ಬಂಟ್ವಾಳ: ಪುರಸಭೆ ವ್ಯಾಪ್ತಿಯಲ್ಲಿರುವ ಪಾಣೆಮಂಗಳೂರು ಸುಣ್ಣದಗೂಡು ನೇತ್ರಾವತಿ ನದಿ ಕಿನಾರೆಯ ಪರಂಬೋಕು ಪ್ರದೇಶ ದಲ್ಲಿದ್ದ 14 ಅಕ್ರಮ ಕಟ್ಟಡಗಳನ್ನು ಶನಿವಾರ ಕಂದಾಯ ಹಾಗೂ ಪುರಸಭಾ ಅಧಿಕಾರಿಗಳ ಸಮ್ಮುಖದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ನೊಂದಿಗೆ ತೆರವುಗೊಳಿಸಲಾಯಿತು.
ಪಾಣೆಮಂಗಳೂರು ಹಳೆ ಸೇತುವೆಯ ತಳಭಾಗದ ಇಕ್ಕೆಲಗಳಲ್ಲಿ ರುವ ಅಕ್ರಮ ಕಟ್ಟಡಗಳನ್ನು ತೆರವು ಗೊಳಿಸುವ ವಿಚಾರ ಹಲವು ವರ್ಷಗಳ ಹಿಂದಿನದು. ಹಲವು ವರ್ಷಗಳ ಹಿಂದೆ ಇಲ್ಲಿ ಸುಣ್ಣ ತಯಾರಿಕೆ ನಡೆಯುತ್ತಿದ್ದ ಹಿನ್ನೆಲೆ ಯಲ್ಲಿ ಸುಣ್ಣದ ಗೂಡು ಎಂದು ಕರೆಯಲ್ಪಡುತ್ತಿತ್ತು.
ಸ್ವಲ್ಪ ಸಮಯದ ಹಿಂದೆ ಈ ಪ್ರದೇಶದ ನಿವಾಸಿಗಳಿಗೆ ಕಂದಾಯ ಇಲಾಖೆ ಹಾಗೂ ಪುರಸಭೆ ಯಿಂದ ನೋಟಿಸ್ ಜಾರಿ ಮಾಡಿ, ತೆರವು ಗೊಳಿಸುವ ಕುರಿತು ತಿಳಿಸಲಾಗಿತ್ತು. ಅದರಂತೆ ಶನಿವಾರ ಮಂಗಳೂರು ಸಹಾಯಕ ಕಮಿಷನರ್ ರವಿಚಂದ್ರ ನಾಯ್ಕ ಹಾಗೂ ಬಂಟ್ವಾಳ ತಹಶೀಲ್ದಾರ್ ರಶ್ಮಿ ಎಸ್.ಆರ್. ನೇತೃತ್ವ ದಲ್ಲಿ ಕಟ್ಟಡಗಳ ತೆರವು ಕಾರ್ಯ ನಡೆಯಿತು.
ಸ್ಥಳೀಯ 2 ಕುಟುಂಬದವರು ಪ್ರತ್ಯೇಕ ವ್ಯವಸ್ಥೆ ಆಗುವವರೆಗೆ ಅಲ್ಲೇ ಉಳಿದುಕೊಂಡಿದ್ದಾರೆ. ಉಳಿದಂತೆ ಎಲ್ಲ ಅಕ್ರಮ ನಿರ್ಮಾಣಗಳನ್ನು ಯಂತ್ರಗಳ ಮೂಲಕ ನೆಲಸಮಗೊಳಿಸಲಾಗಿದೆ. ಮುಂಜಾನೆ ಆರಂಭಗೊಂಡ ಕಾರ್ಯಾಚರಣೆ ಮಧ್ಯಾಹ್ನ ಪೂರ್ಣ ಗೊಂಡಿತು. ಒಂದೆರಡು ಆರ್‌ಸಿಸಿ ಕಟ್ಟಡಗಳ ಹೊರತು ಉಳಿದೆಲ್ಲವೂ ಹಂಚಿನ ಕಟ್ಟಡಗಳು.
ತೆರವು ಕಾರ್ಯಕ್ಕೆ ಸಾಕಷ್ಟು ವಿರೋಧಗಳಿದ್ದ ಹಿನ್ನೆಲೆಯಲ್ಲಿ ಪೊಲೀಸ್ ವೃತ್ತ ನಿರೀಕ್ಷಕ ಟಿ.ಡಿ. ನಾಗರಾಜ್ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿತ್ತು. ಹಳೆಸೇತುವೆ ರಸ್ತೆಯಲ್ಲಿ ವಾಹನ ಸಂಚಾರವನ್ನೂ ತಡೆಯಲಾಗಿತ್ತು.
ಪುರಸಭಾ ಮುಖ್ಯಾಧಿಕಾರಿ ರೇಖಾ ಜೆ. ಶೆಟ್ಟಿ, ಎಂಜಿನಿಯರ್ ಡೊಮಿನಿಕ್ ಡಿಮೆಲ್ಲೊ, ಉಪತಹಶೀಲ್ದಾರ್ ರಾಜೇಶ್ ನಾಯ್ಕ, ಕಂದಾಯ ನಿರೀಕ್ಷಕ ನವೀನ್‌ಕುಮಾರ್, ಗ್ರಾಮ ಕರಣಿಕೆ ವಿಜೇತಾ, ಪಿಎಸ್‌ಐಗಳಾದ ಎಚ್.ವಿ. ಚಂದ್ರಶೇಖರ್, ಪ್ರಸನ್ನ ಎಂ.ಎಸ್. ಹಾಗೂ ಎಲ್ಲಪ್ಪ ಎಸ್. ಪಾಲ್ಗೊಂಡಿದ್ದರು.
ಪರಿಸರ ಮಾಲಿನ್ಯದ
ಹಿನ್ನೆಲೆ ಯಲ್ಲಿ ಸುಣ್ಣ ತಯಾರಿಕೆ ಸ್ಥಗಿತ ಗೊಂಡಿದ್ದು, ಬಳಿಕ ಕೆಲವು ವ್ಯಕ್ತಿಗಳು ಅಲ್ಲಿ ಅಕ್ರಮ ಕಟ್ಟಡಗಳನ್ನು ನಿರ್ಮಿಸಿ ಕೂಲಿ ಕಾರ್ಮಿಕರಿಗೆ ಬಾಡಿಗೆಗೆ ನೀಡುತ್ತಿದ್ದರು. ಇದು ಪ್ರವಾಹ ಬಾಧಿತ ಪ್ರದೇಶವಾಗಿದ್ದು, ಪ್ರವಾಹದ ವೇಳೆ ಸ್ಥಳೀಯ ನಿವಾಸಿ ಗಳಿಗೆ ಪರಿಹಾರ ವಿತರಣೆಯೂ ನಡೆಯುತ್ತಿತ್ತು.