ಸಾಂಬ್ರಾ: ದೇಶಾದ್ಯಂತ ಅಕ್ಟೋಬರ್ 2ರ ವರೆಗೆ ನಡೆಯಲಿರುವ ಸ್ವಚ್ಛ ಭಾರತ ಅಭಿಯಾನದಡಿ ಸ್ವಚ್ಛತೆಯೇ ಸೇವೆ ಕಾರ್ಯಕ್ರಮಕ್ಕೆ ತಾಲೂಕಿನ ಹೊನ್ನಿಹಾಳ ಗ್ರಾಮದಲ್ಲಿ ರವಿವಾರ ಸಂಸದ ಸುರೇಶ ಅಂಗಡಿ ಕಸ ಗೂಡಿಸುವ ಮೂಲಕ ಚಾಲನೆ ನೀಡಿದರು.
ಸಂಸದ ಸುರೇಶ ಅಂಗಡಿ ಹಾಗೂ ವಿಧಾನ ಪರಿಷತ್ ಸದಸ್ಯ ಮಹಾಂತೇಶ ಕವಟಗಿಮಠ ಅವರು ಗ್ರಾಮದಲ್ಲಿ ಯುವಕರೊಂದಿಗೆ ಸೇರಿ ಕಸ ಗೂಡಿಸುವುದ ಮೂಲಕ ಸ್ವಚ್ಛತೆಯೇ ಸೇವೆ ಕಾರ್ಯಕ್ರಮಕ್ಕೆ ಕೈ ಜೋಡಿಸಿದರು. ಬೆಳಗ್ಗೆಯಿಂದ ಗ್ರಾಮದಲ್ಲಿ ಸ್ವಚ್ಛತೆ ಕೈಗೊಂಡರು. ಯುವಕರು ಶ್ರಮದಾನ ಮಾಡುವ ಮೂಲಕ ಮತ್ತಷ್ಟು ಹುರುಪು ಕೊಟ್ಟರು.
ಸಂಸದ ಅಂಗಡಿ ಮಾತನಾಡಿ, ಮಹಾತ್ಮಾ ಗಾಂಧೀಜಿಯವರು ಸ್ವಚ್ಛತಾ ಹೀ ಈಶ್ವರ ಸೇವಾ ಎಂದು ಹೇಳಿದ್ದರು. ಆದರೆ ಕಾಂಗ್ರೆಸ್‌ನವರು 70 ವರ್ಷಗಳ ಕಾಲ ಅಧಿಕಾರ ನಡೆಸಿದರೂ ಅದನ್ನು ಜಾರಿಗೆ ತರಲಿಲ್ಲ. ಈಗ ಪ್ರಧಾನಿ ಮೋದಿಯವರು ಸೆ. 15ರಿಂದ ಅ. 2ರವರೆಗೆ 15 ದಿನಗಳ ಕಾಲ ಸ್ವಚ್ಛತೆಯೇ ಸೇವೆ ಎಂಬ ಅಭಿಯಾನ ಹಮ್ಮಿಕೊಂಡಿದ್ದಾರೆ. ಈ ಬಗ್ಗೆ ಈಗಾಗಲೇ ದೇಶದ 2 ಸಾವಿರ ಜನರಿಗೆ ಪತ್ರ ಬರೆದು ಈ ಕಾರ್ಯಕ್ರಮಕ್ಕೆ ಕೈ ಜೋಡಿಸುವಂತೆ ಮನವಿ ಮಾಡಿದ್ದಾರೆ. ಇದು ದೇಶದ ಸ್ವತ್ಛತೆಗೆ ಮಾದರಿಯಾಗಿದ್ದು, ಎಲ್ಲರೂ ತಮ್ಮ ಸುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟು ದೇಶದ ಪ್ರಗತಿಗೆ ಎಲ್ಲರೂ ಮುಂದಾಗಬೇಕು ಎಂದರು.
ವಿಧಾನ ಪರಿಷತ್ ಸದಸ್ಯ ಮಹಾಂತೇಶ ಕವಟಗಿಮಠ ಮಾತನಾಡಿ, ನಮ್ಮ ಮನೆ, ಊರು ಸ್ವತ್ಛವಾಗಿದ್ದರೆ ಆರೋಗ್ಯ ಸದೃಢವಾಗಿರುತ್ತದೆ. ರಾಜಕೀಯವೆಂದರೆ ಕೇವಲ ರಸ್ತೆ, ವಿದ್ಯುತ್, ನೀರು ಪೂರೈಸುವುದು ಅಷ್ಟೇ ಅಲ್ಲ. ಇಂಥ ಕಾರ್ಯಕ್ರಮಗಳಲ್ಲಿ ಜನರನ್ನೂ ಕೂಡಿಸಿಕೊಂಡು ಜನ ಸೇವೆ ಮಾಡುವುದು ರಾಜಕೀಯವಾಗಿದೆ. ಮೋದಿ ಹಾಕಿಕೊಟ್ಟ ಸ್ವತ್ಛತೆ ಅಭಿಯಾನ ಮುಂದುವರಿಸಬೇಕಾಗಿದೆ ಎಂದರು. ಬಿಜೆಪಿ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಧನಂಜಯ ಜಾಧವ ಮಾತನಾಡಿ, ನಾಲ್ಕು ವರ್ಷಗಳಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಸ್ವಚ್ಛತೆ ಬಗ್ಗೆ ವಿಶೇಷ ಗಮನ ಹರಿಸಿದ್ದಾರೆ ಎಂದರು. ಸಿದ್ದನಕೊಳ್ಳ ಮಠದ ಶ್ರೀ ಗಂಗಾಧರ ಸ್ವಾಮೀಜಿ ಮಾತನಾಡಿ, ಪೂರ್ವಜರ ಕಾಲದಿಂದಲೂ ಸ್ವಚ್ಛತೆಗೆ ವಿಶೇಷ ಸ್ಥಾನ ಇದೆ. ಅದನ್ನು ದೇಶದಲ್ಲಿ ಸರಿಯಾಗಿ ಅನುಷ್ಠಾನಕ್ಕೆ ತರುವ ಕೆಲಸ ಆಗಿರಲಿಲ್ಲ. ಈಗ ದೇಶಾದ್ಯಂತ ಸ್ವತ್ಛತೆ ಬಗ್ಗೆ ಅಭಿಯಾನ ನಡೆಯುತ್ತಿರುವುದು ಹೆಮ್ಮೆಯ ವಿಷಯವಾಗಿದೆ ಎಂದರು.
ರಾಜು ದೇಸಾಯಿ, ಗಣಪತಿ ಹೊಸಮನಿ, ಕಲ್ಲಪ್ಪ ರಾವಳ, ಶಹಾಜಿ ಜಾಧವ, ಚಂದ್ರಕಾಂತ ಕೆಂಗೇರಿ, ಗಜಾನನ ಜಾಧವ, ಕುಮಾರ ಮಠದ, ಡಾ| ಕೋತಿನ, ಅಭಯ ಅವಲಕ್ಕಿ, ಡಾ ಗುರು ಕೋಟಿನ್ ಸೇರಿದಂತೆ ಇತರರು ಇದ್ದರು.