Advertisement

ಅರಮನೆ ಅಂಗಳದಲ್ಲಿ ಸ್ವಚ್ಛತಾ ಕಾರ್ಯ

11:34 AM Oct 21, 2018 | Team Udayavani |

ಮೈಸೂರು: ವಿಶ್ವವಿಖ್ಯಾತ ದಸರಾ ಮಹೋತ್ಸವದ ಸಂಭ್ರಮ, ಸಡಗರದ ನಡುವೆ ಕಸದ ಊರಾಗಿ ಬದಲಾಗಿದ್ದ ನಗರದ ಸ್ವಚ್ಛತೆ ಕಾಪಾಡುವ ನಿಟ್ಟಿನಲ್ಲಿ ಪೌರಕಾರ್ಮಿಕರು ಅವಿರತ ಶ್ರಮಿಸಿದರು. ಬೆಳ್ಳಂಬೆಳಗ್ಗೆಯೇ ಪೊರಕೆ ಹಿಡಿದು ಬೀದಿಗಿಳಿದ ಪೌರಕಾರ್ಮಿಕರು ಅರಮನೆ ಸೇರಿದಂತೆ ನಗರದ ಪ್ರಮುಖ ರಸ್ತೆಗಳಲ್ಲಿ ಸ್ವಚ್ಛತಾ ಕಾರ್ಯ ನಡೆಸಿದರು. 

Advertisement

ದಸರಾ ಮಹೋತ್ಸವದ ಹಿನ್ನೆಲೆಯಲ್ಲಿ ಅರಮನೆ ಆವರಣ ಸೇರಿದಂತೆ ನಗರದ ಪ್ರಮುಖ ಕಡೆಗಳಲ್ಲಿ ಲಕ್ಷಾಂತರ ಮಂದಿ ಜಂಬೂಸವಾರಿ ಮೆರವಣಿಗೆ ವೀಕ್ಷಿಸಿದರು. ಇದರಿಂದಾಗಿ ಅಂಬಾವಿಲಾಸ ಅರಮನೆ ಆವರಣದಿಂದ ಹಿಡಿದು ಜಂಬೂಸವಾರಿ ಮೆರವಣಿಗೆ ಸಾಗಿದ ಎಲ್ಲೆಡೆ ರಾಶಿರಾಶಿ ಕಸ ಸಂಗ್ರಹವಾಗಿತ್ತು. 

ಅರಮನೆಗೆ ಪ್ರವಾಸಿಗರು: ಶನಿವಾರ ಮುಂಜಾನೆಯೇ ರಸ್ತೆಗಿಳಿದ ನೂರಾರು ಪೌರಕಾರ್ಮಿಕರು ನಗರದಲ್ಲಿ ಸಂಗ್ರಹವಾಗಿದ್ದ ಕಸದ ರಾಶಿ ತೆರವುಗೊಳಿಸಿದರು. ಈ ನಡುಗೆ ಅರಮನೆಯಲ್ಲಿ ಸಂಗ್ರಹವಾಗಿದ್ದ ಕಸದ ರಾಶಿಯ ನಡುವೆಯೇ ಅರಮನೆಯತ್ತ ಆಗಮಿಸಿದ ಪ್ರವಾಸಿಗರು ಅರಮನೆ ವೀಕ್ಷಣೆ ಮಾಡಿದರು. 

ನಗರದ ದೇವರಾಜ ಮಾರುಕಟ್ಟೆ, ಚಿಕ್ಕಗಡಿಯಾರ ವೃತ್ತ, ಸಯ್ನಾಜಿರಾವ್‌ ರಸ್ತೆ, ನಗರ ಬಸ್‌ ನಿಲ್ದಾಣ ಮಾರ್ಗ, ಪುರಭವನ ಪಾರ್ಕಿಂಗ್‌ ಸೇರಿದಂತೆ ಮೆರವಣಿಗೆ ಸಾಗಿದ ಮಾರ್ಗದುದ್ದಕ್ಕೂ ಸಂಗ್ರಹವಾಗಿದ್ದ ಕಸ ಸ್ವಚ್ಛ ಮಾಡಿದರು. ಸ್ವಚ್ಛತಾ ಕಾರ್ಯಕ್ಕಾಗಿ 320 ಮಂದಿ ಪೌರ ಕಾರ್ಮಿಕರನ್ನು ಗುತ್ತಿಗೆ ಆಧಾರದ ಮೇಲೆ ನಿಯೋಜನೆ ಮಾಡಿಕೊಳ್ಳಲಾಗಿತ್ತು. ಶುಕ್ರವಾರ ರಾತ್ರಿಯಿಂದಲೇ ಮೂರು ಪಾಳಯದಲ್ಲಿ ಸ್ವಚ್ಛತಾ ಕೆಲಸದಲ್ಲಿ ಪಾಲ್ಗೊಂಡ 320 ಮಂದಿ ಪೌರ ಕಾರ್ಮಿಕರು, ಶನಿವಾರ ಸಂಜೆವರೆಗೂ ಸ್ವಚ್ಛತಾ ಕಾರ್ಯ ನಡೆಸಿದರು. 

ವೇದಿಕೆಗಳ ತೆರವು: ಒಂದೆಡೆ ಪೌರಕಾರ್ಮಿಕರು ಅರಮನೆಯಲ್ಲಿ ಸಂಗ್ರಹವಾಗಿದ್ದ ಕಸದ ರಾಶಿಯನ್ನು ತೆರವುಗೊಳಿಸಿದರೆ ಮತ್ತೂಂದೆಡೆ ಜಂಬೂಸವಾರಿ ವೀಕ್ಷಣೆಗಾಗಿ ಹಾಕಿದ್ದ ವೇದಿಕೆಗಳನ್ನು ತೆರವುಗೊಳಿಸಲಾಯಿತು. ದಸರಾ ಅಂಗವಾಗಿ ಅಂಬಾವಿಲಾಸ ಅರಮನೆ ಆವರಣದಲ್ಲಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮಕ್ಕಾಗಿ ಹಾಕಿದ್ದ ವೇದಿಕೆ, ಮೆರವಣಿಗೆ ವೀಕ್ಷಿಸಲು ಸಾರ್ವಜನಿಕರಿಗೆ ಹಾಕಿದ್ದ ವೇದಿಕೆಯನ್ನು ತೆರವು ಮಾಡಲು ಹಲವು ಮಂದಿ ಬೆಳಗಿನಿಂದ ಸಂಜೆವರೆಗೂ ಶ್ರಮಿಸಿದರು. 

Advertisement

ಸಹಜ ಸ್ಥಿತಿಗೆ ಮೈಸೂರು: ನಾಡಹಬ್ಬದ ಹಿನ್ನೆಲೆಯಲ್ಲಿ ಕಳೆದ ಹತ್ತು ದಿನಗಳವರೆಗೂ ನಗರದಲ್ಲಿ ಮನೆ ಮಾಡಿದ್ದ ದಸರೆಯ ಸಂಭ್ರಮಕ್ಕೂ ತೆರೆಬಿದ್ದಿತು. ನವರಾತ್ರಿ ವೇಳೆ ನಗರದ ವಿವಿಧೆಡೆಗಳಲ್ಲಿ ನಡೆಯುತ್ತಿದ್ದ ಕಾರ್ಯಕ್ರಮಗಳೆಲ್ಲಾ ಮುಕ್ತಾಯಗೊಂಡ ಪರಿಣಾಮ ನಗರದ ಜನತೆ ದಸರಾ ಮೂಡ್‌ನಿಂದ ಹೊರಬಂದರು.

ಆದರೆ ಜಂಬೂಸವಾರಿ ಮೆರವಣಿಗೆ ವೀಕ್ಷಿಸಲು ಬೇರೆಬೇರೆ ಕಡೆಗಳಿಂದ ಆಗಮಿಸಿದ್ದ ಪ್ರವಾಸಿಗರು ಶನಿವಾರ ನಗರದ ಪ್ರಮುಖ ಪ್ರವಾಸಿತಾಣಗಳಿಗೆ ಭೇಟಿ ನೀಡಿದ್ದರು. ನಗರಕ್ಕೆ ಪ್ರವಾಸಿಗರ ದಂಡೇ ಹರಿದುಬಂದ ಹಿನ್ನೆಲೆಯಲ್ಲಿ ಪ್ರಮುಖ ರಸ್ತೆಗಳಲ್ಲಿ ವಾಹನ ದಟ್ಟಣೆ ಎಂದಿಗಿಂತ ಹೆಚ್ಚಾಗಿತ್ತು. 

Advertisement

Udayavani is now on Telegram. Click here to join our channel and stay updated with the latest news.

Next