ಕೊಪ್ಪಳ: ಸಾರ್ವಜನಿಕರ ಸಹಭಾಗಿತ್ವದಲ್ಲಿ ಮಾ. 1ರಿಂದ ಹಿರೇಹಳ್ಳದ ಸ್ವಚ್ಛತಾ ಕಾರ್ಯ ಆರಂಭಿಸಿರುವ ಗವಿಮಠದ ಗವಿಸಿದ್ದೇಶ್ವರ ಸ್ವಾಮೀಜಿಗಳು ನಿತ್ಯ ನಾಲ್ಕಾರು ಬಾರಿ ಹಳ್ಳದ ಸ್ಥಳಕ್ಕೆ ಭೇಟಿ ನೀಡಿ ಸ್ವಚ್ಛತಾ ಕಾರ್ಯದ ಮುತುವರ್ಜಿ ವಹಿಸಿದ್ದು, ರವಿವಾರ ಕೋಳೂರು ಬಳಿ ಐದು ಬುಲ್ಡೋಜರ್ ಮೂಲಕ ಜಾಲಿಗಿಡ ತೆರವಿಗೆ ಮುಂದಾಗಿದ್ದಾರೆ.
ಬಿರು ಬಿಸುಲಿನ ಮಧ್ಯೆಯೂ ಹಿರೇಹಳ್ಳದ ಸ್ವಚ್ಛತಾ ಕಾರ್ಯ ಭರದಿಂದ ಸಾಗಿದೆ. ಹಿರೇಹಳ್ಳದ ಸೇತುವೆಯ ಎಡ ಹಾಗೂ ಬಲ ಭಾಗದಲ್ಲಿ ಒಂದು ಹಂತಕ್ಕೆ ಜಾಲಿ ಗಿಡ, ಮುಳ್ಳಿನ ಬೇಲಿ, ಹೂಳು ತೆಗೆದು ಹಾಕುತ್ತಿದ್ದಾರೆ.
ಹಿರೇಹಳ್ಳದಿಂದ ಹಿಂಭಾಗದ ರೈಲ್ವೆ ಸೇತುವೆವರೆಗೂ ಸ್ವಚ್ಛತಾ ಕಾರ್ಯ ನಡೆಸಲಾಗುತ್ತಿದ್ದು, ಇದರ ಜೊತೆಗೆ ಐದು ಬುಲ್ಡೋಜರ್ ಮೂಲಕ ಕೋಳೂರು ಸಮೀಪದಲ್ಲಿ ಸ್ವಚ್ಛತಾ ಕಾರ್ಯ ಆರಂಭಿಸಲಾಗಿದೆ. ಅಲ್ಲಿನ ಜನರ ಜೊತೆಯೂ ಶ್ರೀಗಳು ಮಾತನಾಡಿದ್ದು, ಬೆಳಂ ಬೆಳಗ್ಗೆಯೇ ಕಾರ್ಯ ಆರಂಭ ಮಾಡಲಾಗಿದೆ. ಹಂತ ಹಂತವಾಗಿಯೇ ಕೆಲಸ ಕೈಗೊಳ್ಳಲಾಗುತ್ತಿದೆ. ಕೆಲವು ಗುತ್ತಿಗೆದಾರರು, ಗಣ್ಯರು ಸ್ಥಳದಲ್ಲಿಯೇ ಠಿಕಾಣಿ ಹೂಡಿ ತೆರವು ಕಾರ್ಯದ ಮೇಲೆ ನಿಗಾ ವಹಿಸಿದ್ದಾರೆ.
ತ್ಯಾಜ್ಯ ಒಂದೆಡೆ ಸಂಗ್ರಹ: ಇನ್ನೂ ಹಿರೇಹಳ್ಳದಿಂದ ಬರುವ ಹುಲ್ಲು, ಎಲೆಗಳನ್ನು ಒಂದೆಡೆ ಬಯಲು ಪ್ರದೇಶದಲ್ಲಿ ಹಾಕಿ ಕೊಳೆಯಲು ಬಿಟ್ಟರೆ ಅದು ಗೊಬ್ಬರವಾಗಲಿದ್ದು, ಅದನ್ನು ರೈತರು ಬಳಕೆ ಮಾಡಿಕೊಂಡರೆ ಉತ್ತಮವಾಗಲಿದೆ ಎಂದು ಜಿಪಂ ಮಾಜಿ ಅಧ್ಯಕ್ಷ ಟಿ. ಜನಾರ್ದನ ಹುಲಿಗಿ ಅವರು ಸಲಹೆ ನೀಡಿದ್ದು, ಅಲ್ಲದೇ, ತಮ್ಮ ತ್ಯಾಜ್ಯ ಸಂಸ್ಕರಣಾ ಘಟಕದಲ್ಲಿ ಇರುವ ಔಷಧಿಯನ್ನು ಕಸದ ಮೇಲೆ ಸಿಂಪರಣೆ ಮಾಡಿದರೆ ಅದು ಅತಿ ವೇಗವಾಗಿ ಕೊಳೆತು ರೈತರಿಗೆ ಅನುಕೂಲಕರ ಎನ್ನುವ ಸಲಹೆ ನೀಡಿದ್ದಾರೆ. ಹಾಗಾಗಿ ತ್ಯಾಜ್ಯ ಸಂಗ್ರಹಿಸಲಾಗಿದೆ.
ಸಚಿವ ನಾಡಗೌಡ ಭೇಟಿ: ಹಿರೇಹಳ್ಳದ ಸ್ವಚ್ಛತಾ ಕಾರ್ಯಕ್ಕೆ ಗವಿಶ್ರೀಗಳು ಮುಂದಾಗಿರುವ ಬಗ್ಗೆ ಮಾಹಿತಿ ಪಡೆದ ಸಚಿವ ವೆಂಕಟರಾವ್ ನಾಡಗೌಡ ಅವರು ರವಿವಾರ ಸಂಜೆ ಸ್ಥಳಕ್ಕೆ ಭೇಟಿ ನೀಡಿ ಅಲ್ಲಿನ ಕಾರ್ಯದ ಕುರಿತು ಪರಿಶೀಲನೆ ನಡೆಸಿದರು.