Advertisement

ವಾತಾವರಣದಲ್ಲಿ ಬದಲಾವಣೆ: ಹೆಚ್ಚುತ್ತಿದೆ ವೈರಲ್‌ ಜ್ವರ

01:54 AM Mar 06, 2020 | mahesh |

ಮಹಾನಗರ: ವಾರದಿಂದ ನಗರದಲ್ಲಿ ಶೀತ, ಜ್ವರ, ಕೆಮ್ಮು, ತಲೆನೋವು ಸಮಸ್ಯೆ ಹೆಚ್ಚುತ್ತಿದ್ದು, ವೈದ್ಯರ ಕ್ಲಿನಿಕ್‌ಗಳ ಮುಂದೆ ಜನ ಸಾಲು ಕಂಡು ಬರುತ್ತಿದೆ. ವಾತಾವರಣದಲ್ಲಾಗುತ್ತಿರುವ ಬದಲಾವಣೆಗಳೇ ವೈರಲ್‌ ಜ್ವರ ಹರಡಲು ಕಾರಣವಾಗುತ್ತಿದೆ.

Advertisement

ಚಳಿಗಾಲ ಕಳೆದು ಬೇಸಗೆ ಶುರುವಾಗಿರುವುದು ಮತ್ತು ಕಳೆದೊಂದು ವಾರದ ಹಿಂದೆ ಮೋಡ, ಬಿಸಿಲಿನ ನಡುವೆ ಅನಿರೀಕ್ಷಿತ ಮಳೆ ಸುರಿದ ಕಾರಣ ವೈರಲ್‌ ಜ್ವರ ಹರಡುತ್ತಿದೆ. ಈ ಬಗ್ಗೆ ಜನರು ಆತಂಕ ಪಡುವ ಅಗತ್ಯವಿಲ್ಲ. ಆದರೆ ಶೀತ, ತಲೆನೋವು, ಕೆಮ್ಮು, ಜ್ವರವನ್ನು ನಿರ್ಲಕ್ಷಿಸದೆ ವೈದ್ಯರ ಸಲಹೆಯಂತೆ ಸೂಕ್ತ ಔಷಧ ಪಡೆದುಕೊಳ್ಳಬೇಕು. ವೈದ್ಯರ ಸಲಹೆಯಿಲ್ಲದೆ, ಮೆಡಿಕಲ್‌ ಶಾಪ್‌ಗ್ಳಿಂದ ಔಷಧ ಖರೀದಿಸಿ ಸೇವಿಸಬಾರದು ಎಂದು ವೈದ್ಯರು ತಿಳಿಸಿದ್ದಾರೆ.

ಕೆಮ್ಮಿದಾಗ ಹಳದಿ ಕಫ ಹೋಗುವುದು, ಶೀತದಿಂದ ಹಳದಿ ಸಿಂಬಳ ಬಂದಲ್ಲಿ ಬ್ಯಾಕ್ಟೀರಿಯಲ್‌ ಇನ್‌ಫೆಕ್ಷನ್‌ ಖಚಿತವಾಗುತ್ತದೆ. ಆಗ ಆ್ಯಂಟಿ ಬಯೋಟಿಕ್‌ ಔಷಧ ಅಗತ್ಯವಾಗಿರುತ್ತದೆ ಎನ್ನುತ್ತಾರೆ ವೈದ್ಯಾಧಿಕಾರಿಗಳು. ವೆನ್ಲಾಕ್ ಸರಕಾರಿ ಆಸ್ಪತ್ರೆಗೆ ಪ್ರತಿದಿನ ಸುಮಾರು 100ಕ್ಕೂ ಹೆಚ್ಚು ಮಂದಿ ವೈರಲ್‌ ಜ್ವರದ ಹಿನ್ನೆಲೆಯಲ್ಲಿ ಚಿಕಿತ್ಸೆಗೆ ಆಗಮಿಸುತ್ತಾರೆ.

ಬಿಸಿ ನೀರು ಕುಡಿಯಿರಿ
ಸಾರ್ವಜನಿಕರು ಕುದಿಸಿ ಆರಿಸಿದ ಉಗುರು ಬೆಚ್ಚಗಿನ ನೀರನ್ನೇ ಕುಡಿಯಬೇಕು. ಜ್ವರ ಬಾಧಿಸಿದ ಯಾರೂ ಕೂಡ ತಣ್ಣೀರನ್ನು ಕುಡಿಯಲೇ ಬಾರದು. ಸ್ನಾನಕ್ಕೂ ಬಿಸಿನೀರನ್ನು ಉಪಯೋಗಿಸಬೇಕು. ತಲೆ ಮೇಲೆ ನೀರು ಹಾಕಿಕೊಂಡಾಗ ಶೀತ ಅಧಿಕವಾಗಿ ಜ್ವರ, ತಲೆನೋವು ಹೆಚ್ಚಾಗುವ ಸಾಧ್ಯತೆ ಇರುತ್ತದೆ. ನಿತ್ರಾಣ ನಿಯಂತ್ರಿಸಲು ಸರಿಯಾದ ರೀತಿಯಲ್ಲಿ ಆಹಾರ ಸೇವಿಸಬೇಕು. ತಂಪು ಪಾನೀಯ ಸೇವಿಸಲೇ ಬಾರದು.

ಮೈಕೈ ನೋವು: ಹೆದರದಿರಿ
ವೈರಲ್‌ ಜ್ವರಕ್ಕೆ ಒಳಗಾದ ಮಂದಿಗೆ ಚಳಿ ಜ್ವರದೊಂದಿಗೆ ಮೈಕೈ ನೋವು ಸಾಮಾನ್ಯವಾಗಿ ಇರುತ್ತದೆ. ಆದರೆ ಇದನ್ನು ಡೆಂಗ್ಯೂ, ಮಲೇರಿಯಾದಂತಹ ಸಾಂಕ್ರಾಮಿಕ ಕಾಯಿಲೆಗಳೆಂದು ತಿಳಿದು ಭಯ ಬೀಳುವ ಅಗತ್ಯವಿಲ್ಲ. ಆದಷ್ಟು ವಿಶ್ರಾಂತಿ ಮತ್ತು ನಿದ್ದೆಗೆ ಗಮನ ಕೊಡಿ.

Advertisement

ಇರಲಿ ಮುನ್ನೆಚ್ಚರಿಕೆ
ಸಾಮಾನ್ಯ ಜ್ವರವು ವೈರಲ್‌ ಫಿವರ್‌ ಆಗಿರುವುದರಿಂದ ಒಬ್ಬರಿಂದ ಇನ್ನೊಬ್ಬರಿಗೆ ಸುಲಭವಾಗಿ ಹರಡುತ್ತದೆ. ಜ್ವರ ಮತ್ತು ಶೀತ ಬಾಧಿತ ವ್ಯಕ್ತಿಗಳನ್ನು ಮುಟ್ಟಬಾರದು, ಕೈ ಕುಲುಕಬಾರದು. ರೋಗಿ ಬಳಸಿದ ಕರವಸ್ತ್ರವನ್ನು ಬಳಕೆ ಮಾಡಬಾರದು. ಅವರು ಮುಟ್ಟಿದ ವಸ್ತುಗಳನ್ನು ಮತ್ತೂಬ್ಬ ಮುಟ್ಟಿದ್ದಲ್ಲಿ ಸಾಬೂನಿನಿಂದ ಕೈ ತೊಳೆದುಕೊಳ್ಳಬೇಕು. ಕೆಮ್ಮುವಾಗ, ಸೀನುವಾಗ ಆದಷ್ಟು ಕರವಸ್ತ್ರವನ್ನು ಮುಚ್ಚಿಕೊಳ್ಳಬೇಕು.

ವೈರಲ್‌ ಫಿವರ್‌ ಕೊರೊನಾವಲ್ಲ
ಜಗತ್ತಿನಾದ್ಯಂತ ಹರಡಿರುವ ಕೊರೊನಾ ವೈರಸ್‌ನಿಂದ ಆತಂಕಕ್ಕೊಳಗಾದ ನಗರದ ಜನತೆ ವೈರಲ್‌ ಜ್ವರವನ್ನೂ ಕೊರೊನಾ ಎಂದು ಭಾವಿಸಿ ತಪಾಸಣೆಗೆ ತೆರಳುತ್ತಿರುವುದು ಹೆಚ್ಚುತ್ತಿದೆ. ಶಾಲೆಗಳಲ್ಲಿಯೂ ವೈರಲ್‌ ಜ್ವರ ಬಾಧಿತ ವಿದ್ಯಾರ್ಥಿಗಳನ್ನು ಕೊರೊನಾ ವೈರಸ್‌ ತಪಾಸಣೆ ಮಾಡಿಕೊಳ್ಳುವಂತೆ ಒತ್ತಾಯಿಸುತ್ತಿರುವುದು ಜಿಲ್ಲಾಡಳಿತ ಗಮನಕ್ಕೆ ಬಂದಿದ್ದು, ಈ ರೀತಿ ಮಾಡ ದಂತೆ ಡಿಸಿ ಸಿಂಧೂ ಬಿ. ರೂಪೇಶ್‌ ಸೂಚಿ ಸಿದ್ದಾರೆ. ವೈರಲ್‌ ಜ್ವರ ವಾತಾವರಣ ಬದಲಾವಣೆ ವೇಳೆ ಸಾಮಾನ್ಯವಾಗಿದ್ದು, ಅದನ್ನು ಕೊರೊನಾ ಎಂದು ತಿಳಿದು ಆತಂಕಿತರಾಗಬಾರದು ಎಂದು ಅವರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

ಸಾಮಾನ್ಯ ಜ್ವರ
ಹವಾಮಾನದಲ್ಲಿ ಉಂಟಾದ ಬದಲಾವಣೆ ಕಾರಣದಿಂದಾಗಿ ಈ ಸಮಯದಲ್ಲಿ ಜ್ವರ, ಶೀತ, ತಲೆನೋವು ಸಾಮಾನ್ಯವಾಗಿರುತ್ತದೆ. ಇದರ ಬಗ್ಗೆ ಜನ ಭಯ ಪಡುವ ಅಗತ್ಯವಿಲ್ಲ. ಆದರೆ ಯಾವುದೇ ಜ್ವರವನ್ನು ನಿರ್ಲಕ್ಷಿಸದೆ ವೈದ್ಯರ ಬಳಿ ತೆರಳಿ ಔಷಧ ಪಡೆದು ಕೊಳ್ಳಬೇಕು.
 - ಡಾ| ರಾಜೇಶ್ವರಿ ದೇವಿ,ವೈದ್ಯಕೀಯ ಅಧೀಕ್ಷಕಿ, ವೆನ್ಲಾಕ್ ಸರಕಾರಿ ಆಸ್ಪತ್ರೆ, ಮಂಗಳೂರು

Advertisement

Udayavani is now on Telegram. Click here to join our channel and stay updated with the latest news.

Next