ಪಡುಬಿದ್ರಿ: ಇತ್ತೀಚಿನ ದಿನಗಳಲ್ಲಿ ಸಾರ್ವಜನಿಕರು ರಸ್ತೆ ಬದಿ, ನದಿ, ಕಡಲ ತೀರಗಳಲ್ಲಿ ಮನೆ ತ್ಯಾಜ್ಯಗಳನ್ನು ತಂದು ಸುರಿಯುತ್ತಿರುವುದು ಹೆಚ್ಚು ಕಂಡು ಬಂದಿದೆ. ಇದರಿಂದ ಪಕ್ಷಿ, ಪ್ರಾಣಿ ಹಾಗೂ ಜಲಚರಗಳಿಗೆ ತೀವ್ರ ತೊಂದರೆ, ಹಾನಿಗಳಾಗುತ್ತಿವೆ. ಈ ಮೂಲಕ ಮಾನವರ ದೇಹದೊಳಕ್ಕೂ ತ್ಯಾಜ್ಯ ಸೇರಿ ಆರೋಗ್ಯ ಹದಗೆಡುತ್ತದೆ. ಈ ಬಗ್ಗೆ ಸ್ವಯಂ ಜಾಗೃತಿ ಅತ್ಯಗತ್ಯವಾಗಿದೆ ಎಂದು ಕಾಪು ಶಾಸಕ ಲಾಲಾಜಿ ಆರ್.ಮೆಂಡನ್ ಹೇಳಿದರು.
ನ. 14ರಂದು ಹೆಜಮಾಡಿಯ ಕಡಲ ತೀರದಲ್ಲಿ ಉಡುಪಿ ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆ, ಹೆಜಮಾಡಿ ಗ್ರಾ. ಪಂ. ಸಹಯೋಗದೊಂದಿಗೆ ಕೇಂದ್ರ ಸರಕಾರದ ಪರಿಸರ ನಿರ್ವಹಣೆ ಮತ್ತು ನೀತಿ ಸಂಶೋಧನಾ ಸಂಸ್ಥೆ, ಅರಣ್ಯ, ಪರಿಸರ ಮತ್ತು ಹವಾಮಾನ ಬದಲಾವಣೆ ಮಂತ್ರಾಲಯ, ಬ್ಲೂ ಫ್ಲ್ಯಾಗ್ ಬೀಚ್ ಅಭಿವೃದ್ಧಿ, ಉಡುಪಿ ಜಿಲ್ಲಾ ಕರಾವಳಿ ಬೀಚ್ ಅಭಿವೃದ್ಧಿ ಸಮಿತಿ ಹಾಗೂ ಪರಿಸರದ ಶಾಲೆಗಳ ಸಂಯುಕ್ತ ಆಶ್ರಯದಲ್ಲಿ ಸ್ವತ್ಛ ನಿರ್ಮಲ ಸಮುದ್ರ ತೀರ ಅಭಿಯಾನದಡಿ ಕಡಲ ತೀರದ ಸ್ವತ್ಛತಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ನೀತಿ ಸಂಶೋಧನಾ ಸಂಸ್ಥೆಯ ಸಂಪರ್ಕ ಅಧಿಕಾರಿ ನಾಗೇಂದ್ರ ಪ್ರಸಾದ್ ಮಾತನಾಡಿ, 2050ರ ಹೊತ್ತಿಗೆ ಸಮುದ್ರದಲ್ಲಿ ಮೀನುಗಳ ಸಂಖ್ಯೆಗಿಂತ ಪ್ಲಾಸ್ಟಿಕ್ ಕಂಡುಬರುವ ಅಪಾಯದ ಕುರಿತು ವಿಜ್ಞಾನಿಗಳು ಎಚ್ಚರಿಸಿದ್ದಾರೆ. ಇದು ನಮ್ಮ ಶರೀರಕ್ಕೂ ಸೇರುವ ಅಪಾಯವಿದೆ. ಹಾಗಾಗಿ ತ್ಯಾಜ್ಯ ವಿಲೇವಾರಿಗೆ ಕಟ್ಟುನಿಟ್ಟಿನ ಕಾರ್ಯಸೂಚಿ ಹಮ್ಮಿಕೊಳ್ಳಲೇಬೇಕಾಗಿದೆ ಎಂದರು.
ಹೆಜಮಾಡಿ ಗ್ರಾ. ಪಂ. ಅಧ್ಯಕ್ಷೆ ವಿಶಾಲಾಕ್ಷಿ ಯು. ಪುತ್ರನ್ ಅಧ್ಯಕ್ಷತೆ ವಹಿಸಿದ್ದರು. ಜಿ. ಪಂ ,ಸದಸ್ಯ ಶಶಿಕಾಂತ್ ಪಡುಬಿದ್ರಿ, ಉಡುಪಿ ತಾ. ಪಂ. ಅಧ್ಯಕ್ಷೆ ನೀತಾ ಗುರುರಾಜ್, ಸದಸ್ಯೆ ರೇಣುಕಾ ಪುತ್ರನ್, ಗ್ರಾ. ಪಂ. ಉಪಾಧ್ಯಕ್ಷ ಸುಧಾಕರ ಕರ್ಕೇರ, ಪ್ರವಾಸೋದ್ಯಮ ಇಲಾಖೆಯ ಪ್ರಭಾರ ಸಹಾಯಕ ನಿರ್ದೇಶಕ ಚಂದ್ರಶೇಖರ ನಾಯಕ್, ರಾಜ್ಯ ರೆಡ್‌ಕ್ರಾಸ್ ನಿರ್ದೇಶಕ ಯತೀಶ್ ಬೆ„ಕಂಪಾಡಿ, ಕಾಪು ಬಿಜೆಪಿ ಅಧ್ಯಕ್ಷ ಪ್ರಕಾಶ್ ಶೆಟ್ಟಿ ಪಾದೆಬೆಟ್ಟು, ಹಿರಿಯರಾದ ನಾರಾಯಣ ಕೆ. ಮೆಂಡನ್, ಕರಾವಳಿ ಯುವಕ ವೃಂದದ ಅಧ್ಯಕ್ಷ ಅಶೋಕ್ ವಿ. ಕೆ, ಕಾರ್ಯದರ್ಶಿ ಶರಣ್‌ಕುಮಾರ್ ಮಟ್ಟು, ಪಿಡಿಒ ಮಮತಾ ವೈ. ಶೆಟ್ಟಿ, ಕೋಸ್ಟಲ್ ಟೂರಿಸಮ್ ಸಮಿತಿಯ ಕಾರ್ಯದರ್ಶಿ ಗೌರವ್ ಶೇಣವ, ಉದ್ಯಮಿ ಗುಣಪಾಲ ಶೆಟ್ಟಿ ಮುಖ್ಯ ಅತಿಥಿಗಳಾಗಿದ್ದರು.ಬ್ಲೂ ಫ್ಲ್ಯಾಗ್ ಬೀಚ್‌ನ ಅಶೋಕ್ ಶೆಟ್ಟಿ ಸ್ವಾಗತಿಸಿದರು.
ವಿಜಯ ಶೆಟ್ಟಿ ವಂದಿಸಿದರು. ಪ್ರಿಯಾ ಕಾರ್ಯಕ್ರಮ ನಿರ್ವಹಿಸಿದರು.ಬಳಿಕ ಹೆಜಮಾಡಿ ಮತ್ತು ಪಡುಬಿದ್ರಿಯ ಎಲ್ಲಾ ಸರಕಾರಿ ಶಾಲಾ ವಿದ್ಯಾರ್ಥಿಗಳಿಂದ ಹೆಜಮಾಡಿ ಬೀಚ್ ಸ್ವಚ್ಛತಾ ಕಾರ್ಯಕ್ರಮ ನಡೆಯಿತು.
ಗಂಭೀರ ಸಮಸ್ಯೆ
ಉಡುಪಿ ಅಸೋಸಿಯೇಶನ್ ಆಫ್ ಕೋಸ್ಟಲ್ ಟೂರಿಸಂ ನ ಅಧ್ಯಕ್ಷ ಮನೋಹರ ಶೆಟ್ಟಿ ಮುಖ್ಯ ಅತಿಥಿಯಾಗಿ ಮಾತನಾಡಿ, ಸಮುದ್ರ ತೀರದಲ್ಲಿ ಇತ್ತೀಚಿನ ದಿನಗಳಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ಹೆಚ್ಚು ಕಂಡುಬರುತ್ತಿದೆ. ಸಂಶೋಧಕರ ಅಧ್ಯಯನ ಪ್ರಕಾರ ಕಡಲ ಮೀನುಗಳಲ್ಲಿ ಮೈಕ್ರೋ ಪ್ಲಾಸ್ಟಿಕ್ ಅಂಶ ಕಂಡುಬಂದಿರುವುದು ಗಂಭೀರ ವಿಚಾರ. ಈ ಬಗ್ಗೆ ಈಗಲೇ ಎಚ್ಚೆತ್ತುಕೊಳ್ಳದಿದ್ದಲ್ಲಿ ಮನುಷ್ಯರು ಗಂಭೀರ ಆರೋಗ್ಯ ಸಮಸ್ಯೆ ಎದುರಿಸಬೇಕಾದೀತು ಎಂದರು.