Advertisement

ಬೀದಿಬದಿ ವ್ಯಾಪಾರಿಗಳ ತೆರವು ಕಾರ್ಯ ಪ್ರಹಸನ

11:05 AM Aug 05, 2019 | Suhan S |

ಕೋಲಾರ: ಬೀದಿ ಬದಿ ವ್ಯಾಪಾರಿಗಳಿಗೆ ಪರ್ಯಾಯ ವ್ಯವಸ್ಥೆ ಮಾಡದೆ ನಗರಸಭೆ ತೆರವು ಕಾರ್ಯಾಚರಣೆ ನಡೆಸುತ್ತಿರುವುದಕ್ಕೆ ಸಾರ್ವಜನಿಕರಿಂದ ಟೀಕೆ ವ್ಯಕ್ತವಾಗಿದೆ.

Advertisement

ಕಳೆದ ವಾರ ನಗರಸಭೆ ದಿಢೀರ್‌ ಕಾರ್ಯಾಚರಣೆ ನಡೆಸಿ ಹಳೇ ಬಸ್‌ ನಿಲ್ದಾಣ, ಟಿ.ಚನ್ನಯ್ಯ ರಂಗಮಂದಿರ ಮುಂಭಾಗದ ರಸ್ತೆ, ಕಾಲೇಜು ವೃತ್ತ, ಅಂಬೇಡ್ಕರ್‌ ರಸ್ತೆ, ಬಸ್‌ ನಿಲ್ದಾಣ ಮುಂಭಾಗ ಮತ್ತಿತರ ರಸ್ತೆಗಳಲ್ಲಿ ಬೀದಿಬದಿಯ ನೂರಾರು ಅಂಗಡಿಗಳನ್ನು ತೆರವುಗೊಳಿಸಿತ್ತು.

ಆದರೆ, ನಗರಸಭೆ ಕಾರ್ಯಾಚರಣೆ ನಡೆದ ಎರಡೇ ದಿನಕ್ಕೆ ತೆರವುಗೊಂಡಿದ್ದ ಅಂಗಡಿ ಮಾಲಿಕರು ಮತ್ತದೇ ಜಾಗದಲ್ಲಿ ವ್ಯಾಪಾರ ವಹಿವಾಟು ಶುರು ಮಾಡುವ ಮೂಲಕ ನಗರಸಭೆಗೆ ಸವಾಲು ಎಸೆದಿದ್ದಾರೆ. ಕೋಲಾರ ನಗರದಲ್ಲಿ ಈ ರೀತಿಯ ವಿದ್ಯಮಾನಗಳು ನಡೆಯುತ್ತಿರುವುದು ಹೊಸದೇನಲ್ಲ. ಪ್ರತಿ ವರ್ಷವೂ ಒಂದೆರೆಡು ಬಾರಿ ನಗರಸಭೆ, ದಿಢೀರ್‌ ಕಾರ್ಯಾಚರಣೆ ನಡೆಸಿ ಬಡ ವ್ಯಾಪಾರಿಗಳ ಅಂಗಡಿ ಮುಂಗಟ್ಟುಗಳನ್ನು ತೆರವುಗೊಳಿಸುವ ಕೆಲಸ ಮಾಡುತ್ತದೆ.

ವ್ಯಾಪಾರಕ್ಕೆ ಜಾಗವಿಲ್ಲ: ನಗರ ಬೆಳೆದಂತೆ ಮುಂದಾಲೋಚನೆ ಮೂಲಕ ನಗರದ ಅಗತ್ಯಗಳಿಗೆ ಸೌಲಭ್ಯ ಒದಗಿಸುವಲ್ಲಿ ನಗರಸಭೆ ಸಂಪೂರ್ಣ ವಿಫ‌ಲವಾಗಿದೆ. ನಗರದ ಮಧ್ಯಭಾಗದ ದೊಡ್ಡಪೇಟೆ ತರಕಾರಿ ಮಾರುಕಟ್ಟೆ ಒಂದೆರೆಡು ವಾರ್ಡ್‌ಗಳ ಜನರ ವ್ಯಾಪಾರ ವಹಿವಾಟಿಗೂ ಸಾಲುತ್ತಿಲ್ಲ. ನಗರದ ಉತ್ತರ ಭಾಗದ ವಾರ್ಡ್‌ಗಳ ಜನರ ಅನುಕೂಲಕ್ಕಾಗಿ ಅಮ್ಮವಾರಿ ಪೇಟೆಯಲ್ಲಿ ತರಕಾರಿ ಮಾರುಕಟ್ಟೆ ಇತ್ಯಾದಿ ಬೀದಿಬದಿ ಅಂಗಡಿಗಳು ಇರುತ್ತಿತ್ತು. ಆದರೆ, ಅಮ್ಮವಾರಿಪೇಟೆ ಬಳಿ ರಸ್ತೆ ನಡುಮಧ್ಯೆ ಇದ್ದ ತರಕಾರಿ ಮಳಿಗೆಗಳನ್ನು ತೆರವುಗೊಳಿಸಿದ ನಂತರ ದೊಡ್ಡ ಕೊರತೆ ಏರ್ಪಟ್ಟಿದೆ. ಇದೇ ಅವಧಿಯಲ್ಲಿ ಟಿ.ಚನ್ನಯ್ಯ ರಂಗಮಂದಿರದ ಮುಂಭಾಗ ಹಬ್ಬ ಹರಿದಿನಗಳಲ್ಲಿ ಫ‌ುಟ್ಪಾತ್‌ ಮೇಲೆ ಕೂಡುತ್ತಿದ್ದ ವ್ಯಾಪಾರಿ ಮಳಿಗೆಗಳು ಜನರ ಅನುಕೂಲಕ್ಕಾಗಿ ವರ್ಷಪೂರ್ತಿ ಇರುವಂತಾದವು. ಇದು ಸಹಜವಾಗಿಯೇ ಹಳೇ ಬಸ್‌ನಿಲ್ದಾಣ, ಸಾಂಸ್ಕೃತಿಕ ಕೇಂದ್ರವಾದ ಟಿ.ಚನ್ನಯ್ಯರಂಗಮಂದಿರ, ಡಿವಿಜಿ ಕೇಂದ್ರ ಗ್ರಂಥಾಲಯ ಮುಂಭಾಗ ಜನಜಂಗುಳಿಗೆ ಕಾರಣವಾಗಿದ್ದವು. ಮೊದಲೇ ಕಿರಿದಾದ ರಸ್ತೆ, ಶಾಲಾ ಕಾಲೇಜುಗಳಿಗೆ ಸಾವಿರಾರು ಮಂದಿ ಓಡಾಡಲು ಅನಾನುಕೂಲವಾಗಿತ್ತು. ವಾಹನಗಳ ಸಂಚಾರಕ್ಕೆ ಕಷ್ಟಕರವೆಂಬ ವಾತಾವರಣ ನಿರ್ಮಾಣವಾಗಿತ್ತು.

 

Advertisement

ವಾಹನ ಸಂಚಾರ ಅಸಾಧ್ಯ: ಹಬ್ಬದ ದಿನಗಳಲ್ಲಿ ರಸ್ತೆಯ ಎರಡೂ ಬದಿಗಳಲ್ಲಿ ನೂರಾರು ಅಂಗಡಿಗಳು ತಲೆ ಎತ್ತುವುದರಿಂದ ನಾಗರಿಕರ-ವಾಹನಗಳ ಸಂಚಾರ ಕಷ್ಟಕರವಾಗುತ್ತಿತ್ತು. ಇನ್ನು ವ್ಯಾಪಾರ ಮುಗಿದ ಮೇಲೆ ಲೋಡುಗಟ್ಟಲೇ ತರಕಾರಿ, ಹಣ್ಣು ಹಂಪಲು, ಬಾಳೇದಿಂಡಿನ ತ್ಯಾಜ್ಯ ಕೋಲಾರವನ್ನು ಕಸದ ನಗರವನ್ನಾಗಿಸುತ್ತಿತ್ತು.

ವ್ಯಾಪಾರಿ ವಲಯ: ನಗರದ ಈ ಸಮಸ್ಯೆ ಅರಿತು ನಗರಸಭೆಯ ಹಿಂದಿನ ಕ್ರಿಯಾಶೀಲ ಅಧ್ಯಕ್ಷ ಬಿ.ಎಂ.ಮುಬಾರಕ್‌, ನಗರದ ಹಲವೆಡೆ ವ್ಯಾಪಾರಿ ವಲಯಗಳನ್ನು ಸ್ಥಾಪಿಸಲು ಮುಂದಾಗಿದ್ದರು. ಜನನಿಬಿಡವಲ್ಲದ ರಸ್ತೆ ಗುರುತಿಸಿದ್ದ ಮುಬಾರಕ್‌, ಆ ರಸ್ತೆಗಳಲ್ಲಿ ವ್ಯಾಪಾರಿ ವಲಯವನ್ನಾಗಿಸಿ ಅಲ್ಲಿಯೇ ತರಕಾರಿ, ಹಣ್ಣು ಹಂಪಲು, ಹಬ್ಬ ಹರಿದಿನಗಳ ವ್ಯಾಪಾರ ನಡೆಯಲು ಅನುಕೂಲ ಮಾಡಿಕೊಡಲು ಮುಂದಾಗಿದ್ದರು. ಈ ಕುರಿತು ಅಗತ್ಯ ಅನುದಾನವನ್ನು ನಗರಸಭೆ ನಿಧಿಯಿಂದಲೇ ವೆಚ್ಚ ಮಾಡಲು ನಿರ್ಧರಿಸಿದ್ದರು. ಸಂಬಂಧಪಟ್ಟ ವ್ಯಾಪಾರಿ ವಲಯದ ಡಿಪಿಆರ್‌ ಶಿಫಾರಸ್ಸನ್ನು ಸರ್ಕಾರದ ಅನುಮೋದನೆಗೂ ಕಳುಹಿಸಿದ್ದರು. ಆದರೆ, ಅವರ ಆಡಳಿತಾವಧಿ ಮುಗಿದ ಕಾರಣದಿಂದ ವ್ಯಾಪಾರಿ ವಲಯ ನನೆಗುದಿಗೆ ಬಿದ್ದಿತ್ತು. ಆನಂತರ ಬಂದ ನಗರಸಭೆ ಅಧಿಕಾರಿ, ಅಧ್ಯಕ್ಷರು ವ್ಯಾಪಾರಿ ವಲಯ ಕುರಿತಂತೆ ಗಮನಹರಿಸಲಿಲ್ಲ.

ಗುರುತಿನ ಚೀಟಿ: ಇಡೀ ರಾಜ್ಯದಲ್ಲಿಯೇ ಮೊಟ್ಟ ಮೊದಲ ಬಾರಿಗೆ ಕೋಲಾರ ನಗರಸಭೆ, ಬೀದಿ ಬದಿ ವ್ಯಾಪಾರಿಗಳನ್ನು ಗುರುತಿಸಿ ಅವರಿಗೆ ಗುರುತಿನ ಚೀಟಿ ನೀಡುವ ಕಾರ್ಯಕ್ಕೂ ಕೈ ಹಾಕಿತ್ತು. 1370 ಮಂದಿ ಬೀದಿ ಬದಿ ವ್ಯಾಪಾರಿಗಳು ನಗರಸಭೆಯಿಂದ ಗುರುತಿನ ಚೀಟಿ ಪಡೆದುಕೊಂಡು ಅಧಿಕೃತವಾಗಿ ವ್ಯಾಪಾರ ಮಾಡುತ್ತಿದ್ದರು. ಹೀಗೆ ಗುರುತಿನ ಚೀಟಿ ಪಡೆದ ವ್ಯಾಪಾರಿಗಳೆಲ್ಲರಿಗೂ ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಬ್ಯಾಲಹಳ್ಳಿ ಎಂ.ಗೋವಿಂದಗೌಡ ಸಾಲ ನೀಡುವ ವಾಗ್ಧಾನ ಮಾಡಿ ಲಕ್ಷಾಂತರ ರೂ.ಗಳ ಸಾಲ ನೀಡಿದ್ದರು. ಆದರೆ, ಇವೆಲ್ಲಾ ತಯಾರಿಗಳು ಮುಬಾರಕ್‌ ನಂತರದ ಅವಧಿಯಲ್ಲಿ ಮುಂದುವರಿಯದ ಕಾರಣ ಬೀದಿ ಬದಿಯ ವ್ಯಾಪಾರಿಗಳ ಸಂಕಷ್ಟಕ್ಕೆ ಕೊನೆ ಇಲ್ಲದಂತಾಗಿದೆ. ಜೊತೆಗೆ ಫ‌ುಟ್ಪಾತ್‌ ತೆರವು ಕಾರ್ಯಾಚರಣೆ, ಪಾದಚಾರಿಗಳು ಸುಗಮ ಹಾಗೂ ಸುರಕ್ಷಿತ ಸಂಚಾರವೂ ಸಾಧ್ಯವಿಲ್ಲದಂತಾಗಿದೆ.

ಯದ್ವಾತದ್ವಾ ಅಂಗಡಿಗಳು: ಪರ್ಯಾಯ ವ್ಯವಸ್ಥೆ ಮಾಡದಿರುವುದರಿಂದ ನಗರದ ಯಾವುದೇ ರಸ್ತೆಯ ಎರಡೂ ಬದಿಯಲ್ಲಿ ಯದ್ವಾತದ್ವ ಬೀದಿ ಬದಿ ಅಂಗಡಿಗಳು ತಲೆ ಎತ್ತುವಂತಾಯಿತು. ಈ ಅಂಗಡಿಗಳ ಮೂಲಕ ನೂರಾರು ಕುಟುಂಬಗಳು ಜೀವನ ಮಾಡುತ್ತಿವೆ. ಆದರೆ, ರಸ್ತೆಯ ಸಂಚಾರದ ವಿಚಾರದಲ್ಲಿ ಬೀದಿ ಬದಿಯ ವ್ಯಾಪಾರ ಸಾಕಷ್ಟು ಕಿರಿಕಿರಿಯನ್ನುಂಟು ಮಾಡುತ್ತಿತ್ತು.

ಈ ಕುರಿತು ಸಾರ್ವಜನಿಕರಿಂದ ಕೇಳಿ ಬಂದ ದೂರುಗಳ ಹಿನ್ನೆಲೆಯಲ್ಲಿ ನಗರಸಭೆ ಆಡಳಿತಾಧಿಕಾರಿ ಆಗಿರುವ ಜಿಲ್ಲಾಧಿಕಾರಿ ಜೆ.ಮಂಜುನಾಥ್‌, ಪೌರಾಯುಕ್ತ ಸತ್ಯನಾರಾಯಣ ಇತರರಿಗೆ ಅಕ್ರಮ ಅಂಗಡಿ ಮಳಿಗೆಗಳನ್ನು ತೆರವುಗೊಳಿಸುವಂತೆ ತಾಕೀತು ಮಾಡಿದ್ದರು.

ಅಂಗಡಿಗಳನ್ನು ನೆಲಸಮ ಮಾಡಿತ್ತು: ಜಿಲ್ಲಾಧಿಕಾರಿಗೆ ವಾಸ್ತವಾಂಶ ತಿಳಿಸದ ನಗರಸಭೆ ಅಧಿಕಾರಿಗಳು, ಡಿ.ಸಿ. ಆದೇಶದಂತೆ ತೆರವು ಕಾರ್ಯಾಚರಣೆಗೆ ಮುಂದಾಯಿತು. ಎರಡು ದಿನಗಳ ಕಾಲ ತೆರವು ಕಾರ್ಯಾ ಮಾಡಿ ನೂರಾರು ಅಂಗಡಿಗಳನ್ನು ಜೆಸಿಬಿ ಮೂಲಕ ನೆಲಸಮ ಮಾಡಿಸಿತ್ತು. ಆದರೆ, ಎರಡೇ ದಿನಗಳಲ್ಲಿ ಮತ್ತೆ ರಸ್ತೆ ಬದಿ ವ್ಯಾಪಾರಿಗಳು ಬೇರೆ ರೂಪದಲ್ಲಿ ಮತ್ತೇ ವ್ಯಾಪಾರ ಶುರು ಮಾಡಿದರು.

ತಳ್ಳುವ ಗಾಡಿ ಮಾದರಿಯಲ್ಲಿ ಅಂಗಡಿಗಳನ್ನು ರಸ್ತೆ ಬದಿ ಪೇರಿಸಿಡಲಾಗುತ್ತಿದ್ದು, ಇನ್ನು ಕೆಲವೇ ದಿನಗಳಲ್ಲಿ ವರಮಹಾಲಕ್ಷ್ಮಿ ಹಬ್ಬ ಸಮೀಪಿಸುತ್ತಿರುವುದರಿಂದ ವ್ಯಾಪಾರ ವಹಿವಾಟು ಮತ್ತಷ್ಟು ದ್ವಿಗುಣಗೊಳ್ಳಲಿದೆ. ಇದು ನಗರಸಭೆ ಕಾರ್ಯಾಚರಣೆ ಪ್ರಹಸನವನ್ನು ಅಣಕಿಸುವಂತೆ ಮಾಡಿದೆ.

ಶಾಶ್ವತ ಪರಿಹಾರವೇನು?: ಈ ಹಿಂದಿನ ಅಧ್ಯಕ್ಷ ಬಿ.ಎಂ.ಮುಬಾರಕ್‌ ರೂಪಿಸಿರುವ ವ್ಯಾಪಾರಿ ವಲಯ ಯೋಜನೆ ಕಾರ್ಯರೂಪಕ್ಕೆ ತರಲು ನಗರಸಭೆ ಮುಂದಾಗಬೇಕು. 2 ಸಾವಿರಕ್ಕೂ ಅಧಿಕ ಬೀದಿ ಬದಿ ವ್ಯಾಪಾರಿ ಗಳಿದ್ದಾರೆ. ಈ ಪೈಕಿ ತರಕಾರಿ, ಹಣ್ಣು ಹಂಪಲು, ಬೀದಿ ಬದಿ ಹೋಟೆಲ್ಗಳು, ಹೀಗೆ ವರ್ಗೀಕರಣ ಮಾಡಿ ಎಲ್ಲಾ ರೀತಿಯ ವ್ಯಾಪಾರಕ್ಕೂ ಪ್ರತ್ಯೇಕ ರಸ್ತೆಗಳ ವ್ಯಾಪಾರ ವಲಯದಲ್ಲಿ ಅವಕಾಶ ಮಾಡಿಕೊಡಬೇಕು. ಅವರಿಗೆ ಸ್ಥಳಾವಕಾಶ ನಿಗದಿಪಡಿಸಬೇಕು. ಇಲ್ಲವಾದರೆ ಫ‌ುಟ್ಪಾಟ್ ತೆರವು ಪ್ರಹಸನದಂತೆ ಭಾಸವಾಗು ತ್ತದೆ. ಗ್ರಾಹಕ-ಬಡ ವ್ಯಾಪಾರಿಗಳಿಗೂ ತೊಂದರೆಯಾಗುತ್ತದೆ.

 

● ಕೆ.ಎಸ್‌.ಗಣೇಶ್‌

Advertisement

Udayavani is now on Telegram. Click here to join our channel and stay updated with the latest news.

Next