ನವದೆಹಲಿ: ದೆಹಲಿಯ ರೈಲ್ವೆ ಹಳಿ ಹಾಗೂ ಸುರಕ್ಷತಾ ಪ್ರದೇಶವನ್ನು ಹೊಂದಿಕೊಂಡಂತೆ ಇರುವ ಸುಮಾರು 48,000 ಕೊಳಗೇರಿ ಪ್ರದೇಶವನ್ನು ತೆರವುಗೊಳಿಸುವಂತೆ ಸುಪ್ರೀಂಕೋರ್ಟ್ ಸೋಮವಾರ ಆದೇಶ ನೀಡಿದೆ. ಮೂರು ತಿಂಗಳೊಳಗೆ ಹಂತ, ಹಂತವಾಗಿ ಕೊಳಗೇರಿಯನ್ನು ತೆರವುಗೊಳಿಸಬೇಕು ಎಂದು ಕೋರ್ಟ್ ಸೂಚಿಸಿದೆ.
ಅಲ್ಲದೇ ಕೋರ್ಟ್ ಆದೇಶ ಹೊರತುಪಡಿಸಿ ಯಾವುದೇ ರಾಜಕೀಯ ಒತ್ತಡ, ಮಧ್ಯಪ್ರವೇಶಕ್ಕೆ ಅವಕಾಶ ಇಲ್ಲ ಎಂದು ಸ್ಪಷ್ಟಪಡಿಸಿದೆ. ಕೊಳಗೇರಿ ತೆರವುಗೊಳಿಸುವ ವಿಚಾರದಲ್ಲಿ ಕೆಳ ನ್ಯಾಯಾಲಯಗಳು ನೀಡುವ ತಡೆಯಾಜ್ಞೆ ಈ ಆದೇಶಕ್ಕೆ ಅನ್ವಯವಾಗುವುದಿಲ್ಲ ಎಂಬುದನ್ನು ಸುಪ್ರೀಂಕೋರ್ಟ್ ಸ್ಪಷ್ಟಪಡಿಸಿದೆ.
ಸುರಕ್ಷತಾ ವಲಯದೊಳಗೆ ಕಟ್ಟಿಕೊಂಡಿರುವ ಕೊಳಗೇರಿಯನ್ನು ಮೂರು ತಿಂಗಳೊಳಗೆ ತೆರವುಗೊಳಿಸಲೇಬೇಕು..ಈ ಬಗ್ಗೆ ಯಾವುದೇ ರಾಜಕೀಯ ಪ್ರವೇಶವಾಗಲಿ, ಯಾವುದೇ ಕೋರ್ಟ್ ತಡೆಯಾಜ್ಞೆಯಾಗಲಿ ನೀಡುವಂತಿಲ್ಲ ಎಂದು ಜಸ್ಟೀಸ್ ಅರುಣ್ ಮಿಶ್ರಾ ನೇತೃತ್ವದ ಪೀಠ ತಿಳಿಸಿದೆ.
70 ಕಿಲೋ ಮೀಟರ್ ರೈಲ್ವೆ ಹಳಿಯ ಉದ್ದಕ್ಕೂ ಹೊಂದಿಕೊಂಡಂತೆ ಇರುವ ಕೊಳಗೇರಿಯನ್ನು ತೆರವುಗೊಳಿಸಲು ಸ್ಪೆಷಲ್ ಟಾಸ್ಕ್ ಪೋರ್ಸ್ ಅನ್ನು ರಚಿಸುವಂತೆ ರೈಲ್ವೆ ಇಲಾಖೆ ಸಲ್ಲಿಸಿದ್ದ ಅಫಿಡವಿತ್ ಅನ್ನು ಸುಪ್ರೀಂಕೋರ್ಟ್ ನ ತ್ರಿಸದಸ್ಯ ಪೀಠ ವಿಚಾರಣೆ ನಡೆಸಿತ್ತು.
ಅತಿಕ್ರಮಣ ತೆರವುಗೊಳಿಸುವಂತೆ ರಾಷ್ಟ್ರೀಯ ಹಸಿರು ಪೀಠದ ಆದೇಶದಂತೆ 2018ರಲ್ಲಿ ಸ್ಪೆಷಲ್ ಟಾಸ್ಕ್ ಪೋರ್ಸ್ ಅನ್ನು ರಚಿಸಲಾಗಿತ್ತು. 140 ಕಿಲೋ ಮೀಟರ್ ಉದ್ದದ ರೈಲ್ವೆ ಹಳಿ ಉದ್ದಕ್ಕೂ ಕಸದ ರಾಶಿ ಮತ್ತು ಪ್ಲ್ಯಾಸ್ಟಿಕ್ ಚೀಲ ತುಂಬಿಕೊಂಡಿರುವುದಾಗಿ ವರದಿ ತಿಳಿಸಿದೆ.