ಶಿರಸಿ: ಜಾತ್ರೆ, ರಥೋತ್ಸವ ಮುಗಿದ ಬಳಿಕ ಕಸ, ತ್ಯಾಜ್ಯಗಳೇ ಹೆಚ್ಚು. ಆದರೆ, ತಾಲೂಕಿನ ಮಂಜುಗುಣಿಯಲ್ಲಿ ನಡೆದ ಶ್ರೀ ವೆಂಕಟರಮಣ ದೇವರ ರಥೋತ್ಸವದಲ್ಲಿ ಮಾತ್ರ ಭಕ್ತರು ಸ್ವಚ್ಛತಾ ಸೇವೆ ಸಲ್ಲಿಸಿ ಗಮನ ಸೆಳೆದು ನಾಡಿಗೇ ಮಾದರಿಯಾದರು.
ಸುಮಾರು ಎಂಟು ನೂರು ಅಡಿ ಉದ್ದದ, ನೂರು ಅಡಿ ಅಗಲದ, ಏಳು ಎಕರೆ ವಿಶಾಲ ವ್ಯಾಪ್ತಿಯ ಬೃಹತ್ ರಥ ಬೀದಿ ಕೇವಲ ಗಂಟೆಯ ಅವಧಿಯಲ್ಲಿ ಸ್ವಚ್ಛಗೊಂಡಿದ್ದು, ಜನ ಮೆಚ್ಚುಗೆಗೆ ಪಾತ್ರವಾಯಿತು.
ಜನರಲ್ಲಿ ಸ್ವಚ್ಛತೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಹಾಗೂ ಧಾರ್ಮಿಕ ಕೇಂದ್ರದ ಶುಚಿತ್ವದ ಕಳಕಳಿಯೊಂದಿಗೆ ಮಂಜುಗುಣಿ ದೇವಸ್ಥಾನ ಈ ಬಾರಿಯ ರಥೋತ್ಸವದಲ್ಲಿ ಸ್ವಚ್ಛತೆಯ ಸೇವೆಗೆ ಭಕ್ತಗಳಿಗೆ ಅವಕಾಶ ಮಾಡಿಕೊಟ್ಟಿತ್ತು. ಪ್ರಧಾನ ಅರ್ಚಕ ಶ್ರೀನಿವಾಸ ಭಟ್ಟ ರಥನಯನದ ನಂತರದಲ್ಲಿ ದೇವರೆದುರು ತಲೆಬಾಗಿ ರಥಬೀದಿಯ ಸ್ವಚ್ಛತೆಯ ಜೊತೆಗೆ ಮನಸ್ಸಿನ ಸ್ವಚ್ಛತೆಯ ಕಾರ್ಯವೂ ನಡೆಯುವಂತಾಗಲಿ ಎಂದು ಆಶಿಸಿ ಸ್ವಚ್ಛತಾ ಸೇವಾ ಕಾರ್ಯಕ್ಕೆ ಚಾಲನೆ ನೀಡಲಾಗಿತ್ತು.
Advertisement
ರಥೋತ್ಸವದ ಸಂದರ್ಭದಲ್ಲಿ ದೇವರಿಗೆ ಹರಕೆಯಾಗಿ ಭಕ್ತರು ಫಲ ಸಮರ್ಪಣೆ, ಉರುಳು ಸೇವೆ ಸೇರಿದಂತೆ ನಾನಾ ಸೇವೆ ನೀಡುವುದು ಸಾಮಾನ್ಯ ಸಂಗತಿ. ಆದರೆ, ಕರ್ನಾಟಕದ ತಿರುಪತಿ ಎಂದೇ ನಂಬಲಾದ ಮಂಜುಗುಣಿಯ ಶ್ರೀ ವೆಂಕಟರಮಣ ದೇವರ ಮಹಾರಥೊತ್ಸವದಲ್ಲಿ ಪಾಲ್ಗೊಂಡಿದ್ದ ಸಹಸ್ರಾರು ಭಕ್ತಾದಿಗಳು ದೇವರ ದರ್ಶನ ಪಡೆದು ಪುನೀತರಾಗುವ ಜೊತೆಗೆ ಕರ ಸೇವೆ ಕೂಡ ಸಲ್ಲಿಸಿದರು. ಮಧ್ಯರಾತ್ರಿ ನಡೆದ ರಥೋತ್ಸವದ ರಥನಯನದ ನಂತರದಲ್ಲಿ ಸ್ವಚ್ಛತಾ ಸೇವೆ ನಡೆಸಿ ಪುನೀತ ಭಾವಕ್ಕೆ ಬಂದರು. ಮಹಿಳೆಯರು, ಮಕ್ಕಳು, ವೃದ್ಧರೂ ಕೂಡ ನಡು ರಾತ್ರಿ ಈ ಕೈಂಕರ್ಯ ನಡೆಸಿದರು.