Advertisement

ಅನಧಿಕೃತ ಧೂಮಪಾನ ವಲಯ ತೆರವುಗೊಳಿಸಿ: ಎಸಿಪಿ ಸೂಚನೆ

07:26 AM Feb 22, 2019 | Team Udayavani |

ಮೈಸೂರು: ತಂಬಾಕು ನಿಯಂತ್ರಣ ಕಾಯಿದೆಯನ್ನು ಪೊಲೀಸ್‌ ಇಲಾಖೆಯು ಸಮರ್ಪಕವಾಗಿ ಅನುಷ್ಠಾನ ಮಾಡುತ್ತಿದ್ದು, ಸಾರ್ವಜನಿಕರ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ಇಲಾಖೆಯು ವಿವಿಧ ಕಾಯಿದೆ ಹಾಗೂ ಕಾರ್ಯಕ್ರಮಗಳ ನಡುವೆಯೂ ಕೋಟಾ³ ಕಾಯಿದೆಯನ್ನು ಅತ್ಯಂತ ಕಾಳಜಿಯಿಂದ ಮಾಡುತ್ತಿದೆ ಎಂದು ನಗರ ಪೊಲೀಸ್‌ ಸಹಾಯಕ ಅಯುಕ್ತ ಜಿ.ಎಸ್‌.ಗಜೇಂದ್ರ ಪ್ರಸಾದ್‌ ತಿಳಿಸಿದರು.

Advertisement

ಜಿಲ್ಲೆಯ ಬಾರ್‌ ಮತ್ತು ರೆಸ್ಟೋರೆಂಟ್‌, ಪಬ್‌, ಕ್ಲಬ್‌ಗಳ ಪದಾಧಿಕಾರಿಗಳು, ವ್ಯವಸ್ಥಾಪಕರು ಹಾಗೂ ಮಾಲೀಕರಿಗೆ ತಂಬಾಕು ನಿಯಂತ್ರಣ ಕಾಯಿದೆಯ ಅರಿವು ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕಾರ್ಯಾಚರಣೆ: ಬಾರ್‌ ಮತ್ತು ರೆಸ್ಟೋರೆಂಟ್‌ಗಳಲ್ಲಿ ಧೂಮಪಾನಕ್ಕೆ ಕಡಿವಾಣ ಹಾಕಲು ವಿವಿಧ ಇಲಾಖೆಗಳು ಶ್ರಮಿಸುತ್ತಿವೆ. ಧೂಮಪಾನ ಮಾಡದವರ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ಪೊಲೀಸ್‌, ಆರೋಗ್ಯ ಇಲಾಖೆ, ನಗರ ಪಾಲಿಕೆ ಹಾಗೂ ಅಬಕಾರಿ ಇಲಾಖೆಗಳಿಂದ ಜಂಟಿಯಾಗಿ ಕಾರ್ಯಾಚರಣೆ ಕೈಗೊಳ್ಳಲಾಗುವುದು ಎಂದರು.

ಬಾರ್‌  ಮತ್ತು ರೆಸ್ಟೋರೆಂಟ್‌, ಪಬ್‌, ಕ್ಲಬ್‌ಗಳಲ್ಲಿ ಮುಕ್ತವಾಗಿ ಧೂಮಪಾನ ಮಾಡಲು ಅನುವು ಮಾಡಿಕೊಡಲಾಗುತ್ತಿದೆ. ಆದರೆ, ಪೌರಾಡಳಿತ ನಿರ್ದೇಶನಾಲಯದ ಸುತ್ತೋಲೆಯ ಪ್ರಕಾರ  ಬಾರ್‌ ಮತ್ತು ರೆಸ್ಟೋರೆಂಟ್‌, ಪಬ್‌, ಕ್ಲಬ್‌ ಹಾಗೂ ಹೋಟೆಲ್‌ಗ‌ಳಲ್ಲಿ ಅನಧಿಕೃತವಾಗಿ ಸ್ಥಾಪಿಸಲಾಗಿರುವ ಧೂಮಪಾನ ವಲಯಗಳನ್ನು ತೆರವುಗೊಳಿಸಬೇಕು.

ಅಧಿಕೃತವಾಗಿ ಹಾಗೂ ಕೋಟಾ³ ಕಾಯಿದೆಯ ಅನುಸಾರವಾಗಿ ಧೂಮಪಾನ ವಲಯಗಳನ್ನು ಸ್ಥಾಪಿಸಲು ಇಚ್ಛಿಸುವ ಹೋಟೆಲ್‌ ಅಥವಾ ಬಾರ್‌ನ ಮಾಲೀಕರು ಪಾಲಿಕೆ ವತಿಯಿಂದ ನಿರಕ್ಷೇಪಣಾ ಪತ್ರವನ್ನು ಪಡೆದುಕೊಂಡು ನಂತರ ಸ್ಥಾಪಿಸಬಹುದಾಗಿದೆ.

Advertisement

ಯಾವುದೇ ಉದ್ದಿಮೆಯು ಈ ಕಾನೂನುಗಳನ್ನು ಪಾಲಿಸದಿದ್ದಲ್ಲಿ ಅಂತಹ ಉದ್ದಿಮೆಯ ಪರವಾನಗಿಯನ್ನು ರದ್ದುಗೊಳಿಸಬಹುದಾಗಿದೆ ಹಾಗೂ ಕಾನೂನು ಕ್ರಮ ಕೈಗೊಳ್ಳಬಹುದಾಗಿದೆ. ಇದರಿಂದ ಧೂಮಪಾನ ಮಾಡದ ಹಾಗೂ ಕಾರ್ಮಿಕರ ಹಿತದೃಷ್ಟಿಯನ್ನು ಕಾಪಾಡಬಹುದಾಗಿದೆ ಎಂದರು. 

ಅರಿವು: ಜಿಲ್ಲಾ ಸರ್ವೇಕ್ಷಣಾಧಿಕಾರಿ ಹಾಗೂ ತಂಬಾಕು ನಿಯಂತ್ರಣ ಕಾರ್ಯಕ್ರಮಾಧಿಕಾರಿ ಡಾ. ಕುಸುಮ ಮಾತನಾಡಿ, ಆರೋಗ್ಯ ಇಲಾಖೆಯು ತಂಬಾಕು ನಿಯಂತ್ರಣ ಕಾಯಿದೆ ಅನುಷ್ಠಾನ ಮಾಡಲು ವಿವಿಧ ಇಲಾಖೆಗಳು ಕೈಜೋಡಿಸಿವೆ. ಆರೋಗ್ಯ ಇಲಾಖೆಯು ಇಲ್ಲಿಯವರೆಗೂ ಕಾಯಿದೆಯ ಅನುಷ್ಠಾನದ ಜೊತೆಗೆ ವಿವಿಧ ಶಾಲಾ ಕಾರ್ಯಕ್ರಮಗಳು, ಹಳ್ಳಿಗಳಲ್ಲಿ ಇದರ ಕುರಿತು ಅರಿವು ಸಭೆಗಳು,

ವಿವಿಧ ಇಲಾಖೆಗಳಿಗೆ ತರಬೇತಿ ಕಾರ್ಯಕ್ರಮಗಳು ಸೇರಿದಂತೆ ಹಲವು ಅರಿವು ಮೂಡಿಸುವ ಕ್ರಮಗಳನ್ನು ಸಮರ್ಪಕವಾಗಿ ನಿರ್ವಹಿಸಿದೆ. ರಾಷ್ಟ್ರೀಯ ತಂಬಾಕು ನಿಯಂತ್ರಣ ಕಾರ್ಯಕ್ರಮವನ್ನು ಅನುಷ್ಠಾನ ಮಾಡುವಲ್ಲಿ ಹಾಗೂ ಅದರ ಪರಿಣಾಮವನ್ನು ಜನರಿಗೆ ತಲುಪಿಸುವಲ್ಲಿ ಜಿಲ್ಲಾ ತಂಬಾಕು ನಿಯಂತ್ರಣ ಕೋಶವು ದಾಪುಗಾಲು ಹಾಕಿದೆ ಎಂದು ತಿಳಿಸಿದರು. 

ಅಬಕಾರಿ ಇಲಾಖೆಯ ಉಪ ಅಧೀಕ್ಷಕ ತಮ್ಮಣ್ಣ, ನಿರೀಕ್ಷಕರಾದ ಪ್ರೇಮ, ಮಮತಾ, ಮಂಜುನಾಥ್‌, ಲತಾ, ಭಾಗ್ಯ, ಪದ್ಮಾವತಿ, ಆನಂದ್‌, ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಸಾಮಾಜಿಕ ಕಾರ್ಯಕರ್ತ ಶರೀಫ್, ಜಿತಿನ್‌ ಚಂದ್ರನ್‌, ತಂಬಾಕು ನಿಯಂತ್ರಣದ ಉನ್ನತ ಮಟ್ಟದ ಸಮಿತಿ ಸಂಯೋಜಕ ಅಚ್ಯುತ ಎನ್‌.ಜಿ. ಕಾರ್ಯಕ್ರಮದಲ್ಲಿ ಹಾಜರಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next