Advertisement
ದೇಶದಲ್ಲಿಯೇ ಘನತಾಜ್ಯ ನಿರ್ವಹಣೆಯಲ್ಲಿ ಅತ್ಯುತ್ತಮ ನಗರ ಎಂಬ ಮನ್ನಣೆ ಪಡೆದುಕೊಂಡು ಕಳೆದ ವರ್ಷ ಮೊದಲ ಸ್ಥಾನ ಗಳಿಸಿದ್ದ ಮಂಗಳೂರು ಈ ಬಾರಿ ಯಾವುದೇ ವಿಭಾಗಗಳಲ್ಲಿ ಮೆಚ್ಚುಗೆ ಗಳಿಸುವುದಕ್ಕೆ ಸಫಲವಾಗದೆ ಕಳೆದ ಬಾರಿಗಿಂತಲೂ ಕಡಿಮೆ ಅಂಕಪಡೆದುಕೊಂಡಿದೆ. ಸ್ವಚ್ಛತೆಯ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದ ಪಾಲಿಕೆ ಸಮೀಕ್ಷೆಯಲ್ಲಿ ಕಡಿಮೆ ಅಂಕ ಪಡೆದುಕೊಳ್ಳಲು ಸಾರ್ವಜನಿಕರ ಪಾಲ್ಗೊಳ್ಳುವಿಕೆ ನಿರೀಕ್ಷೆಗೆ ತಕ್ಕಂತೆ ಇಲ್ಲದಿರುವುದೇ ಪ್ರಮುಖ ಕಾರಣವಾಗಿದೆ.
ಸ್ವಚ್ಛ ಸರ್ವೇಕ್ಷಣಾ 2019 ಸಮೀಕ್ಷೆಯಲ್ಲಿ ಸಾರ್ವಜನಿಕರ ಪಾಲ್ಗೊಳ್ಳುವಿಕೆ ಅತ್ಯಂತ ಪ್ರಾಮುಖ್ಯವನ್ನು ಹೊಂದಿದೆ. ಹೀಗಾಗಿ ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯವು ಸ್ವಚ್ಚ ಭಾರತ ಮಿಷನ್ ಅಡಿಯಲ್ಲಿ ಸಾರ್ವಜನಿಕರಿಗೆ ಕೇಳಲಾಗುವ ಅಥವಾ ಆನ್‌ಲೈನ್-ಆ್ಯಪ್ ಮುಖಾಂತರ ನಡೆಸಲಾಗುವ ಸಮೀಕ್ಷೆಯಲ್ಲಿ ಭಾಗವಹಿಸಬೇಕಾಗಿತ್ತು. ಒಟ್ಟು ಅಂಕಗಳು 5,000 ಅಂಕಗಳಲ್ಲಿ ಸಾರ್ವಜನಿಕರ ಭಾಗವಹಿಸುವಿಕೆಗೆ 1,250 ಅಂಕಗಳು ನಿಗದಿಯಾಗಿತ್ತು. ಆದರೆ ಈ ಬಾರಿ ಕಳೆದ ವರ್ಷಕ್ಕಿಂತ ಶೇ.50ರಷ್ಟು ಸಾರ್ವಜನಿಕರು ಭಾಗವಹಿಸದೆ ಇರುವುದರಿಂದ ಅಂಕ ಕಡಿಮೆ ಬರುವ ಮೂಲಕ ಮಂಗಳೂರು ನಗರವು ವಾಸ್ತವದಲ್ಲಿ ಸಚ್ಛತೆ ಕಾಪಾಡುವುದರಲ್ಲಿ ಅಗ್ರಪಂಕ್ತಿಯಲ್ಲಿ ಇದ್ದರು ಕೂಡ ಸರ್ವೇಕ್ಷಣಾ ರೇಟಿಂಗ್‌ನಲ್ಲಿ ಮುಂಚೂಣಿಯ ಸ್ಥಾನ ಕಾಪಾಡುವುದಕ್ಕೆ ಸಾಧ್ಯವಾಗಿಲ್ಲ ಎನ್ನಲಾಗುತ್ತಿದೆ.
Related Articles
ಕಳೆದ ಬಾರಿ ಸ್ವಚ್ಛ ಸರ್ವೇಕ್ಷಣಾ ಅಭಿಯಾನದ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಅನೇಕ ಕಾರ್ಯ ಕ್ರಮಗಳನ್ನು ಪಾಲಿಕೆ ಆಯೋಜಿಸಿತ್ತು. ಆದರೆ ಈ ಬಾರಿ ಸಾರ್ವಜನಿಕರನ್ನು ಸ್ವಚ್ಛ ಸರ್ವೇಕ್ಷಣಾ ಸಮೀಕ್ಷೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವುದಕ್ಕೆ ಪೂರಕವಾದ ಕಾರ್ಯಕ್ರಮಗಳನ್ನು ಪಾಲಿಕೆಯು ಮಾಡಿರಲಿಲ್ಲ.
Advertisement
ಹೀಗಾಗಿ, ನಗರವಾಸಿಗಳು ಕೂಡ ಸಮೀಕ್ಷೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವತ್ತ ತಮ್ಮ ಆಸಕ್ತಿ ತೋರಿಸಿರಲಿಲ್ಲ. ಈ ಕಾರಣದಿಂದ ನಗರಕ್ಕೆ ಅತ್ಯುತ್ತಮ ಸಚ್ಛತಾ ನಗರ ಎನ್ನುವ ಮನ್ನಣೆ ಕೈತಪ್ಪಿದೆ ಎನ್ನಲಾಗಿದೆ. ನಗರದಲ್ಲಿ ಸ್ವಚ್ಛತೆಗಾಗಿ ಕೈಗೊಂಡ ಅಂಶಗಳನ್ನು ಪರಿಶೀಲಿಸಲು ಕೇಂದ್ರದ ಉನ್ನತ ಮಟ್ಟದ ಅಧಿಕಾರಿಗಳ ತಂಡ ನಗರಕ್ಕೆ ಆಗಮಿಸಿ ನಗರದ ಸ್ವಚ್ಛತೆಯನ್ನು ಪರಿಶೀಲಿಸಿತ್ತು. ಈ ಸಂದರ್ಭದಲ್ಲೂ ನಗರದ ರಸ್ತೆ ಬದಿಯ ಡಿವೈಡರ್‌ಗಳಿಗೆ ಬಣ್ಣ ಬಳಿಯುವುದು, ಫುಟ್ ಪಾತ್‌ಗಳನ್ನು ಸ್ವಚ್ಛಗೊಳಿಸುವುದು, ಸಾರ್ವಜನಿಕರ ಸ್ಥಳಗಳ ಡಸ್ಟ್‌ಬಿನ್‌ಗಳ ಸ್ವಚ್ಚತೆಯನ್ನು ಪಾಲಿಕೆ ಮಾಡಿಲ್ಲ ಎನ್ನುವ ಆರೋಪಗಳು ಕೇಳಿಬರುತ್ತಿದೆ.
ಹಸಿ ಕಸ-ಒಣ ಕಸ ಪ್ರತ್ಯೇಕಿಸುವಲ್ಲಿ ವಿಫಲಮನಪಾದಿಂದ ಹಸಿ ಮತ್ತು ಒಣ ಕಸ ಸಂಗ್ರಹಣೆಗೆ ಪ್ರತ್ಯೇಕ ವ್ಯವಸ್ಥೆಯನ್ನು ಮಾಡಿದ್ದರೂ ಅದು ಸಮರ್ಪಕವಾಗಿ ಅನುಷ್ಠಾನಗೊಳಿಸುವಲ್ಲಿ ಪಾಲಿಕೆ ವಿಫಲ ವಾಗಿತ್ತು. ಪಾಲಿಕೆ ಕಟ್ಟುನಿಟ್ಟಿನ ಆದೇಶ ನೀಡದೆ ಇರುವುದರಿಂದ ಸಾರ್ವಜನಿಕರು ಕೂಡ ಕಸ ವಿಂಗಡನೆ ಬಗ್ಗೆ ಅಷ್ಟು ಗಂಭೀರವಾಗಿ ಪರಿಗಣಿಸಿಲ್ಲ. ಜತೆಗೆ, ಪಚ್ಚ ನಾಡಿಯ ತ್ಯಾಜ್ಯ ನಿರ್ವಹಣೆ ಘಟಕದಲ್ಲಿಯೂ ಕಸ ವಿಲೇವಾರಿಯು ವೈಜ್ಞಾನಿಕವಾಗಿ ಆಗುತ್ತಿಲ್ಲ ಎನ್ನುವ ಆರೋಪಗಳಿವೆ ಇದರಿಂದಲೂ ಅಂಕ ಕಡಿಮೆಯಾಗಿರುವ ಸಾಧ್ಯತೆ ಇದೆ. ಸಾರ್ವಜನಿಕರು ಪಾಲ್ಗೊಳ್ಳುವಿಕೆ
ಕುಂಠಿತದಿಂದ ಹಿನ್ನಡೆ ಸ್ವಚ್ಛ ನಗರದ ಹಣೆ ಪಟ್ಟಿಯಲ್ಲಿ ಮುಂಚೂಣಿ ಸ್ಥಾನ ಪಡೆದುಕೊಳ್ಳುವುದಕ್ಕೆ ಈ ಬಾರಿಯೂ ಮಂಗಳೂರು ಪಾಲಿಕೆ ಶ್ರಮ ವಹಿಸಿತ್ತು. ಆದರೆ, ಸಾರ್ವಜನಿಕರ ಪಾಲ್ಗೊಳ್ಳುವಿಕೆ ಇಲ್ಲದೆ ಇರುವುದರಿಂದ ಈ ಬಾರಿ ಅಂಕ ಕುಂಠಿತವಾಗಿದೆ.
– ಭಾಸ್ಕರ್ ಕೆ., ಮಾಜಿ ಮೇಯರ್ ಹೆಚ್ಚು ಆಸಕ್ತಿ ವಹಿಸಿಲ್ಲ
ಸ್ವಚ್ಛ ನಗರ ಎಂಬ ಬಿರುದು ಪಡೆದುಕೊಳ್ಳುವ ನಿಟ್ಟಿನಲ್ಲಿ ವಿವಿಧ ನಗರಗಳು ಹಲವು ವರ್ಷಗಳಿಂದ ಅನೇಕ ಪರಿಣಾಮಕಾರಿ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಬಂದಿವೆ. ಆದರೆ ಪಾಲಿಕೆಯು ಈ ಬಾರಿ ಸ್ವಚ್ಛತಾ ಸಮೀಕ್ಷಾ ಅಭಿಯಾನದಲ್ಲಿ ಜನರನ್ನು ಹೆಚ್ಚು ಪಾಲ್ಗೊಳ್ಳುವಂತೆ ಮಾಡುವಲ್ಲಿ ಆಸಕ್ತಿ ತೋರಿಸಿದಂತಿಲ್ಲ. ಪಾಲಿಕೆಯೊಂದಿಗೆ ರಾಮಕೃಷ್ಣ ಮಠ ಕೈ ಜೋಡಿಸಿ ತನ್ನ ಕಡೆಯಿಂದ ಎಲ್ಲ ರೀತಿಯ ಪ್ರಯತ್ನ ಮಾಡಿತ್ತು. ನಗರ ದೇಶಮಟ್ಟದಲ್ಲಿ ಗುರುತಿ ಸುವಂತೆ ಮಾಡುವುದಕ್ಕೆ ಸಾರ್ವಜನಿಕರು ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು.
– ಏಕಗಮ್ಯಾನಂದ ಸ್ವಾಮೀಜಿ,
ರಾಮಕೃಷ್ಣ ಮಠ ವಿಶೇಷ ವರದಿ