ವಾಷಿಂಗ್ಟನ್: ಮನುಷ್ಯ ಪ್ರಪಂಚದಲ್ಲಿ ಮಿಮಿಕ್ರಿ (ಅನುಕರಣೆ) ಮಾಡುವುದು ಸರ್ವೆ ಸಾಮಾನ್ಯ. ಖುಷಿಪಡಿಸಲು, ಹೊಗಳಿಕೆ ಗಿಟ್ಟಿಸಿಕೊಳ್ಳಲು ಮಿಮಿಕ್ರಿ ಮಾಡಲಾಗುತ್ತದೆ ಎಂದು ವಿಶ್ಲೇಷಿಸಲಾಗುತ್ತದೆ. ಆದರೆ ಪ್ರಾಣಿ ಪ್ರಪಂಚದಲ್ಲಿ ಮಿಮಿಕ್ರಿ ಬಳಕೆಯಾಗೋದು ಪ್ರಾಣ ರಕ್ಷಿಸಿಕೊಳ್ಳಲು! ಇದಕ್ಕೊಂದು ಹೊಸ ಸೇರ್ಪಡೆ ಆಫ್ರಿಕಾದ ಕಾಡುಗಳಲ್ಲಿ ಪತ್ತೆಯಾದ ಕಾಂಗೋಲೀಸೆ ಎಂಬ ಜಾತಿಯ ದೊಡ್ಡ ಗಾತ್ರದ ಕಾಡುಗಪ್ಪೆ.
ವಿಷ ಸರ್ಪಗಳು ತಮ್ಮನ್ನು ನುಂಗಲು ಅಥವಾ ದಾಳಿ ನಡೆಸಲು ಬರುತ್ತವೆ ಎಂಬ ಅಪಾಯದ ಮುನ್ಸೂಚನೆ ಸಿಕ್ಕಾಗ ಅಥವಾ ತುಂಬಾ ಹೆದರಿಕೆಗೆ ಒಳಗಾದ ಹಾವುಗಳನ್ನೇ ಬೆಚ್ಚಿ ಬೀಳಿಸುವ ರೀತಿಯಲ್ಲಿ ಈ ಕಾಡುಗಪ್ಪೆ ಮೈಯ ಮೇಲ್ಭಾಗವನ್ನು ತದ್ರೂಪಿ ಹಾವಿನಂತೆ ಬದಲಾಯಿಸಿಕೊಳ್ಳುತ್ತದೆ.
ಅಷ್ಟೇ ಅಲ್ಲ ಈ ಕಾಡುಗಪ್ಪೆ ಬಗ್ಗೆ ಅಧ್ಯಯನ ನಡೆಸಿದ್ದ ವಿಜ್ಞಾನಿಗಳಿಗೆ ಇದರ ಮಿಮಿಕ್ರಿ ಅಚ್ಚರಿ ಮೂಡಿಸಿದೆ. ಈ ಕಾಡುಗಪ್ಪೆ ತೀವ್ರ ಅಪಾಯಕಾರಿ ವಿಷದ ಹಾವುಗಳಂತೆ ಬದಲಾಗುತ್ತದೆ. ಹಾವಿನ ಕಂದು ಬಣ್ಣದ ತಲೆಯಂತೆ ಬಣ್ಣ ಬದಲಾಯಿಸುತ್ತದೆ. ಅಲ್ಲದೇ ಹಾವಿನಂತೆ ಹಿಸ್…ಹಿಸ್ ಶಬ್ದವನ್ನೂ ಹೊರಡಿಸುತ್ತದೆ. ಎದುರಾಳಿ ಹಾವಿಗೆ ಚಳ್ಳೆ ಹಣ್ಣು ತಿನ್ನಿಸಲು ಈ ಕಾಡುಗಪ್ಪೆ ತನ್ನ ಕಣ್ಣ ಗುಡ್ಡೆಯನ್ನು ಇಳಿಸಿ ಹಾವಿನಂತೆಯೇ ತಲೆಯನ್ನು ಹಿಗ್ಗಿಸಿ ಬೇಟೆಯಾಡಲು ಬಂದ ವಿಷ ಜಂತುವನ್ನೇ ಯಾಮಾರಿಸಿ ಬಿಡುತ್ತದೆ ಎಂದು ವರದಿ ವಿವರಿಸಿದೆ.
ಈ ಕಾಡುಗಪ್ಪೆಯನ್ನು ಮೇಲ್ನೋಟಕ್ಕೆ ಗಮನಿಸಿದರೆ ಹಾವಿನಂತೆಯೇ ಕಾಣಿಸುತ್ತದೆ. ನ್ಯೂಸ್ ವೀಕ್ ವರದಿ ಪ್ರಕಾರ, ಕಾಡುಗಪ್ಪೆಯ ಅಚ್ಚರಿಯಾಗುವ ರೀತಿಯಲ್ಲಿ ರೂಪಾಂತರ ಹೊಂದುವ ಮೂಲಕ ಎದುರಾಳಿ ಬೇಟೆಗಾರನನ್ನು ದೂರ ಉಳಿಯುವಂತೆ ಮಾಡಿ ತನ್ನ ಪ್ರಾಣರಕ್ಷಿಸಿಕೊಳ್ಳುತ್ತದೆ. ಒಮ್ಮೊಮ್ಮೆ ಭಾರೀ ವಿಷಪೂರಿತ ಹಾವು ಮತ್ತು ಕಾಡುಗಪ್ಪೆ ನಡುವಿನ ವ್ಯತ್ಯಾಸವನ್ನು ಕಂಡುಹಿಡಿಯುವುದು ಕೂಡಾ ಕಷ್ಟವಾಗುತ್ತದೆ ಎಂದು ವರದಿ ವಿವರಿಸಿದೆ.
ಈ ಕಾಡುಗಪ್ಪೆಯ ಊಸರವಳ್ಳಿ ಆಟ ಬೆಳಕಿಗೆ ಬಂದಿದ್ದು ಇತ್ತೀಚೆಗೆ ಎಲಿ ಗ್ರೀನ್ ಬೌಮ್ ಪ್ರಕಟಿಸಿದ ಅಧ್ಯಯನ ವರದಿಯಿಂದ. ಎಲಿ ಅವರು ದ ಯೂನಿರ್ವಸಿಟಿ ಆಫ್ ಟೆಕ್ಸಾಸ್ ನಲ್ಲಿ ಜೈವಿಕ ವಿಜ್ಞಾನದ ಅಸೋಸಿಯೇಟ್ ಪ್ರೊಫೆಸರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರ ಅಧ್ಯಯನ ವರದಿಯನ್ನು ಇತ್ತೀಚೆಗೆ ಜರ್ನಲ್ ಆಫ್ ನ್ಯಾಚುರಲ್ ಹಿಸ್ಟರಿಯಲ್ಲಿ ಪ್ರಕಟಗೊಂಡಿತ್ತು.