Advertisement

ಹವಾಮಾನ ವೈಪರೀತ್ಯ: ಕರಾವಳಿ ಪ್ರವೇಶಿಸದ ಚಳಿಗಾಲ

08:59 AM Dec 01, 2019 | mahesh |

ಮಂಗಳೂರು: ಕರಾವಳಿಯಲ್ಲಿ ನವೆಂಬರ್‌ ತಿಂಗಳಾಂತ್ಯಕ್ಕೆ ಚಳಿಗಾಲ ಆರಂಭವಾಗುವುದು ವಾಡಿಕೆ. ಆದರೆ ಈ ಬಾರಿ ಅದರ ಆಗಮನ ವಿಳಂಬವಾಗುವ ಲಕ್ಷಣ ಕಾಣಿಸುತ್ತಿದೆ. ಇತ್ತೀಚೆಗೆ ಅರಬಿ ಸಮುದ್ರ ಮತ್ತು ಬಂಗಾಲಕೊಲ್ಲಿಯಲ್ಲಿ ಸೃಷ್ಟಿಯಾಗಿದ್ದ ಚಂಡಮಾರುತ ಮತ್ತು ವಾತಾವರಣದಲ್ಲಿ ಆಗಿರುವ ಏರುಪೇರು ಇದಕ್ಕೆ ಕಾರಣ. ಮೂರು ಪ್ರಬಲ ಚಂಡಮಾರುತಗಳು ಕರಾವಳಿಯ ಹವಾಗುಣದ ಮೇಲೆ ಪ್ರಭಾವ ಬೀರಿದ್ದು, ಇದರಿಂದಾಗಿ ಮೋಡಗಳ ಚಲನೆ ಇದ್ದ ಕಾರಣ ಆಗ ಸೆಕೆಯಿತ್ತು. ಈಗ ಶಾಂತ ಸಾಗರ ಮತ್ತು ಅರಬಿ ಸಮುದ್ರದಲ್ಲಿ ಮತ್ತೂಮ್ಮೆ ನಿಮ್ನ ಒತ್ತಡ ಉಂಟಾಗಿದೆ. ಇದರ ನೇರ ಪರಿಣಾಮ ಕರಾವಳಿಗೆ ಇಲ್ಲವಾದರೂ ಮತ್ತೆ ಮೋಡ ಸೃಷ್ಟಿಯಾಗುತ್ತಿದೆ. ಇದರಿಂದ ಸಂಜೆ ವೇಳೆ ಮುಗಿಲಿನ ವಾತಾವರಣ ಇರುತ್ತಿದ್ದು, ಕೆಲವು ಕಡೆ ಮಳೆಯೂ ಆಗುತ್ತಿದೆ.

Advertisement

ಕೃಷಿ ವಿವಿಯ ಹವಾಮಾನ ವಿಜ್ಞಾನಿ ಡಾ| ರಾಜೇಗೌಡ ಅವರು “ಉದಯವಾಣಿ’ಗೆ ಪ್ರತಿಕ್ರಿಯಿಸಿ, ಚಳಿಗಾಲ ಆರಂಭಕ್ಕೂ ಮುನ್ನ ಉತ್ತರ ಗೋಳಾರ್ಧದಿಂದ ದಕ್ಷಿಣ ಗೋಳಾರ್ಧದ ಕಡೆಗೆ ಗಾಳಿ ಬೀಸಬೇಕು. ಇದು ಸಾಮಾನ್ಯವಾಗಿ ಅಕ್ಟೋಬರ್‌ ಮೂರನೇ ವಾರದಿಂದ ಆರಂಭವಾಗುತ್ತದೆ. ಆದರೆ ಈವರೆಗೆ ಅದು ನಡೆದಿಲ್ಲ. ಈ ಗಾಳಿ ಬೀಸಿದರೆ ಮೋಡಗಳು ಆಫ್ರಿಕನ್‌ ದೇಶಗಳತ್ತ ತೆರಳುತ್ತವೆ. ಆದರೆ ಈ ಬಾರಿ ಮೋಡಗಳು ದಿಕ್ಕು ಬದಲಾಯಿಸಿ ಕರಾವಳಿಯತ್ತ ಬಂದಿವೆ. ಸಾಮಾನ್ಯವಾಗಿ ನವೆಂಬರ್‌ನಲ್ಲಿ ಚಳಿ ಆರಂಭವಾಗಿ ಜನವರಿ ಮೂರನೇ ವಾರದವರೆಗೆ ಇರಬೇಕು. ಪೂರ್ಣ ಪ್ರಮಾಣದ ಚಳಿ ಶುರುವಾಗುವುದಕ್ಕೆ ಇನ್ನೂ ಒಂದೆರಡು ವಾರಬೇಕು. ಇದರಿಂದ ಚಳಿಗಾಲದ ಅವಧಿಯೂ ಕಡಿಮೆಯಾಗುವ ಮುನ್ಸೂಚನೆಯಿದೆ ಎಂದಿದ್ದಾರೆ.

ಕೆಲವು ದಿನ ಸೆಖೆ, ಮೋಡ
ಹವಾಮಾನ ಇಲಾಖೆಯ ಮಾಹಿತಿ ಪ್ರಕಾರ ಮುಂದಿನ ಕೆಲವು ದಿನ ಇದೇ ವಾತಾವರಣ ಇರಲಿದೆ. ಕಳೆದ ವರ್ಷಕ್ಕೆ ಹೋಲಿಸಿದರೂ ಈ ಬಾರಿ ಚಳಿ ಕಡಿಮೆ. ಕಳೆದ ವರ್ಷ ನ.26ರಂದು 21 ಡಿಗ್ರಿ ಸೆ. ಕನಿಷ್ಠ ಉಷ್ಣಾಂಶ ದಾಖಲಾಗಿತ್ತು. ಆದರೆ ಈ ಬಾರಿ ಅದು 23 ಡಿ.ಸೆ. ಇತ್ತು. ಅಲ್ಲದೆ ಮಂಗಳೂರು ಬಳಿಯ ಪಣಂಬೂರಿನಲ್ಲಿ ನ.23ರಿಂದೀಚೆಗೆ ಸತತವಾಗಿ ದೇಶದಲ್ಲಿಯೇ ಅತ್ಯಂತ ಹೆಚ್ಚು ತಾಪಮಾನ ದಾಖಲಾಗಿದೆ. ಸಂಜೆ ಮೋಡದ ವಾತಾವರಣ ಮುಂದುವರಿದಿದ್ದು, ಇದು ಗೇರು ಮತ್ತು ಮಾವು ಬೆಳೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆ ಇದೆ. ಇದರಿಂದ ಬೆಳೆ ಕಡಿಮೆಯಾಗುವ ಅಪಾಯವಿದೆ.

1947ರಲ್ಲಿ ಅತಿ ಕನಿಷ್ಠ ಉಷ್ಣಾಂಶ
1947ರ ನ.19ರಂದು ಕರಾವಳಿಯಲ್ಲಿ ಅತ್ಯಂತ ಕನಿಷ್ಠವಾದ 16.6 ಡಿ.ಸೆ. ದಾಖಲಾಗಿತ್ತು. 2012ರ ನ.15ರಂದು 19 ಡಿ.ಸೆ., 2013ರಲ್ಲಿ 20.8, 2014ರಲ್ಲಿ 19, 2015ರಲ್ಲಿ 21, 2016ರಲ್ಲಿ 20.5, 2017ರಲ್ಲಿ 19.6 ಮತ್ತು ಕಳೆದ ವರ್ಷ 19.8 ಡಿ.ಸೆ. ಕನಿಷ್ಠ ಉಷ್ಣಾಂಶ ದಾಖಲಾಗಿತ್ತು.

ಮೋಡ ಚಲನೆಯಿಂದಾಗಿ ಕರಾವಳಿಯಲ್ಲಿ ಚಳಿ ಕಡಿಮೆಯಾಗಿದೆ. ಅರಬಿ ಸಮುದ್ರದಲ್ಲಿ ನಿಮ್ನ ಒತ್ತಡ ಉಂಟಾಗಿದ್ದು, ಪರಿಣಾಮವಾಗಿ ಮೋಡಗಳು ಉಂಟಾಗುತ್ತಿವೆ. ಇನ್ನೂ ಕೆಲವು ದಿನಗಳ ಕಾಲ ಇದೇ ರೀತಿಯ ವಾತಾವರಣ ಇರುವ ಸಾಧ್ಯತೆ ಇದೆ.
– ಸುನಿಲ್‌ ಗವಾಸ್ಕರ್‌, ಕೆಎಸ್‌ಎನ್‌ಡಿಎಂಸಿ ವಿಜ್ಞಾನಿ

Advertisement

– ನವೀನ್‌ ಭಟ್‌ ಇಳಂತಿಲ

Advertisement

Udayavani is now on Telegram. Click here to join our channel and stay updated with the latest news.

Next