ಬೆಂಗಳೂರು: ರಾಜ್ಯದಲ್ಲಿ ಒತ್ತುವರಿಯಾಗಿರುವ ಶ್ಮಶಾನ ಜಾಗಗಳನ್ನು ತೆರವುಗೊಳಿಸಲು ಕ್ರಮ ಕೈಗೊಳ್ಳುವಂತೆ ಸರಕಾರಕ್ಕೆ ಹೈಕೋರ್ಟ್ ನಿರ್ದೇಶನ ನೀಡಿದೆ.
ರಾಜ್ಯದಲ್ಲಿ ಶ¾ಶಾನ ಜಾಗ ಇಲ್ಲದ ಗ್ರಾಮ ಮತ್ತು ಪಟ್ಟಣ ಪ್ರದೇಶಗಳಿಗೆ ಅಗತ್ಯ ಜಮೀನು ಒದಗಿಸುವ ವಿಚಾರದಲ್ಲಿ ನ್ಯಾಯಾಲಯದ ಆದೇಶ ಪಾಲನೆ ವಿಫಲವಾಗಿದೆ ಎಂದು ಆರೋಪಿಸಿ ಬೆಂಗಳೂರು ನಿವಾಸಿ ಮಹಮ್ಮದ್ ಇಕ್ಬಾಲ್ ಅವರು ಸರಕಾರದ ವಿರುದ್ಧ ಸಲ್ಲಿಸಿರುವ ಸಿವಿಲ್ ನ್ಯಾಯಾಂಗ ನಿಂದನೆ ಅರ್ಜಿ ವಿಚಾರಣೆ ನಡೆಸಿದ ನ್ಯಾ| ಬಿ. ವೀರಪ್ಪ ಅವರ ನೇತೃತ್ವದ ವಿಭಾಗೀಯ ನ್ಯಾಯಪೀಠ ಈ ನಿರ್ದೇಶನ ನೀಡಿದೆ.
ಶವ ಸಂಸ್ಕಾರಕ್ಕೆ ಶ್ಮಶಾನ ಜಾಗ ಮಂಜೂರು ಮಾಡಿರುವ ಬಗ್ಗೆ ಗ್ರಾಮವಾರು ವಿವರಗಳನ್ನು ಒದಗಿಸುವಂತೆ ಸರಕಾರಕ್ಕೆ ಹೈಕೋರ್ಟ್ ನಿರ್ದೇಶನ ನೀಡಿತ್ತು. ಅದರಂತೆ, ಕಂದಾಯ ಇಲಾಖೆ 2022ರ ಜು. 28ರಂದು ವರದಿ ಸಲ್ಲಿಸಿತ್ತು. ಅದರಲ್ಲಿ ರಾಜ್ಯದ ಒಟ್ಟು 29,616 ಗ್ರಾಮಗಳ ಪೈಕಿ ಈವರೆಗೆ 27,099 ಗ್ರಾಮಗಳಿಗೆ ಶ್ಮಶಾನ ಸೌಲಭ್ಯ ಒದಗಿಸಲಾಗಿದೆ.
ಇನ್ನೂ 1,454 ಗ್ರಾಮಗಳಿಗೆ ಶ್ಮಶಾನ ಸೌಲಭ್ಯ ಒದಗಿಸಬೇಕಾಗಿದೆ. 1,010 ಗ್ರಾಮಗಳು ಬೇಚರಾಕ್ ಗ್ರಾಮಗಳಿವೆ ಎಂದು ಆ ವರದಿಯಲ್ಲಿ ಮಾಹಿತಿ ನೀಡಲಾಗಿತ್ತು.
ವರದಿಯನ್ನು ದಾಖಲಿಸಿಕೊಂಡಿದ್ದ ಹೈಕೋರ್ಟ್, ಕಂದಾಯ ಇಲಾಖೆಯ ವರದಿಯನ್ನು ಪರಿಶೀಲಿಸಿ ವಾಸ್ತವ ಸಂಗತಿಗಳನ್ನು ಹೋಲಿಕೆ ಮಾಡಿ ವರದಿ ಸಲ್ಲಿಸುವಂತೆ ಅರ್ಜಿದಾರರಿಗೆ ಸೂಚಿಸಿತ್ತು. ಆ ಪ್ರಕಾರ ಆ. 11ರಂದು ವರದಿ ಸಲ್ಲಿಸಿದ್ದಾರೆ. ಈ ವರದಿ ಪರಿಗಣಿಸಿದ ನ್ಯಾಯಾಲಯ, ಯಾವೆಲ್ಲ ಗ್ರಾಮಗಳಲ್ಲಿ ಶ್ಮಶಾನ ಜಾಗ ಒತ್ತುವರಿಯಾಗಿದೆ ಮತ್ತು ಶ್ಮಶಾನಕ್ಕೆ ಜಾಗ ಮಂಜೂರು ಮಾಡಿದ್ದರೂ, ಅದರ ಮಾಹಿತಿಯನ್ನು ಕಂದಾಯ ದಾಖಲೆಗಳಲ್ಲಿ ನಮೂ ದಿಸಿಲ್ಲ ಎನ್ನುವ ವರದಿ ಸಲ್ಲಿಸಿದ್ದಾರೆ.
ಆ ವರದಿ ಶಿಫಾರಸಿನಂತೆ ಒತ್ತುವರಿ ಶ್ಮಶಾನ ಜಾಗವನ್ನು ತೆರವುಗೊಳಿಸಬೇಕು. ಜಾಗ ರಕ್ಷಣೆ ಮಾಡಲು ಮಂಜೂರಾತಿ ಆದೇಶ ಹಾಗೂ ಆರ್‌ಟಿಸಿ ದಾಖಲೆ ಇಲ್ಲದ ಶ್ಮಶಾನ ಜಾಗಕ್ಕೆ ಕೂಡಲೇ ಕಂದಾಯ ದಾಖಲೆ ಒದಗಿಸುವ ಕೆಲಸ ಮಾಡಬೆಕು ಎಂದು ಕಂದಾಯ ಇಲಾಖೆಗೆ ನಿರ್ದೇಶಿಸಿ ವಿಚಾರಣೆಯನ್ನು ಸೆ. 6ಕ್ಕೆ ಮುಂದೂಡಿತು.