ನೆಲ್ಲಿಕಟ್ಟೆ: ನೆಕ್ರಾಜೆ ಗ್ರಾಮಕ್ಕೊಳಪಟ್ಟ ಸಾಲೆತ್ತಡ್ಕ ಚೂರಿಪಳ್ಳದ ಸರಕಾರಿ ಸ್ಥಳದಲ್ಲಿ ಅಕ್ರಮವಾಗಿ ನಿರ್ಮಿಸಿದ ಮನೆಗಳ ಅಡಿಪಾಯವನ್ನು ಕಂದಾಯ ಅಧಿಕಾರಿಗಳು ಜೆಸಿಬಿ ಬಳಸಿ ತೆರವುಗೊಳಿಸಿದ್ದಾರೆ. ಸಾಲೆತ್ತಡ್ಕದಲ್ಲಿ ನಾಲ್ಕು, ಚೂರಿಪಳ್ಳದಲ್ಲಿ ಮೂರು ಮನೆಗಳ ಅಡಿಪಾಯ ತೆರವುಗೊಳಿಸಲಾಗಿದೆ. ಕಂದಾಯ ಸಚಿವರು ನೀಡಿದ ನಿರ್ದೇಶದಂತೆ ಕಾಸರಗೋಡು ತಹಶೀಲ್ದಾರ್, ನೆಕ್ರಾಜೆ ಗ್ರಾಮಾಧಿಕಾರಿಗಳು ಬದಿಯಡ್ಕ ಪೊಲೀಸರ ನೆರವಿನೊಂದಿಗೆ ಕಾರ್ಯಾಚರಣೆ ನಡೆಸಿದರು.
ನೆಕ್ರಾಜೆ ಹಾಗೂ ಸಾಲೆತ್ತಡ್ಕದಲ್ಲಿ 7 ಮನೆಗಳ ನಿರ್ಮಾಣಕ್ಕೆ ಅಡಿಪಾಯ ನಿರ್ಮಿಸಲಾಗಿತ್ತು. ಈ ಪೈಕಿ ಒಂದು ಮನೆಗೆ ಗೋಡೆ ನಿರ್ಮಾಣಗೊಂಡಿದೆ. ಇದೇ ವೇಳೆ ಮನೆಗಳ ಅಡಿಪಾಯವನ್ನು ಮುರಿದು ತೆಗೆದ ಅಧಿಕಾರಿಗಳ ಕ್ರಮವನ್ನು ಪ್ರತಿಭಟಿಸಿ ಸಾಧುಸಂರಕ್ಷಣಾ ಸಮಿತಿ ನೇತೃತ್ವದಲ್ಲಿ ನೆಕ್ರಾಜೆ ಗ್ರಾಮ ಕಚೇರಿ ಮುಂದೆ ಬುಧವಾರ ಧರಣಿ ನಡೆಯಿತು.
ಯಾವುದೇ ಮುನ್ಸೂಚನೆ ನೀಡದೆ ಅಧಿಕಾರಿಗಳು ಮನೆಗಳನ್ನು ಮುರಿದು ತೆಗೆದಿದ್ದಾರೆ. ಅಲ್ಲದೆ ಕೆಲವು ಮನೆಗಳನ್ನು ಮಾತ್ರವೇ ತೆರವುಗೊಳಿಸಿ ಪಕ್ಷಪಾತ ನೀತಿ ಅನುಸರಿಸಿದ್ದಾರೆಂದು ಆರೋಪಿಸಿ ಧರಣಿ ನಡೆಸಲಾಯಿತು.
ಆದರೆ ಈ ಆರೋಪವನ್ನು ಕಂದಾಯ ಅಧಿಕಾರಿಗಳು ತಿರಸ್ಕರಿಸಿದ್ದಾರೆ. ನಿರ್ಮಾಣ ಹಂತದ ಮನೆಗಳನ್ನು ಮಾತ್ರವೇ ತೆರವುಗೊಳಿಸಲಾಗಿದೆ. ಈ ಸ್ಥಳದಲ್ಲಿ ಇತರ ಒಂಭತ್ತು ಮನೆಗಳಿದ್ದರೂ ಅಲ್ಲಿ ಕುಟುಂಬಗಳು ವಾಸವಾಗಿವೆ. ಜನವಾಸವಿರುವ ಮನೆಗಳನ್ನು ತೆರವು ಗೊಳಿಸಲು ನಮಗೆ ಅಧಿಕಾರವಿಲ್ಲವೆಂದು ಅಧಿಕಾರಿಗಳು ತಿಳಿಸಿದ್ದಾರೆ.