ಸುಬ್ರಹ್ಮಣ್ಯ: ಮಂಗಳೂರು -ಬೆಂಗಳೂರು ರೈಲು ಮಾರ್ಗದ ಮೈಸೂರು ವಿಭಾಗದ ಸಕಲೇಶಪುರ ಮತ್ತು ಬಳ್ಳುಪೇಟೆ ನಡುವೆ ಗುಡ್ಡ ಕುಸಿದು ಸ್ಥಗಿತಗೊಂಡಿದ್ದ ರೈಲು ಸಂಚಾರವನ್ನು ಮತ್ತೆ ಪ್ರಾರಂಭಿಸಲಾಗಿದೆ.
ರೈಲು ಮಾರ್ಗಕ್ಕೆ ಬಿದ್ದಿದ್ದ ಮಣ್ಣನ್ನು ತೆರವು ಮಾಡುವ ಕೆಲಸ ಸೋಮವಾರ ಸಂಜೆಗೆ ಪೂರ್ಣಗೊಂಡಿದೆ. ರೈಲು ಮಾರ್ಗವನ್ನು ರೈಲುಗಳ ಸಂಚಾರಕ್ಕೆ ಮುಕ್ತವಾಗುವಂತೆ ಮತ್ತೆ ಮರು ಹೊಂದಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆ. 17ರಂದು ಬುಲೆಟಿನ್ ಸಂಖ್ಯೆ 3ರಲ್ಲಿ ರದ್ದುಗೊಳಿಸಲಾಗಿದೆ ಎಂದಿರುವ ರೈಲು ಸೇವೆಗಳು ಮತ್ತೆ ಆರಂಭಗೊಂಡಿವೆ ಹಾಗೂ ಮುಂದೆ ಎಲ್ಲಾ ರೈಲುಗಳು ನಿಗದಿತ ದಿನಾಂಕ ಹಾಗೂ ಸಮಯದ ಪ್ರಕಾರ ಸಂಚರಿಸಲಿವೆ. ಮಣ್ಣು ಕುಸಿತ ಸ್ಥಳದಲ್ಲಿ ರೈಲು ಸಂಚಾರದ ವೇಗಕ್ಕೆ ಮಿತಿ ಹೇರಲಾಗಿದೆ.
ಆ. 16ರಂದು ಸಕಲೇಶಪುರ ಸಮೀಪ ರೈಲು ಮಾರ್ಗಕ್ಕೆ ಗುಡ್ಡದ ಮಣ್ಣು ಜರಿದು ಬಿದ್ದ ಕಾರಣ ರೈಲು ಸಂಚಾರಕ್ಕೆ ತಡೆ ಉಂಟಾಗಿತ್ತು. ಕೂಡಲೇ ಮಣ್ಣು ತೆರವು ಕಾರ್ಯಾಚರಣೆ ನಡೆಸಿದರೂ ಮತ್ತೆ ಮತ್ತೆ ಕುಸಿಯುತ್ತಲೇ ಇತ್ತು.
ಮೇಲ್ಭಾಗದಿಂದಲೇ ಮಣ್ಣನ್ನು ತೆರವು ಮಾಡಿ ರೈಲು ಸಂಚಾರಕ್ಕೆ ಮಾರ್ಗವನ್ನು ಮುಕ್ತಗೊಳಿಸಲಾಗಿದೆ. ಆ. 9ರ ಮುಂಜಾನೆ ವೇಳೆ ಇದೇ ಪ್ರದೇಶದಲ್ಲಿ ಮಣ್ಣು ಕುಸಿದು ರೈಲು ಸಂಚಾರ ಸ್ಥಗಿತಗೊಂಡಿತ್ತು. ಅದಕ್ಕೂ ಮೊದಲು ಆ. 26ರಂದು ಎಡಕುಮೇರಿ-ಕಡಗರವಳ್ಳಿ ನಡುವೆ ರೈಲು ಮಾರ್ಗದಲ್ಲಿ ಭೂ ಕುಸಿತ ಸಂಭವಿಸಿ ಸುಮಾರು 12 ದಿನಗಳ ಕಾಲ ರೈಲು ಸಂಚಾರ ಸ್ಥಗಿತಗೊಂಡಿತ್ತು.