Advertisement

ಅತಿಕ್ರಮಣ ಹಾಡಿ ಜಾಗ ತೆರವು

03:27 PM Dec 07, 2018 | |

ಭಟ್ಕಳ: ತಾಲೂಕಿನ ಯಲ್ವಡಿಕವೂರು ಗ್ರಾಪಂ ವ್ಯಾಪ್ತಿಯ ವಿವಿಧೆಡೆ ಸರಕಾರಿ ಹಾಡಿ ಜಾಗಾವನ್ನು ಅತಿಕ್ರಮಣ ಮಾಡಿ ಮನೆ ಹಾಗೂ ಅಂಗಡಿ ಕಟ್ಟುತ್ತಿರುವುದನ್ನು ತಹಶೀಲ್ದಾರ್‌ ಶಂಕರ ಗೌಡಿ ಹಾಗೂ ಸಿಬ್ಬಂದಿ ತೆರವುಗೊಸಿದರು.

Advertisement

ಸರಕಾರಿ ಹಾಡಿ ಜಾಗಾದಲ್ಲಿ ಮನೆ ಹಾಗೂ ಅಂಗಡಿ ಕಟ್ಟಡಗಳನ್ನು ನಿರ್ಮಿಸುತ್ತಿರುವ ಕುರಿತು ಜಿಲ್ಲಾಧಿಕಾರಿಗಳಿಗೆ ವಾಟ್ಸ್‌ಆ್ಯಪ್‌ ಸಂದೇಶ ಹೋಗಿತ್ತು. ದೂರು ಆಧರಿಸಿ  ತಹಶೀಲ್ದಾರ್‌ಗೆ ತಕ್ಷಣ ಭೇಟಿ ನೀಡಿ ಸರಕಾರಿ ಹಾಡಿ ಜಾಗಾದಲ್ಲಿ ಅತಿಕ್ರಮಣವಾಗದಂತೆ ತಡೆಯಲು ಆದೇಶ ನೀಡಿದ್ದರು. ತಕ್ಷಣ ಕಾರ್ಯಪ್ರವೃತ್ತರಾದ ತಹಶೀಲ್ದಾರ್‌ ಶಂಕರ ಗೌಡಿ ಸಿಬ್ಬಂದಿಗಳೊಂದಿಗೆ ಪೊಲೀಸ್‌ ಸಹಾಯ ಪಡೆದು ಸ್ಥಳಕ್ಕೆ ಹೋಗಿ ಹಾಡಿ ಜಾಗಾ ಅತಿಕ್ರಮಿಸಿ ಭರ್ಜರಿ ಮನೆ ಕಟ್ಟುತ್ತಿರುವುದನ್ನು ಹಾಗೂ ಅಂಗಡಿ ಮಳಿಗೆ ಕಟ್ಟುತ್ತಿರುವುದನ್ನು ಸಹ ತೆರವುಗೊಳಿಸಿದರು.

ಸರ್ಪನಕಟ್ಟೆ ಗ್ರಾಮ ಸರ್ವೆ ನಂ.217ಅ ಸ್ಥಳದಲ್ಲಿರುವ ಕೋಣಾರ ರಸ್ತೆಯಲ್ಲಿ ಕಟ್ಟಡ ನಿರ್ಮಾಣಕ್ಕಾಗಿ ಭಾರೀ ನೆಲಗಟ್ಟನ್ನು ನಿರ್ಮಾಣ ಮಾಡಿದ್ದು ಈಗಾಗಲೇ ಹತ್ತು ಪಿಲ್ಲಾರ್‌ಗಳನ್ನು ಕೂಡಾ ನಿಲ್ಲಿಸಿದ್ದರು. ಲಕ್ಷಾಂತರ ರೂ. ಗಳನ್ನು ಹಾಡಿ ಜಾಗಾಕ್ಕೆ ಸುರಿದಿದ್ದ ಅವರ ನೆಲಗಟ್ಟನ್ನೇ ನೆಲಸಮ ಮಾಡಲಾಯಿತು. ಸರ್ಪನಕಟ್ಟೆ ಗ್ರಾಮದಲ್ಲಿಯೇ ಒಟ್ಟು 12 ಅಂಗಡಿ ಮಳಿಗೆ ಕಟ್ಟುತ್ತಿರುವುದನ್ನು ಸಹ ತೆರವುಗೊಳಿಸಲಾಯಿತು. ಗೋಳಿಬೀಳೂರು ಗ್ರಾಮದಲ್ಲಿಯೂ ನಿರ್ಮಾಣ ಹಂತದಲ್ಲಿರುವ ಮನೆಯೊಂದನ್ನು ಸಹ ಕೆಡವಲಾಯಿತು. ಈ ಹಿಂದೆ ಕಟ್ಟಡ ಕಟ್ಟುವುದಕ್ಕೆ ಹವಣಿಸಿದಾಗ ಕಂದಾಯ ಇಲಾಖೆಯವರು ಪದೇಪದೇ ಎಚ್ಚರಿಸಿದ್ದರೂ ಅವರ ಕಣ್ಣುತಪ್ಪಿಸಿ ಕಟ್ಟಡ ನಿರ್ಮಾಣ ಮಾಡಲು ಹವಣಿಸಿದ್ದು ಲಕ್ಷಾಂತರ ರೂ. ನಷ್ಟ ಸಂಭವಿಸಲು ಕಾರಣವಾಗಿದೆ ಎನ್ನಲಾಗಿದೆ. ಕಾರ್ಯಾಚರಣೆಯಲ್ಲಿ ಕಂದಾಯ ನಿರೀಕ್ಷಕ ಗಣಪತಿ ಮೇತ್ರಿ, ಗ್ರಾಮಾಂತರ ಠಾಣೆ ಸಹಾಯಕ ಸಬ್‌ ಇನ್ಸಪೆಕ್ಟರ್‌ ಅಣ್ಣಪ್ಪ ಮೊಗೇರ ಸಿಬ್ಬಂದಿ, ಕಂದಾಯ ಸಿಬ್ಬಂದಿ ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next