Advertisement

ಬಜೆಟ್‌ ಬಳಿಕವೇ ಸಾಲಮನ್ನಾ ಸ್ಪಷ್ಟ  ಚಿತ್ರಣ

04:06 PM Jun 30, 2018 | Team Udayavani |

ಧಾರವಾಡ: ರಾಜ್ಯದ ರೈತರ 32 ಸಾವಿರ ಕೋಟಿ ರೂ. ಸಾಲವನ್ನು ವಿವಿಧ ಹಂತಗಳಲ್ಲಿ ಮನ್ನಾ ಮಾಡಲು ಸರಕಾರ ಚಿಂತನೆ ನಡೆಸಿದ್ದು, ಬಜೆಟ್‌ ಮಂಡನೆ ಬಳಿಕವೇ ಈ ಬಗ್ಗೆ ಸ್ಪಷ್ಟ ಚಿತ್ರಣ ದೊರೆಯಲಿದೆ ಎಂದು ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಸಚಿವ ಆರ್‌. ಶಂಕರ ಹೇಳಿದರು.

Advertisement

ಇಲ್ಲಿಯ ಕೃಷಿ ವಿಶ್ವವಿದ್ಯಾಲಯದ ಪ್ರೇಕ್ಷಾಗೃಹದಲ್ಲಿ ಕರ್ನಾಟಕ ಅರಣ್ಯ ಇಲಾಖೆಯು ಧಾರವಾಡ, ಬೆಳಗಾವಿ ಹಾಗೂ ಕೆನರಾ ವೃತ್ತಗಳ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ವಿಭಾಗೀಯ ಕೃಷಿ ಅರಣ್ಯ ಕಾರ್ಯಾಗಾರ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಪ್ರಸಕ್ತ ವರ್ಷ 5 ಕೋಟಿ ಸಸಿ ನೆಡುವ ಗುರಿ ಇದ್ದು, ಇದನ್ನು 10 ಕೋಟಿ ಸಸಿಗಳಿಗೆ ಹೆಚ್ಚಿಸಲು ಉದ್ದೇಶಿಸಲಾಗಿದೆ. ಇದಲ್ಲದೇ ಕೃಷಿ ಅರಣ್ಯ ಪದ್ಧತಿಯ ರೈತರಿಗೆ ತುಂತುರು ನೀರಾವರಿ ಸೌಲಭ್ಯ ಕಲ್ಪಿಸಲು ನಿಯಮಾವಳಿಗಳ ಅಗತ್ಯ ಮಾರ್ಪಾಡು ಮಾಡಲು ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಲಾಗುವುದು ಎಂದರು. 

ಅರಣ್ಯ ಪ್ರದೇಶವಷ್ಟೇ ಅಲ್ಲದೇ ಕೃಷಿ ಭೂಮಿಯಲ್ಲಿಯೂ ಅರಣ್ಯ ಬೆಳೆಸಿ ಆದಾಯ ಹೆಚ್ಚಿಸಿಕೊಳ್ಳುವ ಆಸಕ್ತಿ ಹೊಂದಿರುವ
ರೈತರಿಗೆ ಇಂದಿನ ಕಾರ್ಯಾಗಾರದಿಂದ ಪ್ರಯೋಜನವಾಗಿದೆ. ಕೃಷಿ ಅರಣ್ಯ ಪ್ರೋತ್ಸಾಹ ಯೋಜನೆಯಡಿಯಲ್ಲಿ ರಿಯಾಯಿತಿ ದರದಲ್ಲಿ ವಿತರಿಸಲಾಗುವ ಸಸಿಗಳನ್ನು ಪಡೆದು ರೈತರು ತಮ್ಮ ಹೊಲ, ಬದುಗಳಲ್ಲಿ ಬೆಳೆಯಬಹುದು ಎಂದು ಹೇಳಿದರು.

ಈ ಯೋಜನೆಯಡಿ ನೆಡಲಾದ ಪ್ರತಿ ಗಿಡಗಳಿಗೆ ಮೊದಲ ಹಾಗೂ ಎರಡನೇ ವರ್ಷ ತಲಾ 30 ರೂ., ಮೂರನೇ ವರ್ಷ 40 ರೂ.ಗಳಂತೆ ಒಂದು ಗಿಡ ಪೋಷಣೆ ಮಾಡಿದರೆ ಒಟ್ಟು 100 ರೂ. ನೀಡಲಾಗುತ್ತಿದೆ. ಇದನ್ನು ಗಿಡಗಳ ಸಂಖ್ಯೆಗೆ ಬದಲಾಗಿ ಎಕರೆವಾರು ಮಾಡಲು ಇಲಾಖೆಯ ಉನ್ನತ ಅಧಿಕಾರಿಗಳು ಯೋಜನೆ ರೂಪಿಸುತ್ತಿದ್ದಾರೆ ಎಂದರು.

Advertisement

4 ಎಕರೆ ಜಮೀನಿನಲ್ಲಿ 1 ಸಾವಿರ ತೇಗ, 1 ಸಾವಿರ ಹೆಬ್ಬೇವು, 1 ಸಾವಿರ ಮಾವು, ಪೇರಲ, ನಿಂಬೆ ಬೆಳೆದಿರುವ ಶಿರಹಟ್ಟಿ ತಾಲೂಕಿನ ಕಡಕೋಡ ಗ್ರಾಮದ ಲಕ್ಷ್ಮವ್ವ ತಳವಾರ ಬೂದಿಹಾಳ ಹಾಗೂ ಗದಗ, ಧಾರವಾಡ, ಹಾವೇರಿ, ವಿಜಯಪುರ ಸಾಮಾಜಿಕ ಅರಣ್ಯ ವಿಭಾಗಗಳ 15 ಜನ ಕೃಷಿ ಅರಣ್ಯ ರೈತರನ್ನು ಸಚಿವರು ಸನ್ಮಾನಿಸಿದರು. ಅರಣ್ಯ ಇಲಾಖೆ ಪ್ರಕಟಿಸಿರುವ ಯಶೋಗಾಥೆಗಳ ಕಿರುಪುಸ್ತಕ, ಮಡಿಕೆ ಪತ್ರಗಳ ಬಿಡುಗಡೆ ನೆರವೇರಿಸಲಾಯಿತು. ಅಪರ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಅಜಯ್‌ ಮಿಶ್ರಾ ಅವರು ಕಾರ್ಯಾಗಾರದಲ್ಲಿ ಮಂಡನೆಯಾದ ವಿವಿಧ ವಿಷಯಗಳ ಸಾರಾಂಶ ವಿವರಿಸಿದರು. 

ಗದಗ ಜಿಪಂ ಸದಸ್ಯ ವೀರನಗೌಡ ನಾಡಗೌಡರ್‌, ಅರಣ್ಯ ಪಡೆ ಮುಖ್ಯಸ್ಥ ಪುನಾತಿ ಶ್ರೀಧರ, ಕೃಷಿ ವಿವಿ ಕುಲಪತಿ ಡಾ| ವಿ.ಐ. ಬೆಣಗಿ, ಅಪರ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳಾದ ಪುನೀತ ಪಾಠಕ್‌, ಅನಿತಾ ಅರೇಕಲ್‌, ರಾಧಾದೇವಿ, ಮುಖ್ಯ ಅರಣ್ಯ ಸಂರಕ್ಷಣಾ ಧಿಕಾರಿಗಳಾದ ಶ್ರೀಕಾಂತ ಹೊಸೂರ, ಅಶೋಕ ಬಸರಕೋಡ, ಟಿ.ವಿ. ಮಂಜುನಾಥ, ಎ.ಎಂ. ಅಣ್ಣಯ್ಯ, ಡಾ| ಆಶಿತೋಷ, ಉಪ ಅರಣ್ಯ ಸಂರಕ್ಷಣಾಧಿಕಾರಿ ಮಹೇಶಕುಮಾರ ಮೊದಲಾದವರಿದ್ದರು. ಗೀತಾಂಜಲಿ ಗೌಡರ್‌ ನಿರೂಪಿಸಿದರು. ವಿವಿಧ ತಳಿಗಳ ಬೀಜಗಳು, ಸಸಿಗಳು ಹಾಗೂ ಅರಣ್ಯ ಉತ್ಪನ್ನಗಳ ವಸ್ತು ಪ್ರದರ್ಶನವನ್ನು ಸಚಿವರು ವೀಕ್ಷಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next