿನ್ ಕುಮಾರ್ ಕಟೀಲು ಹಾಗೂ ಬಿಎಸ್ಸೆನ್ನೆಲ್ ಅಧಿಕಾರಿಗಳಿಗೆ ಮನವಿಯ ಮೇಲೆ ಮನವಿ ನೀಡಿದ್ದಾರೆ. ಹತ್ತಾರು ಬಾರಿ ಸಂಸದರನ್ನು ಭೇಟಿ ಮಾಡುವ ಪ್ರಯತ್ನ ಮಾಡಿದ್ದಾರೆ. ಇದುವರೆಗೆ ಪ್ರಯತ್ನಗಳು ಫಲ ನೀಡಿಲ್ಲ ಎಂದು ಸ್ಥಳೀಯರು ಬೇಸರ ವ್ಯಕ್ತಪಡಿಸಿದ್ದಾರೆ. ಶಾಸಕರ ಬಳಿ ಚರ್ಚಿಸಿದ್ದೇವೆ
ಕಲ್ಲಾಜೆಯಲ್ಲಿ ಟವರ್ ನಿರ್ಮಿಸುವ ಕುರಿತು ಶಾಸಕರ ಮೂಲಕ ಸಂಸದ ಗಮನಕ್ಕೆ ತಂದಿದ್ದೇವೆ. ಇತ್ತೀಚೆಗೆ ಈ ಭಾಗಕ್ಕೆ ಭೇಟಿ ನೀಡಿದ್ದ ಶಾಸಕರ ಬಳಿ ಚರ್ಚಿಸಿದ್ದೇವೆ. ಈ ಭಾರಿ ಖಂಡಿತವಾಗಿ ಟವರ್ ನಿರ್ಮಿಸಲಾಗುತ್ತದೆ. ಅಲ್ಲಿನ ಉಳಿದ ಮೂಲಸೌಕರ್ಯದ ಕುರಿತೂ ಗಮನ ಹರಿಸುತ್ತೇವೆ.
– ಸುಶೀಲಾ ಹೊಸಮನೆ,
ಸುಬ್ರಹ್ಮಣ್ಯ ಗ್ರಾ.ಪಂ. ಅಧ್ಯಕ್ಷೆ ಭರವಸೆ ಈಡೇರಿಲ್ಲ
ಕಲ್ಲಾಜೆಯಲ್ಲಿ ಮೊಬೈಲ್ ಟವರ್ ನಿರ್ಮಾಣಕ್ಕೆ ಸತತ ಪ್ರಯತ್ನ ನಡೆಸಿದ್ದೇವೆ. ಸಂಸದರಿಗೆ, ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೆ ಕೇವಲ ಭರವಸೆಯಷ್ಟೇ ಸಿಗುತ್ತಿದೆ. ಈಡೇರಿಕೆ ಯಾವಾಗವೆಂದು ಗೊತ್ತಾಗುತ್ತಿಲ್ಲ. ಈವರೆಗೆ ಸುಮ್ಮನಿದ್ದೇವೆ. ಇನ್ನೂ ನಮ್ಮ ಮೂಲ ಬೇಡಿಕೆ ಈಡೇರದಿದ್ದರೆ ಗ್ರಾಮಸ್ಥರೆಲ್ಲ ಸೇರಿ ಮುಂದಿನ ಚುನಾವಣೆಯಲ್ಲಿ ಮತದಾನ ಬಹಿಷ್ಕಾರ ನಡೆಸುವ ಚಿಂತನೆ ಇಟ್ಟುಕೊಂಡಿದ್ದೇವೆ.
- ಗೋವರ್ಧನ್ ಕೆ.ಸಿ.,
ಕಲ್ಲಾಜೆ ನಿವಾಸಿ ಬಾಲಕೃಷ್ಣ ಭೀಮಗುಳಿ