Advertisement

ಬಸ್‌ ನಿಲ್ದಾಣದಲ್ಲಿ ಸ್ವಚ್ಛತೆ ಮರೀಚಿಕೆ

04:27 PM Apr 30, 2019 | pallavi |

ಮುದ್ದೇಬಿಹಾಳ: ಈ ಬಸ್‌ನಿಲ್ದಾಣದಲ್ಲಿ ಯಾವುದೇ ಸೌಲಭ್ಯ ಸಿಗುವುದಿಲ್ಲ ಅಂತಾನೆ ನಾವು ಹಿಪ್ಪರಗಿ ಇಲ್ಲವೇ ನಡಗುಂದಿ ನಿಲ್ದಾಣದಲ್ಲಿ ಉಳಿದುಕೊಂಡು ಅಲ್ಲಿಂದಲೇ ನಮ್ಮ ಊರಿನ್‌ ಬಸ್‌ ಹಿಡಿದುಕೊಂಡು ಹೋಗ್ತಿವಿರಿ. ಮುದ್ದೇಬಿಹಾಳ ಬಸ್‌ ನಿಲ್ದಾಣ ನೋಡಿದ್ರ ವಾಂತಿ ಬರತೈತಿರಿ. ಇಲ್ಲಿ ಯಾರೂ ಹೇಳ್ಳೋರು ಕೇಳ್ಳೋರು ಇಲ್ಲದಂಗ ಆಗೈತ್ರಿ.

Advertisement

ಇದು ಮುದ್ದೇಬಿಹಾಳ ತಾಲೂಕಿನ ಬಸ್‌ ನಿಲ್ದಾಣಕ್ಕೆ ಬರುವ ಪ್ರತಿಯೊಬ್ಬ ಬಸ್‌ ಪ್ರಯಾಣಿಕರ ಗೋಳಾಗಿದೆ. ಒಂದೊಮ್ಮೆ ಬಸ್‌ ನಿಲ್ದಾಣದ ಒಳಗಡೆ ಬಂದರೆ ಪ್ರಯಾಣಿಕರ ಕೈ ಮತ್ತು ಮೂಗಿಗೆ ಯಾವುದೇ ಕೆಲಸವಿಲ್ಲದಂತಾಗುತ್ತದೆ. ಇಷ್ಟೆಲ್ಲಾ ಆದರೂ ಸ್ಥಳೀಯ ಜನಪ್ರತಿನಿಧಿಗಳಾಗಲಿ ಅಥವಾ ಸಾರಿಗೆ ಅಧಿಕಾರಿಗಳಾಗಿಲಿ ಪ್ರಯಾಣಿಕರ ಸಮಸ್ಯೆಯನ್ನು ಬಗೆಹರಿಸುವ ಪ್ರಯತ್ನ ಮಾಡುತ್ತಿಲ್ಲ.

ನೀರಿಲ್ಲದೇ ಪರದಾಟ: ಮುದ್ದೇಬಿಹಾಳ ಬಸ್‌ ನಿಲ್ದಾಣ ಕೇಂದ್ರ ನಿಲ್ದಾಣವಾಗಿದ್ದರೂ ನಿಲ್ದಾಣದಲ್ಲಿ ಸ್ವಚ್ಛ ಕುಡಿಯುವ ನೀರಿನ ವ್ಯವಸ್ಥೆಯನ್ನು ಘಟಕದ ಅಧಿಕಾರಿಗಳು ಮಾಡಿಲ್ಲ. ಇದರ ಬಗ್ಗೆ ಸ್ಥಳೀಯ ಅಧಿಕಾರಿಗಳಿಗೆ ಕೇಳಿದರೆ ನೀರಿನ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳುತ್ತಾರೆ. ಇದರ ಬಗ್ಗೆ ಸಾರ್ವಜನಿಕರಿಗೆ ಕೇಳಿದರೆ ಬಸ್‌ ನಿಲ್ದಾಣದಲ್ಲಿ ಮಾಡಿರುವ ನೀರಿನ ಪೈಪ್‌ಲೈನ್‌ ಮೂಲಕ ಬರುವ ನೀರನ್ನು ಘಟಕದ ವ್ಯವಸ್ಥಾಪಕರೇ ಬಂದು ಕುಡಿಯಲು ನೋಡೋಣ, ಇಂತಹ ಗಲೀಜು ನೀರನ್ನು ಯಾರೂ ಕುಡಿಯುವುದಿಲ್ಲ ಎಂದು ಹೇಳುತ್ತಾರೆ.

ಆಸನಗಳೇ ಇಲ್ಲ: ಬಸ್‌ ನಿಲ್ದಾಣದಲ್ಲಿ ಬರುವ ಪ್ರಯಾಣಿಕರಿಗೆ ಕುಳಿತುಕೊಳ್ಳಲು ಆಸನೆವೇ ಇಲ್ಲದಂತಾಗಿದೆ. ಇದರಿಂತ ದಿನನಿತ್ಯ ಬಸ್‌ಗಾಗಿ ಬರುವ ಗ್ರಾಮೀಣ ಜನರು ನೆಲದಲ್ಲಿಯೇ ಕುಳಿತುಕೊಂಡು ತಮ್ಮ ತಮ್ಮ ಬಸ್‌ಗಳನ್ನು ಹಿಡಿಯುವುದು ಸಾಮಾನ್ಯವಾಗಿದೆ.

ಶೌಚಾಲಯವೇ ಇಲ್ಲ: ಬಸ್‌ ನಿಲ್ದಾಣದಲ್ಲಿ ಬಹು ಮುಖ್ಯವಾಗಿ ಇರಬೇಕಾದ ಸುಸಜ್ಜಿತ ಶೌಚಾಲವೇ ಮುದ್ದೇಬಿಹಾಳ ಬಸ್‌ ನಿಲ್ದಾಣದಲ್ಲಿ ಇಲ್ಲದಂತಾಗಿದೆ. ಒಂದು ಕಡೆ ಪುರುಷರ ಶೌಚಾಲಯವಿದ್ದು ಅದರಿಂದ ಬರುವ ಗಲೀಜು ನೀರು ಬಸ್‌ ನಿಲ್ದಾಣದಿಂದ ಹೊರಗಡೆ ಕಳುಹಿಸುವುದು ಆಗದೇ ಗಬ್ಬು ವಾಸನೆಯಿಂದ ಕೂಡಿಕೊಂಡಿದೆ. ಇನ್ನೂ ಶೌಚಾಲಯದ ಇನ್ನೊಂದು ಕಡೆಗೆ ಮಹಿಳಾ ಶೌಚಾಲಯವಿದ್ದರೂ ಇಲ್ಲದಂತಾಗಿದೆ. ಇದರಿಂದ ನಿತ್ಯ ಪ್ರಯಾಣಿಸುವ ಜನರಿಗೆ ತುಂಬಾ ಕಷ್ಟಕರವಾಗಿದೆ.

Advertisement

ವಿಜಯಪುರ ಜಿಲ್ಲೆಯಲ್ಲಿಯೇ ಅತಿ ಅವ್ಯವಸ್ಥಿತ ಬಸ್‌ ನಿಲ್ದಾಣ ಎಂದರೆ ಮುದ್ದೇಬಿಹಾಳ ನಿಲ್ದಾಣ. ಇಲ್ಲಿ ಸಾರ್ವಜನಿಕರಿಗೆ ಯಾವುದೇ ಅಗತ್ಯ ಸೌಲಭ್ಯ ಸಿಗುವುದಿಲ್ಲ. ಇಲ್ಲಿಗೆ ಬರುವ ಪ್ರಯಾಣಿಕರಿಗೆ ಗಬ್ಬು ವಾಸನೆ ಬಿಟ್ಟರೆ ಕುಳಿತುಕೊಳ್ಳಲು ನೆಲ ಮಾತ್ರ ಸಿಗುತ್ತದೆ. ಇದರ ಬಗ್ಗೆ ಮೇಲಧಿಕಾರಿಗಳಿಗೆ ಹಾಗೂ ಸ್ಥಳೀಯ ಘಟಕದ ವ್ಯವಸ್ಥಾಪಕರಿಗೆ ಎಷ್ಟೇ ಹೇಳಿದರೂ ಪ್ರಯೋಜನವಾಗಿಲ್ಲ.

•ಬಸಯ್ಯ ನಂದಿಕೇಶ್ವರಮಠ, ನಗರಾಭಿವೃದ್ಧಿ ಹೋರಾಟಗಾರ

ಈಗಾಗಲೇ ಬಸ್‌ ನಿಲ್ದಾಣದ ಕಂಟ್ರೋಲ್ ರೂಂ ಹತ್ತಿರದ ನಲ್ಲಿಯಲ್ಲಿ ದಿನದ 24 ಗಂಟೆ ನೀರು ಬರುವಂತೆ ನೋಡಿಕೊಳ್ಳಲಾಗಿದೆ. ಸ್ವಚ್ಛತೆ ಬಗ್ಗೆ ಇನ್ನೂ ಹೆಚ್ಚಿನ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು.
•ರಾಹುಲ್ ಹೂನಸೂರೆ, ಘಟಕ ವ್ಯವಸ್ಥಾಪಕ , ಮುದ್ದೇಬಿಹಾಳ
Advertisement

Udayavani is now on Telegram. Click here to join our channel and stay updated with the latest news.

Next