ಹುಮನಾಬಾದ: ಪಟ್ಟಣದ ಪುರಸಭೆ ರಸ್ತೆಯ ಬದಿಯ ಶೆಡ್‌ಗಳ ತೆರವಿಗೆ ಮುಂದಾಗಿರುವುದರಿಂದ ಕಲ್ಲೂರ ಮಾರ್ಗದ ರಸ್ತೆ ಬದಿಯ ಚಿಕ್ಕಪುಟ್ಟ ಶಡ್‌ಗಳಲ್ಲಿ ಸಣ್ಣಪುಟ್ಟ ಉದ್ಯೋಗ ಮಾಡಿಕೊಂಡು ಜೀವನ ನಿರ್ವಹಣೆ ಮಾಡುವವರ ಬದುಕು ಪರ್ಯಾಯ ಸ್ಥಳದ ವ್ಯವಸ್ಥೆ ಇಲ್ಲದೇ ತೊಂದರೆಗೊಳಲಾಗಿದ್ದು, ಅಳಿವು-ಉಳಿವಿನ ಸ್ಥಿತಿಯಲ್ಲಿದೆ.
ಎರಡೂವರೆ ದಶಕಗಳಿಂದ ಪಟ್ಟಣದ ಮುಖ್ಯರಸ್ತೆಗೆ ಹೊಂದಿಕೊಂಡಿದ್ದ ವೀರಭದ್ರೇಶ್ವರ ಅಗ್ನಿ ಕುಂಡದ ಆಸುಪಾಸಲ್ಲೇ ಟೇಲರಿಂಗ್, ಚಿಕ್ಕ ಹೋಟೆಲ್, ಬುಕ್‌ಸ್ಟಾಲ್, ಮೋಟರ್ ರಿವೈಂಡಿಂಗ್, ಹೂವಿನ ಅಂಗಡಿ, ಸಿದ್ಧು ಉಡುಪು, ಸೈಕಲ್ ಅಂಗಡಿ, ಆಯುರ್ವೇದ ಔಷಧ ಅಂಗಡಿ, ಖಾನಾವಳಿ, ಹೇರ್ ಸಲೂನ್ ಮೊದಲಾದ ಅಂಗಡಿ ನಡೆಸಿಕೊಂಡು ಹೇಗೋ ಜೀವನ ನಿರ್ವಹಣೆ ಮಾಡುತ್ತಿದ್ದರು. ಆದರೇ ಹೈ.ಕ. ಭಾಗದ ಇತಿಹಾಸ ಪ್ರಸಿದ್ಧ ಶ್ರೀ ವೀರಭದ್ರೇಶ್ವರ ಜಾತ್ರೆಗೆ ಬರುವ ಭಕ್ತರ ಸಂಖ್ಯೆ ಪ್ರತಿ ವರ್ಷ ಹೆಚ್ಚುತ್ತಿರುವ ಕಾರಣ ಭಕ್ತರ ಆಶಯದ ಮೇರೆಗೆ ಅಗ್ನಿಕುಂಡ ವಿಸ್ತರಣೆ ಜೊತೆಗೆ ಅಭಿವೃದ್ಧಿ ಕೈಗೊಳ್ಳುವ ಉದ್ದೇಶದಿಂದ ಎರಡು ತಿಂಗಳ ಹಿಂದೆಯಷ್ಟೆ ಎಲ್ಲ ತಾತ್ಕಾಲಿಕ ಶಡ್‌ಗಳನ್ನು ತೆರವುಗೊಳಿಸಲಾಗಿದೆ. ಅವರಿವರ ಕೈ ಕಾಲು ಹಿಡಿದು, ಈಚೆಗಷ್ಟೇ ವಿಸ್ತಣೆಗೊಂಡ ಕಲ್ಲೂರ ಮಾರ್ಗದ ರಸ್ತೆ ಬದಿ ಶೆಡ್ ಅಳವಡಿಸಿಕೊಂಡು ಹೆಚ್ಚು ವ್ಯವಹಾರ ಇಲ್ಲದಿದ್ದರೂ ಒಂದು ಹೊತ್ತಿನ ಊಟಕ್ಕಾದರೂ ಅನುಕೂಲ ಆಗುತ್ತದೆಂಬ ಆಸೆಯಿಂದ ನಿಟ್ಟುಸಿರು ಬಿಟ್ಟಿದ್ದರು.
ತೆರವಿಗೆ ಮುಂದಾದ ಪುರಸಭೆ: ಆದರೆ ಸಾರ್ವಜನಿಕರು ದೂರು ನೀಡಿದ್ದಾರೆಂಬ ಆಧಾರದ ಮೇಲೆ ಪುರಸಭೆ ಮುಖ್ಯಾಧಿಕಾರಿ ಶಂಭುಲಿಂಗ ದೇಸಾಯಿ ಎರಡು ದಿನಗಳಿಂದ ಶೆಡ್‌ಗಳ ತೆರವಿಗೆ ಮುಂದಾಗಿದ್ದಾರೆ. ಇದರಿಂದ ಅದನ್ನೇ ನಂಬಿ ಬೆಳಗ್ಗೆಯಿಂದ ರಾತ್ರಿ ವರೆಗೆ ಶ್ರಮಪಟ್ಟು ಹೊಟ್ಟೆ ತುಂಬಿಸಿಕೊಳ್ಳುವ ವ್ಯಾಪಾರಿಗಳಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.
ಸುಮಾರು 30ಕ್ಕೂ ಅಧಿಕ ಜನ ವ್ಯಾಪಾರಿಗಳಿದ್ದೇವೆ. ಗೌಡರ ಪರಿವಾರದ ಆಶೀರ್ವಾದದಿಂದ ನಮಗೆ ಎರಡು ಹೊತ್ತಿನ ಊಟ ಸಿಗುತ್ತಿತ್ತು. ಆದರೆ ಪುರಸಭೆ ಆಡಳಿತ ಯಾರದೋ ಮಾತು ಕೇಳಿ ನಮ್ಮ ಶೆಡ್‌ಗಳನ್ನು ತೆರವುಗೊಳಿಸಲು ಮುಂದಾಗಿರುವುದು ಅಘಾತ ತಂದಿದೆ. ಒಂದು ವೇಳೆ ಜೆಸಿಬಿ ಮೂಲಕ ಶೆಡ್ ತೆರವುಗೊಳಿಸುವುದಾದರೇ ನಾವು ಅದರ ಕೆಳಗೆ ಮಲಗುತ್ತೇವೆ. ಹಿಂಸೆಯ ನಡುವೆ ಬದುಕುವುದಕಿಂತ ಜೆಸಿಬಿ ಕೆಳಗೆ ಬಿದ್ದು ಸಾಯುವುದೇ ಲೇಸು. ಪುರಸಭೆ ಏನು ಮಾಡುತ್ತದೋ ಗೊತ್ತಿಲ್ಲ. ನಮ್ಮೂರ ಗೌಡ್ರು ನಮ್ಮನ್ನೇ ನಂಬಿರುವ ಹೆಂಡತಿ ಮಕ್ಕಳ ಭವಿಷ್ಯಕ್ಕಾಗಿ ಅನುಕಂಪ ತೋರಿಸಿ, ಅದೇ ಸ್ಥಳವೆಂದು ಹೇಳುತ್ತಿಲ್ಲ ಪರ್ಯಾಯ ಸ್ಥಳದ ವ್ಯವಸ್ಥೆ ಮಾಡಿ ಜೀವದಾನ ನೀಡಬೇಕು ಎಂದು ವ್ಯಾಪಾರಿಗಳಾದ ಸೈಯದ್ ಶಫಿ, ನರೇಶ ದಾಮಾ, ತಯಾಬ್, ಅಪ್ಪುರಾಜ್, ಶ್ರೀಕಾಂತ, ಶಾಂತು, ಹೀರಾಲಾಲ್ ಶ್ರಾವಣ, ಸುಧಿಧೀರಕುಮಾರ, ಅಕ್ಬರ್, ರೆಡ್ಡಿ ಚಹಾ ಅಂಗಡಿ, ನಟರಾಜ, ಅಂಬಾಜಿರಾವ, ರಾಮ್, ಸಂದೀಪ, ಬಾಬು ಲೋಹಾರ, ದತ್ತು, ಸೈಯದ್ ಅಹ್ಮದ್ ಮೊದಲಾದವರು ಮಂಗಳವಾರ ಉದಯವಾಣಿಗೆ ಅಳಲು ತೋಡಿಕೊಂಡರು.
ನಾವು ಎರಡೂವರೆ ದಶಕದಿಂದ ಗೌಡರ ಆಶೀರ್ವಾದದಿಂದ ಜೀವನ ನಿರ್ವಹಣೆ ಮಾಡಿಕೊಂಡು ಬರುತ್ತಿದ್ದೇವೆ. ಅಗ್ನಿಕುಂಡ ಅಭಿವೃದ್ಧಿಗಾಗಿ ಶಡ್ ತೆರವುಗೊಳಿಸಿದ್ದನ್ನು ಸ್ವಾಗತಿಸುತ್ತೇವೆ. ಅಭಿವೃದ್ಧಿ ಕಾರ್ಯ ಪೂರ್ಣಗೊಳ್ಳುವ ತನಕ ಕಲ್ಲೂರ ಮಾರ್ಗದ ರಸ್ತೆಬದಿ ಶೆಡ್‌ಗಳನ್ನು ತಾತ್ಕಾಲಿಕವಾಗಿ ಸ್ಥಳಾಂತರಿಸಿ ಜೀವನ ನಿರ್ವಹಣೆ ಮಾಡಿಕೊಂಡು ಬರುತ್ತಿದ್ದೇವೆ. ಆದರೆ ಪುರಸಭೆ ಆಡಳಿತ ಜೆಸಿಬಿ ಮೂಲಕ ತೆರವಿಗೆ ಮುಂದಾಗಿದ್ದು, ಗಾಯದ ಮೇಲೆ ಬರೆ ಎಳೆದಂತಾಗಿದೆ. ನಮ್ಮನ್ನು ಗೌಡರೆ ರಕ್ಷಿಸಬೇಕು. •ಹೀರಾಲ್
ಶ್ರಾವಣ, ಬೀದಿಬದಿ ಶೆಡ್ ವ್ಯಾಪಾರಿಗಳ ಸಂಘದ ಅಧ್ಯಕ್ಷ
ನಗರದ ಅಂಬೇಡ್ಕರ್ ವೃತ್ತದಿಂದ ಪ್ರವಾಸಿ ಮಂದಿರದ ವರೆಗೆ ಸಾಕಷ್ಟು ಮುಖ್ಯ ರಸ್ತೆಗಳಲ್ಲಿ ಅದೆಷ್ಟೋ ಜನ ಶೆಡ್ ಹಾಕಿಕೊಂಡು ವ್ಯಾಪಾರ ಮಾಡುತ್ತಿದ್ದಾರೆ. ಪುರಸಭೆಗೆ ಅದು ಕಾಣುತ್ತಿಲ್ಲವೇ? ತೆರವುಗೊಳಿಸುವುದಿದ್ದರೆ ಪ್ರತಿಯೊಂದು ಮಾರ್ಗದ ಶೆಡ್ ತೆರವುಗೊಳಿಸಲಿ. ಪರ್ಯಾಯ ವ್ಯವಸ್ಥೆ ಆಗುವವರೆಗೆ ತೆರವು ಕಾರ್ಯಾಚರಣೆ ನಿಲ್ಲಿಸಬೇಕು. ತೆರವು ಕೇವಲ ಕಲ್ಲೂರ ಮಾರ್ಗಕ್ಕೆ ಸೀಮಿತಗೊಳಿಸುವುದನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ. ದಿನದ 24ಗಂಟೆ ವ್ಯಾಪಾರಿಗಳ ಜೊತೆ ಬೆನ್ನೆಲುಬಾಗಿರುವೆ.
ಶರಣಪ್ಪಗೌಡ ಎನ್.ಪಾಟೀಲ ಪಿಕೆಪಿಎಸ್ ಅಧ್ಯಕ್ಷ
ಶಶಿಕಾಂತ ಕೆ.ಭಗೋಜಿ