ಕುಂದಾಪುರ: ಕುಡಿಯುವ ನೀರಿನ ಸಮಸ್ಯೆ ಯಿಂದ ಕಂಗೆಟ್ಟಿರುವ ಉಡುಪಿಗೆ ಹಾಲಾಡಿಯಿಂದ ನೀರು ಕೊಂಡೊಯ್ಯಲು ಮಾಡಿರುವ ಪ್ರಯತ್ನಗಳು ಇನ್ನೂ ಕೈಗೂಡಿಲ್ಲ. ಟೆಂಡರ್ ಪ್ರಕ್ರಿಯೆಯೇ 1 ವರ್ಷದಿಂದ ಬಾಕಿ ಯಾಗಿದೆ. ಪೈಪ್‌ಲೈನ್ ಹಾದುಹೋಗುವ ಗ್ರಾ.ಪಂ.ಗಳಿಗೆ ಶುದ್ಧ ನೀರು ಕೊಡಬೇಕೆನ್ನುವ ಬೇಡಿಕೆ ವಿಧಾನಪರಿಷತ್ ಅರ್ಜಿ ಸಮಿತಿಯಲ್ಲಿ ಇತ್ಯರ್ಥವಾಗಿದೆ. ಹೊಸದಾಗಿ ಡಿಪಿಆರ್ ಮಾಡಿ ಟೆಂಡರ್ ಕರೆಯುವ ಪ್ರಕ್ರಿಯೆ ನಡೆಯಬೇಕಿದೆ.
ಯೋಜನೆ ವಿವರ
ಉಡುಪಿ ನಗರಕ್ಕೆ ನೀರುಣಿಸುವ ಸ್ವರ್ಣಾ ನದಿಯ ನೀರು ವರ್ಷದ 8 ತಿಂಗಳು ಮಾತ್ರ ಸಾಲುತ್ತಿದ್ದು, ಉಳಿದ 4 ತಿಂಗಳಿಗೆ ವಾರಾಹಿ ನದಿಯಿಂದ ನೀರು ಒದಗಿಸುವುದು ಯೋಜನೆ. ಇದಕ್ಕಾಗಿ ಅಮೃತ್ (ಅಟಲ್ ಮಿಶನ್ ರೆಜು ವನೇಶನ್ ಆ್ಯಂಡ್ ಅರ್ಬನ್ ಟ್ರಾನ್ಸ್‌ಫಾರ್ಮೇಶನ್) ಯೋಜನೆಯಲ್ಲಿ 122.5 ಕೋ.ರೂ. ವೆಚ್ಚದಲ್ಲಿ ಡಿಪಿಆರ್ ಮಾಡಲಾಗಿದೆ. ಹಾಲಾಡಿಯ ಭರತ್ಕಲ್ನಿಂದ 864 ಎಂಎಂ ಗಾತ್ರದ ಪೈಪಿನಲ್ಲಿ 38.5 ಕಿ.ಮೀ. ದೂರದ ಬಜೆ ಅಣೆಕಟ್ಟಿಗೆ ನೀರು ತಂದು ಅಲ್ಲಿ ಶುದ್ಧೀಕರಿಸಿ ಉಡುಪಿಗೆ ಒದಗಿಸುವುದು ಯೋಜನೆ.
ಟೆಂಡರ್‌ಗೆ ತಡೆ
2018 ಮಾ. 27ರಂದು ಟೆಂಡರ್ ಕರೆಯಲು ಸಿದ್ಧತೆ ನಡೆದಿತ್ತು. ಪೈಪ್‌ಲೈನ್ ಹಾದುಹೋಗುವ ವ್ಯಾಪ್ತಿಯ 10 ಪಂಚಾಯತ್‌ಗಳು 2018 ಮಾ. 6ರಂದು ವಿಶೇಷ ಸಾಮಾನ್ಯ ಸಭೆಯಲ್ಲಿ ತಮಗೂ ಶುದ್ಧ ಕುಡಿಯುವ ನೀರು ಒದಗಿಸ ಬೇಕು, ಈಗಿನ ಟೆಂಡರ್ ರದ್ದುಪಡಿಸಬೇಕು, ಹೊಸದಾಗಿ ವಿಸ್ತೃತ ಯೋಜನಾ ವರದಿ (ಡಿಪಿಆರ್) ತಯಾರಿಸಬೇಕು. ಇಲ್ಲದಿದ್ದರೆ ಕೋರ್ಟ್ ಮೊರೆ ಹೋಗಲಾಗುವುದೆಂದು ನಿರ್ಣಯಿಸಿ ಸರಕಾರಕ್ಕೆ ನಿರ್ಣಯವನ್ನು ಕಳುಹಿಸಿದ್ದವು. ಪ್ರಯೋಜನ ಕಾಣದಿದ್ದಾಗ ವಿಧಾನಪರಿಷತ್ ಸದಸ್ಯರಾಗಿದ್ದ ಪ್ರತಾಪ್‌ಚಂದ್ರ ಶೆಟ್ಟಿ ಅವರ ಮಾರ್ಗದರ್ಶನದಲ್ಲಿ ಹಾಲಾಡಿ ಗ್ರಾ.ಪಂ. ಹಾಗೂ ಉಡುಪಿ ಜಿಲ್ಲಾ ರೈತ ಸಂಘ ವಿಧಾನಪರಿಷತ್ ಅರ್ಜಿ ಸಮಿತಿ ಮೊರೆ ಹೋಗಿತ್ತು. ಆದ್ದರಿಂದ ಟೆಂಡರ್ ಪ್ರಕ್ರಿಯೆ ನಡೆಯಲಿಲ್ಲ.
ನೀರು ಕೊಡಲು ಆದೇಶ
ವಿಧಾನಪರಿಷತ್ ಅರ್ಜಿ ಸಮಿತಿಯಲ್ಲಿ ಪಂಚಾಯತ್‌ಗಳಿಗೆ 40 ಎಂಎಲ್ಡಿ ನೀರು ಹಾಲಾಡಿಯಿಂದ ತೆಗೆದು ಶುದ್ಧೀಕರಿಸಿ ಕೊಡಲು ಆದೇಶಿಸಲಾಗಿದೆ. ಹಾಲಾಡಿ ಕಾಲುವೆ ದುರಸ್ತಿ ಇದ್ದಾಗ ಮಾತ್ರ ನೇರ ನೀರು ಕೊಡಬಹುದು ಎಂದು ಸೂಚಿಸಲಾಗಿದೆ. ಅರ್ಜಿ ಸಮಿತಿಯಲ್ಲಿ ಪ್ರಕರಣ ಇತ್ಯರ್ಥವಾಗದೇ ಟೆಂಡರ್ ಕರೆಯುವಂತಿರಲಿಲ್ಲ. ಅರ್ಜಿ ಸಮಿತಿ ತೀರ್ಮಾನದಿಂದಾಗಿ ಹೊಸ ಡಿಪಿಆರ್ ಮಾಡದೇ ಹಳೆ ಟೆಂಡರ್ ಕರೆವಂತಿಲ್ಲ.
ಜಾಗ ಗುರುತಿಸಿಲ್ಲ
ಹಾಲಾಡಿಯಲ್ಲಿ ಜಲ ಶುದ್ಧೀಕರಣ ಘಟಕ ರಚಿಸಲು ಪಂಚಾಯತ್ 5 ಕಡೆ ಗುರುತಿಸಿದೆ. ಕಡತ ಮಂದುವರಿ ಯಲಿಲ್ಲ. ಯೋಜನೆ ವತಿಯಿಂದ ನಿರ್ದಿಷ್ಟ ಜಾಗ ಗುರುತಿಸಿಲ್ಲ. ಮಂದಾರ್ತಿ, ಕೊಕ್ಕರ್ಣೆ ಭಾಗದಲ್ಲಿ 5 ಎಕರೆ ಜಾಗಕ್ಕಾಗಿ ಪ್ರಕಟನೆ ಹೊರಡಿಸಿದ್ದು ಅಲ್ಲಿ ಘಟಕ ಮಾಡಿದರೆ ಹಾಲಾಡಿಗೆ ಮತ್ತೆ ನೀರು ತರಬೇಕಾಗುತ್ತದೆ. ನದಿ ನೀರು ಹೋಗಲು, ಶುದ್ಧ ನೀರು ಬರಲು ಎಂದು ಎರಡು ಪ್ರತ್ಯೇಕ ಪೈಪ್‌ಲೈನ್ ಮಾಡಬೇಕಾಗುತ್ತದೆ.
ಉಡುಪಿ ಶಾಸಕರ ಭೇಟಿ
ಉಡುಪಿ ಶಾಸಕ ರಘುಪತಿ ಭಟ್ ಅವರು ಸೋಮವಾರ ಭರತ್ಕಲ್ಗೆ ಭೇಟಿ ನೀಡಿದ್ದು ಸ್ಥಳೀಯರಿಗೆ, ಪಂಚಾಯತ್‌ಗೆ ಮಾಹಿತಿ ನೀಡಿಲ್ಲ ಎನ್ನುವ ಆಕ್ಷೇಪ ಕೇಳಿ ಬಂದಿದೆ.