ದಾವಣಗೆರೆ: ಇತ್ತೀಚಿನ ದಿನಗಳಲ್ಲಿ ದೇಶವ್ಯಾಪಿಯಾಗಿ ಸ್ವಚ್ಛತೆಯ ಬಗ್ಗೆ ಜನರಲ್ಲಿ ಹೆಚ್ಚಿನ ಅರಿವು ಮೂಡುತ್ತಿರುವುದು ಆಶಾದಾಯಕ ಸಂಗತಿ ಎಂದು ಮಹಾನಗರ ಪಾಲಿಕೆ ಉಪ ಆಯುಕ್ತ ರವೀಂದ್ರ ಬಿ. ಮಲ್ಲಾಪುರ ಹೇಳಿದರು.
ಬುಧವಾರ ಕೆನರಾ ಬ್ಯಾಂಕ್ ಕ್ಷೇತ್ರೀಯ ಕಚೇರಿ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಸ್ವಚ್ಛ ಭಾರತ ಅಭಿಯಾನ ಮತ್ತು ಜಾಥಾ ಉದ್ಘಾಟಿಸಿ ಮಾತನಾಡಿದ ಅವರು, ಸರ್ಕಾರ, ಸಂಘ ಸಂಸ್ಥೆಗಳು ಹಾಗೂ ಜನಸಮೂಹ ಒಂದುಗೂಡಿ ಹೆಚ್ಚಿನ ಮಟ್ಟದಲ್ಲಿ ಸಮಾಜಮುಖೀ ಚಟುವಟಿಕೆ ನಡೆಸಿದಲ್ಲಿ ಇನ್ನೂ ಪ್ರಗತಿ ಸಾಧ್ಯವಾಗುತ್ತದೆ ಎಂದರು.
ಸ್ವಚ್ಛ ಭಾರತ ಅಭಿಯಾನದ ಅಂಗವಾಗಿ ಅಗ್ರಗಣ್ಯ ಬ್ಯಾಂಕುಗಳಲ್ಲಿ ಒಂದಾದ ಕೆನರಾ ಬ್ಯಾಂಕ್ ಅಭಿಯಾನ ಮತ್ತು ಜಾಥಾ ನಡೆಸುತ್ತಿರುವುದು ನಿಜಕ್ಕೂ ಶ್ಲಾಘನೀಯ ಮತ್ತು ಇತರೇ ಸಂಸ್ಥೆಗಳಿಗೆ ಮಾದರಿಯಾಗಿದೆ ಎಂದು ತಿಳಿಸಿದರು.
ಕೆನರಾ ಬ್ಯಾಂಕ್ ಕ್ಷೇತ್ರೀಯ ಕಚೇರಿ ಸಹಾಯಕ ಮಹಾಪ್ರಬಂಧಕ ಎಚ್.ಎಂ. ಕೃಷ್ಣಯ್ಯ ಮಾತನಾಡಿ, ಕೆನರಾ ಬ್ಯಾಂಕಿನ ವತಿಯಿಂದ ಕಳೆದ ಅಕ್ಟೋಬರ್‌ನಲ್ಲಿ ವಿದ್ಯಾನಗರ ಉದ್ಯಾನವನದಲ್ಲಿ ಸ್ವಚ್ಛತಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈಗ ಸ್ವಚ್ಛತಾ ಕಾರ್ಯದ ಜೊತೆಗೆ ಹೊಸ ಪರಿಕಲ್ಪನೆಯೊಂದಿಗೆ ಜನರಲ್ಲಿ ಅರಿವು ಮೂಡಿಸುವ ಕಾರ್ಯ ಕೈಗೊಳ್ಳಲಾಗಿದೆ. ಅರಿವಿನ ಜಾಥಾ ನಡೆಸಿ, ಜನರೊಂದಿಗೆ ಸಂವಾದ ನಡೆಸಿ, ಕರಪತ್ರ ಹಂಚುವುದರ ಮೂಲಕ ಅಭಿಯಾನ ನಡೆಸಲಾಗುತ್ತಿದೆ ಎಂದು ತಿಳಿಸಿದರು.
ಬೆಂಗಳೂರು ವೃತ್ತ ಕಚೇರಿ ಉಪ ಮಹಾ ಪ್ರಬಂಧಕಿ ಸಿ.ಎಸ್. ವಿಜಯಲಕ್ಷ್ಮೀ ಮಾತನಾಡಿ, ಸ್ವಚ್ಛ ಭಾರತ ಅಭಿಯಾನದ ಪರಿಕಲ್ಪನೆಯಿಂದ ದೇಶದಲ್ಲಿ ಸ್ವಚ್ಛತೆಯ ಕ್ರಾಂತಿಯಾಗುತ್ತಿದೆ. ಸ್ವಚ್ಛ ಭಾರತ ಯೋಜನೆ ಅತ್ಯಂತ ಯಶಸ್ವಿಯಾಗುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರದ ಜೊತೆಗೆ ಬ್ಯಾಂಕ್‌ಗಳು, ಸಂಘ-ಸಂಸ್ಥೆಗಳು, ಸರ್ಕಾರೇತರ ಸಂಸ್ಥೆಗಳು, ಜನ ಸಾಮಾನ್ಯರು ಕೈಜೋಡಿಸಬೇಕು ಎಂದು ಮನವಿ ಮಾಡಿದರು.
ಲೀಡ್ ಬ್ಯಾಂಕ್ ವಿಭಾಗೀಯ ಪ್ರಬಂಧಕ ಎನ್.ಟಿ. ಎರ್ರಿಸ್ವಾಮಿ, ವಿಭಾಗೀಯ ಪ್ರಬಂಧಕ ಎಸ್.ಆರ್. ರಮೇಶ್, ವಿ. ಕಾಳಿಮೂರ್ತಿ, ಎ. ತಿಪ್ಪೇಸ್ವಾಮಿ, ಕೆ. ರಾಘವೇಂದ್ರ ನಾಯರಿ, ಕೊರಗುನಾಯ್ಕ, ವ್ಯಾಸ ಪರ್ವತೀಕರ್, ಪ್ರಸಾದ್, ಭಾರತಿ ಸಂಜೀವ್, ರಾಧಮ್ಮ, ಹರೀಶ್ ಪೂಜಾರ್, ವಾರುಣಿ, ಸತ್ಯಾನಂದ ಮುತ್ತೆಣ್ಣನವರ, ಜಮೀರ್, ರಾಜಕುಮಾರ್, ಕೆ. ವಿಶ್ವನಾಥ ಬಿಲ್ಲವ, ವಿ. ಶಂಭುಲಿಂಗಪ್ಪ, ಮಹೇಶ್ವರನ್, ಕಾಡಜ್ಜಿ ವೀರಪ್ಪ, ಚನ್ನಕೇಶವ, ಆಶಾ ಜ್ಯೋತಿ, ಜ್ಞಾನೇಶ್ವರ ಮಾಲವಾಡೆ, ಸಿದ್ದವೀರಯ್ಯ, ಹರೀಶ್, ಮುರಳೀಧರ್, ದಿಲೀಪ್‌ಕುಮಾರ್, ರಂಗಪ್ಪ, ರಘುರಾಮ್, ಸಂದೀಪ್ ಇತರರು ಇದ್ದರು,.
ಕೆನರಾ ಬ್ಯಾಂಕ್‌ನ ಕ್ಷೇತ್ರೀಯ ಕಾರ್ಯಾಲಯದಿಂದ ಆರಂಭಗೊಂಡ ಜಾಥಾ ಬಿಇಐಟಿ ರಸ್ತೆ, ಗುಂಡಿ ಸರ್ಕಲ್, ಡೆಂಟಲ್ ಕಾಲೇಜು ರಸ್ತೆ, ಬಾಯ್ಸ ಹಾಸ್ಟೆಲ್ ರಸ್ತೆ, ಆಂಜನೇಯ ದೇವಸ್ಥಾನ ರಸ್ತೆಗಳಲ್ಲಿ ನಡೆಯಿತು.