ಮಂಗಳಾದೇವಿ: ನಾವು ವಾಸವಾಗಿರುವ ಪರಿಸರ ಸ್ವಚ್ಛವಾಗಿರುವುದು ಮನುಷ್ಯನ ಮೂಲ ಅವಶ್ಯಗಳಲ್ಲಿ ಪ್ರಮುಖವಾದುದು. ಈ ಕೆಲಸದಲ್ಲಿ ಯುವಕರು ತಮ್ಮನ್ನು ಸಕ್ರಿಯಗೊಳಿಸಬೇಕು ಎಂದು ಬೇಲೂರು ರಾಮಕೃಷ್ಣ ಮಠ ಹಾಗೂ ರಾಮಕೃಷ್ಣ ಮಿಷನ್‌ನ ಟ್ರಸ್ಟಿ ಸ್ವಾಮಿ ಮುಕ್ತಿದಾನಂದ ಸ್ವಾಮೀಜಿ ಹೇಳಿದರು.
ರಾಮಕೃಷ್ಣ ಮಿಷನ್‌ನ ಸ್ವಚ್ಛತಾ ಅಭಿಯಾನದ 4ನೇ ಹಂತದ ಅಂಗವಾಗಿ ಆಯೋಜಿಸಲಾದ ‘ಸ್ವಚ್ಛ ಮನಸ್ಸು’ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಶನಿವಾರ ಮಾತನಾಡಿದರು.
ಸ್ವಚ್ಛ ಭಾರತ ಅಭಿಯಾನದ ಬಗ್ಗೆ ಯುವ ಜನಾಂಗದಲ್ಲಿ ಜಾಗೃತಿ ಮೂಡಿದಾಗ ಸುಂದರ ಸಮಾಜ ನಿರ್ಮಾಣವಾಗುವುದು ಖಚಿತ. ಕೇವಲ ಪದವಿ, ಅಂಕಗಳಿಗಾಗಿ ವಿದ್ಯಾಭ್ಯಾಸ ಮಾಡುವುದು ವ್ಯರ್ಥ. ಸುಂದರ ಹಾಗೂ ಸದೃಢ ಸಮಾಜ ನಿರ್ಮಾಣ ಮಾಡುವುದು ಪ್ರತಿಯೊಬ್ಬರ ಕರ್ತವ್ಯವಾಗಬೇಕು ಎಂದರು.
ರಾಮಕೃಷ್ಣ ಮಿಷನ್‌ನ ಕಾರ್ಯದರ್ಶಿ ಸ್ವಾಮಿ ಜಿತಕಾಮಾನಂದಜೀ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷಿ ಯೋಜನೆಗಳಲ್ಲೊಂದಾದ ಸ್ವಚ್ಛ ಭಾರತ ಅಭಿಯಾನ. ಈ ಅಭಿಯಾನವು ಯಶಸ್ವಿಯಾಗಲು ಜನರು ತಮ್ಮನ್ನು ಸ್ವಚ್ಛತಾ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಳ್ಳಬೇಕಾಗಿದೆ ಎಂದರು.
ಬೆಂಗಳೂರಿನ ಮಾನಸ ತರಬೇತಿ ಅಕಾಡೆಮಿಯ ನಿರ್ದೇಶಕ ಪ್ರೊ| ರಘೋತ್ತಮ್ ರಾವ್ ಸಂಪನ್ಮೂಲ ವ್ಯಕ್ತಿಯಾಗಿದ್ದರು. ಮಂಗಳೂರು ವಿಮಾನ ನಿಲ್ದಾಣ ಪ್ರಾಧಿಕಾರದ ಮಾಜಿ ನಿರ್ದೇಶಕ ಎಂ.ಆರ್.ವಾಸುದೇವ್ ಮತ್ತಿತರರು ಈ
ಸಂದರ್ಭದಲ್ಲಿ ಉಪಸ್ಥಿತರಿದ್ದರು.