Advertisement

ಶುಚಿಯಾಯ್ತು ಸುಡುಗಾಡು ತೋಡು

11:39 AM May 16, 2022 | Team Udayavani |

ಕುಂದಾಪುರ: ಇಲ್ಲಿನ ಪುರಸಭೆ ವ್ಯಾಪ್ತಿಯ ಖಾರ್ವಿಕೇರಿಯ ಸಮೀಪದ ಸುಡುಗಾಡು ತೋಡು ಪೌರ ಕಾರ್ಮಿಕರ ಶ್ರಮದಿಂದ ಶುಚಿಯಾಗಿದೆ.

Advertisement

ದುರ್ನಾತ

ತೋಡು ಕೊಳಚೆ, ತ್ಯಾಜ್ಯಗಳಿಂದ ತುಂಬಿದ್ದು ಯಾವುದೇ ಮನವಿ ಬೇಡಿಕೆಗೂ ಸ್ಪಂದನ ದೊರೆತಿರಲಿಲ್ಲ. ಇಲ್ಲಿನ ನಿವಾಸಿಗಳಿಗೆ ಇದರ ಬದಿ ವಾಸಿಸುವುದೇ ಒಂದು ಶಿಕ್ಷೆಯಂತಾಗಿತ್ತು. ಸತ್ತ ಪ್ರಾಣಿಗಳ ಕಳೇಬರ, ಕೊಳೆತು ನಾರುತ್ತಿರುವ ಮಾಂಸದ ತ್ಯಾಜ್ಯ, ಪ್ಲಾಸ್ಟಿಕ್‌ ಇನ್ನಿತರ ವಸ್ತುಗಳು ಕೊಳಕು ತೋಡಿನಲ್ಲಿ ಹರಿದುಬರುತ್ತಿರುವುದರಿಂದ ಸಹಿಸಲು ಕಷ್ಟವಾಗಿತ್ತು. ತೋಡಿನ ಇಕ್ಕೆಲಗಳಲ್ಲಿ 500ಕ್ಕೂ ಮಿಕ್ಕಿ ಮನೆಗಳಿವೆ. ಹಗಲು ರಾತ್ರಿಯೆನ್ನದೆ ತೆರೆದ ತೋಡಿನಲ್ಲಿ ಹರಿಯುವ ಕೊಳಚೆ ನೀರು, ತ್ಯಾಜ್ಯಗಳು ಇಲ್ಲಿನ ಜನರಿಗೆ ಸಾಂಕ್ರಾಮಿಕ ರೋಗ ಭೀತಿ ಕಾಡುತ್ತಿತ್ತು. ಕಸಕಡ್ಡಿಗಳಿಗೆ ಸಿಲುಕಿ ನಿಂತ ಕೊಳಚೆ ನೀರು ಕಪ್ಪಾಗಿದೆ. ಇತ್ತೀಚಿನ ಕೆಲವು ವರ್ಷಗಳಿಂದ ಇದು ನರಕಸದೃಶ ಎನಿಸಿತ್ತು. ಕುಂದಾಪುರ ಪೇಟೆಯ ಎಲ್ಲ ತ್ಯಾಜ್ಯಗಳು ತೆರೆದ ತೋಡಿನ ಮೂಲಕ ಸಾಗುತ್ತಿತ್ತು. ಕೊಳಚೆ ನೀರು, ತ್ಯಾಜ್ಯದಿಂದ ದುರ್ನಾತ ಹಬ್ಬಿತ್ತು.

ಪ್ರಯತ್ನ

ತೋಡಿನಲ್ಲಿ ಕೊಳಚೆ, ಹೂಳು ಆವರಿಸಿತ್ತು. ದಶಕಗಳಿಂದ ಈ ಸಮಸ್ಯೆ ಬಗೆಹರಿಸುವಂತೆ ಮಾಡಿಕೊಂಡ ಮನವಿಗೆ ಸ್ಥಳೀಯಾಡಳಿತ ಸ್ಪಂದಿಸಲೇ ಇಲ್ಲ ಎಂದು ಜನರು ಆಕ್ರೋಶ ತೋಡಿ ಕೊಳ್ಳುತ್ತಿದ್ದರು. ಈ ಬಗ್ಗೆ ಮಾಧ್ಯಮಗಳಲ್ಲೂ ವರದಿಗಳು ಪ್ರಕಟವಾಗಿದ್ದವು. ಇದಕ್ಕೆ ಸ್ಪಂದಿಸಿದ ಪುರಸಭೆ ಆಡಳಿತ ಸುಡುಗಾಡು ತೋಡು ಪ್ರದೇಶಕ್ಕೆ ನಿಯೋಗದೊಂದಿಗೆ ಭೇಟಿ ನೀಡಿತ್ತು. ಉಪಾಧ್ಯಕ್ಷ ಸಂದೀಪ್‌ ಖಾರ್ವಿ, ಸದಸ್ಯ ಚಂದ್ರಶೇಖರ ಖಾರ್ವಿ ಅವರು ಕೂಡ ಈ ಕುರಿತು ಆಡಳಿತದ ಗಮನ ಸೆಳೆಯಲು ಪ್ರಯತ್ನಪಟ್ಟಿದ್ದರು. ಶಾಸಕರ ಬಳಿಯೂ ಮನವಿ ನೀಡಲಾಗಿತ್ತು. ಅಲ್ಲಿಂದಲೂ ಆಶ್ವಾಸನೆ ದೊರೆತಿದೆ.

Advertisement

ಹೂಳೆತ್ತುವಿಕೆ

ಈಗ ಸುಡುಗಾಡು ತೋಡು ಹೂಳೆತ್ತಿ ಸ್ವಚ್ಛ ಮಾಡಲಾಗಿದೆ. ಪ್ರತಿಯೊಂದು ಸಾಮಾನ್ಯ ಸಭೆಯಲ್ಲೂ ಎಂಬಂತೆ ಸುಡುಗಾಡು ತೋಡು ಸ್ವಚ್ಛತೆ ಹಾಗೂ ಸುಡಗಾಡು ತೋಡಿನ ಪರಿಸರದ ಜನತೆ ಬಗ್ಗೆ ಧ್ವನಿ ಎತ್ತಲಾಗುತ್ತಿತ್ತು. ಕಳೆದ 4 ವರ್ಷದ ಹಿಂದೆ ಹಿಟಾಚಿ ಮತ್ತು ಜೆಸಿಬಿಯಿಂದ ಸ್ವಚ್ಛ ಮಾಡಲಾಗಿತ್ತು. ಪುನಃ ಪುರಸಭೆ ಪೌರ ಕಾರ್ಮಿಕರೇ ತೋಡಿನಲ್ಲಿಳಿದು ಸ್ವಚ್ಛ ಮಾಡಿದ್ದಾರೆ.

ಇನ್ನೂ ಬಾಕಿ ಇದೆ

ಸುಡುಗಾಡು ತೋಡು ಒಂದು ಕಡೆ ಸ್ವಚ್ಛವಾಗಿದ್ದರೂ ಇನ್ನೂ ಒಂದಷ್ಟು ಕಡೆ ಸ್ವಚ್ಛತೆಗೆ ಬಾಕಿ ಇದೆ. ಇಡೀ ನಗರದ ಕೊಳಚೆ ಈ ತೋಡಿನಲ್ಲಿ ವಾಸ್ತವ್ಯದ ಪ್ರದೇಶ ಮೂಲಕ ಸಾಗಿ ಬರುತ್ತಿದೆ. ಇಲ್ಲೂ ಶುಚಿತ್ವದ ಕೆಲಸ ನಡೆಯಬೇಕು. ಕೇವಲ ಮಡಿವಾಳಬನದ ಸಮೀಪಕ್ಕೆ ಮಾತ್ರ ಆದ್ಯತೆ ನೀಡಲಾಗುತ್ತಿದೆ. ಸೊಳ್ಳೆ ಕಾಟ ವಿಪರೀತ ಆಗುತ್ತಿದೆ. ಕುಂದಾಪುರ ನಗರದ ಎಲ್ಲ ಕಸವೂ ಇಲ್ಲೇ ರಾಶಿ ಬೀಳುತ್ತದೆ ಎನ್ನುತ್ತಾರೆ ದಿನೇಶ್‌ ಸಾರಂಗ. ರಿಂಗ್‌ ರೋಡ್‌ ಪ್ರಾಜೆಕ್ಟ್ 20 ಕೋ.ರೂ. ಮಂಜೂರಾದಂತೆ ಅದರ ಸಮೀಪವೇ ಇರುವ ಸುಡುಗಾಡು ಸ್ವಚ್ಛತೆಗೆ ಸ್ವಲ್ಪ ಆದರೂ ಅನುದಾನ ನೀಡಬೇಕು ಎನ್ನುತ್ತಾರೆ ಚೇತನ್‌ ಖಾರ್ವಿ.

ಸುದಿನ ವರದಿ

ಸುಡುಗಾಡು ತೋಡಿನಿಂದ ಸಮಸ್ಯೆಯಾಗುತ್ತಿದೆ, ಸಾರ್ವಜನಿಕರಿಗೆ ವಾಸಯೋಗ್ಯ ವಾತಾವರಣ ಇಲ್ಲ ಎಂದು ‘ಉದಯವಾಣಿ’ ‘ಸುದಿನ’ ಅನೇಕ ಬಾರಿ ವರದಿ ಮಾಡಿತ್ತು.

ಪೌರಕಾರ್ಮಿಕರೇ ಹೀರೋಗಳು

ಯಾರೂ ಮಾಡಲಾಗದ ಕೆಲಸವನ್ನು ನಮ್ಮ ಪೌರಕಾರ್ಮಿಕರು ನಿರ್ವಹಿಸಿದ್ದಾರೆ. ನಿಜವಾಗಲೂ ನಮ್ಮ ಸುಂದರ ಕುಂದಾಪುರದ ಹೀರೋಗಳು ಪೌರ ಕಾರ್ಮಿಕರು. ವಿಶೇಷ ಮುತುವರ್ಜಿ ವಹಿಸಿ ಸ್ವತ್ಛತಾ ಕಾರ್ಯ ನಡೆಸಿದ ಕುಂದಾಪುರ ಪುರಸಭೆಯ ಅಧ್ಯಕ್ಷರು ಹಾಗೂ ಮುಖ್ಯಾಧಿಕಾರಿಗಳಿಗೆ ಕೃತಜ್ಞತೆಗಳು. -ಚಂದ್ರಶೇಖರ ಖಾರ್ವಿ, ಸದಸ್ಯರು, ಪುರಸಭೆ

Advertisement

Udayavani is now on Telegram. Click here to join our channel and stay updated with the latest news.

Next