Advertisement
ಸಾರಿಗೆ, ಜಿಲ್ಲಾ ಉಸ್ತುವಾರಿ ಸಚಿವ ಬಿ. ಶ್ರೀರಾಮುಲು, ನಗರ ಶಾಸಕ ಜಿ.ಸೋಮಶೇಖರರೆಡ್ಡಿಯವರು ಈಗಾಗಲೇ ಘೋಷಿಸಿದಂತೆ ಗಡಗಿ ಚನ್ನಪ್ಪ ವೃತ್ತದಲ್ಲಿ 7ಕೋಟಿ ರೂ. ವೆಚ್ಚದಲ್ಲಿ 140 ಅಡಿ ಎತ್ತರದ ಅತ್ಯಾಧುನಿಕ ಗಡಿಯಾರ ಗೋಪುರ ನಿರ್ಮಾಣಕ್ಕೆ ಕಳೆದ ಆ.15ರಂದು ಭೂಮಿಪೂಜೆ ನೆರವೇರಿಸಿದ್ದು, ಮಂಗಳವಾರ ರಾತ್ರಿ ವೃತ್ತದಲ್ಲಿದ್ದ ಗಡಿಯಾರ ಗೋಪುರವನ್ನು ತೆರವುಗೊಳಿಸುವ ಮೂಲಕ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಆದರೆ, ಈ ಕುರಿತು ಪಾಲಿಕೆ ಅನುಮತಿ ಪಡೆದಿಲ್ಲ ಎಂದು ಆರೋಪಿಸಿರುವ ಪಾಲಿಕೆ ಸದಸ್ಯರು, ಮಂಗಳವಾರ ಮಧ್ಯರಾತ್ರಿಯಿಂದ ವೃತ್ತದಲ್ಲಿ ಬೆಳಗ್ಗೆವರೆಗೆ ಧರಣಿ ನಡೆಸಿದರು. ಗಡಗಿ ಚನ್ನಪ್ಪ
ವೃತ್ತದಲ್ಲಿ 1964ರಲ್ಲಿ ನಿರ್ಮಿಸಿದ್ದ ಹಿಂದಿನ ಹಳೆಯ ಗಡಿಯಾರ ಗೋಪುರ ತನ್ನದೇ ಆದ ಹಿನ್ನೆಲೆ ಹೊಂದಿತ್ತು.
Related Articles
Advertisement
ಹೊಸದಾಗಿ ಗಡಿಯಾರ ಗೋಪುರವನ್ನು ನಿರ್ಮಿಸುವುದಾದರೆ ಪಾಲಿಕೆಯ ಎಲ್ಲ ಸದಸ್ಯರಿಗೂ ಮಾಹಿತಿ ನೀಡಿ ಎಂದು ಅಸಮಧಾನ ವ್ಯಕ್ತಪಡಿಸಿದ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಜಿ.ಎಸ್.ಮಹ್ಮದ್ ರಫೀಕ್, ಚೆನ್ನಾಗಿ ಸುಸಜ್ಜಿತವಾಗಿರುವ ಗಡಿಯಾರ ಕಂಬವನ್ನು ಬೇರೆ ವೃತ್ತಕ್ಕಾದರೂ ಸ್ಥಳಾಂತರಿಸಬಹುದಿತ್ತು. ಅದನ್ನು ಮಾಡಿಲ್ಲ. ಗಡಿಯಾರದಲ್ಲಿ ಸುಮಾರು 3 ಲಕ್ಷ ರೂ. ಮೌಲ್ಯದ ನಾಲ್ಕು ಗಡಿಯಾರಗಳು ಇದ್ದವು. ಅವೆಲ್ಲವನ್ನೂ ಧ್ವಂಸಗೊಳಿಸಲಾಗಿದೆ ಎಂದು ಆರೋಪಿಸಿದರು.
ಬಳಿಕ 11.30ಗಂಟೆ ಸುಮಾರಿಗೆ ನಗರದ ಡಿಸಿ ಕಚೇರಿ ಆವರಣದಲ್ಲಿ ಜಮಾಯಿಸಿದ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು, ಜಿಲ್ಲಾಧಿಕಾರಿ ಪವನ್‌ಕುಮಾರ್ ಮಾಲಪಾಟಿ ಅವರಿಗೆ ಮನವಿ ಸಲ್ಲಿಸಿದ್ದಾರೆ. ಧರಣಿ ಯಲ್ಲಿ ಪಾಲಿಕೆ ಸದಸ್ಯರಾದ ಎಂ. ಪ್ರಭಂಜನ್ ಕುಮಾರ್, ಮುಲ್ಲಂಗಿ ನಂದೀಶ್, ಮಿಂಚು ಶ್ರೀನಿವಾಸ್, ರಾಜಶೇಖರ್, ಮುಖಂಡರಾದ ಜಗನ್ನಾಥ, ಡಿ. ಸೂರಿ, ಶಿವರಾಜ್, ಮಾಜಿ ಸದಸ್ಯೆ ಪರ್ವಿನ್ ಬಾನು, ಕುಮಾರಮ್ಮ ಇದ್ದರು. ಪಾಲಿಕೆ ಸದಸ್ಯ ಇಬ್ರಾಹಿಂ ಬಾಬು, ಮೋತ್ಕರ್ ಶ್ರೀನಿವಾಸ್, ವೀರಶೇಖರರೆಡ್ಡಿ ಇದ್ದರು.