Advertisement

ರಾಮಕೃಷ್ಣ ಮಠದಲ್ಲಿ ಶಿಬಿರ

10:52 AM Jan 12, 2018 | Team Udayavani |

ಮಹಾನಗರ: ಒಂದೆಡೆ ಸ್ವಚ್ಛ ಭಾರತದ ಸಂಕಲ್ಪದಂತೆ ಶ್ರೀ ರಾಮಕೃಷ್ಣ ಮಠದ ಆಶ್ರಯದಲ್ಲಿ ಸ್ವಚ್ಛ ಮಂಗಳೂರು ಕಾರ್ಯಕ್ರಮ ನಿರಂತರವಾಗಿ ನಡೆಯುತ್ತಿದ್ದರೆ, ವಿದ್ಯಾರ್ಥಿಗಳಲ್ಲಿ ಸ್ವಚ್ಛ ಮನಸ್ಸು ಕಟ್ಟುವ ನೆಲೆಯಲ್ಲಿ ರಾಮಕೃಷ್ಣ ಮಠದಲ್ಲಿ ‘ಸ್ವಚ್ಛತೆಗಾಗಿ ಕಲಾಮೇಳ’ವೆಂಬ ಶಿಬಿರವನ್ನು ಗುರುವಾರ ಆಯೋಜಿಸಲಾಯಿತು. ಮಂಗಳೂರು ನಗರ ವ್ಯಾಪ್ತಿಯ 108 ಶಾಲೆಗಳ ಒಟ್ಟು 6,000 ವಿದ್ಯಾರ್ಥಿಗಳನ್ನು ಇದಕ್ಕಾಗಿ ಆಯ್ಕೆ ಮಾಡಲಾಗಿ, ಅದರಲ್ಲಿ 1,000 ವಿದ್ಯಾರ್ಥಿಗಳನ್ನು ಆರಿಸಲಾಯಿತು. ಈ ಪೈಕಿ ಆಯ್ಕೆಯಾದ 200 ವಿದ್ಯಾರ್ಥಿಗಳು ಕಲಾಶಿಬಿರದಲ್ಲಿ ಪಾಲ್ಗೊಂಡರು.

Advertisement

ಚಾರ್ಕೊಲ್‌ ಬಗ್ಗೆ ದಯಾನಂದ ಬಿಜೈ, ಜಲವರ್ಣದ ಬಗ್ಗೆ ಗಣೇಶ್‌ ಸೋಮಯಾಜಿ, ರೇಖಾಚಿತ್ರದ ಬಗ್ಗೆ ದಿನೇಶ್‌ ಹೊಳ್ಳ, ಜಲ ವರ್ಣದ ಬಗ್ಗೆ ಪೆರ್ಮುದೆ ಮೋಹನ್‌ ಕುಮಾರ್‌, ಕಾವಿಕಲೆಯ ಬಗ್ಗೆ ವೀಣಾ ಶ್ರೀನಿವಾಸ್‌, ವರ್ಲಿ ಕಲೆಯ ಬಗ್ಗೆ ಸಪ್ನಾ ನೊರೋನ್ಹಾ, ಕಾರ್ಟೂನ್ ಬಗ್ಗೆ ಜಾನ್‌ ಚಂದ್ರನ್‌ ಮಣ್ಣಿನ ಆಕೃತಿಯ ಬಗ್ಗೆ ವೆಂಕಿ ಪಲಿಮಾರು, ಕ್ರಾಫ್ಟ್ ಬಗ್ಗೆ ಶಾಲಿನಿ, ಕೊಲಾಜ್‌ ಬಗ್ಗೆ ತಾರಾನಾಥ ಕೈರಂಗಳ, ಮುಖವಾಡ ರಚನೆ ಬಗ್ಗೆ ಸುಧೀರ್‌ ಕುಮಾರ್‌, ಕಸದಿಂದ ರಸದ ಬಗ್ಗೆ ಸುಂದರ್‌ ತೋಡಾರ್‌, ಕ್ಯಾರಿಕೇಚರ್‌ ಬಗ್ಗೆ ಭವನ್‌, ಪಾಟ್‌ ಪೈಂಟಿಂಗ್‌, ಗಾಳಿಪಟದ ಬಗ್ಗೆ ಸತೀಶ್‌ ರಾವ್‌ ಹಾಗೂ ಗ್ರೀಟಿಂಗ್‌ ಕಾರ್ಡ್‌ ಬಗ್ಗೆ ನೇಹಾ ರಾವ್‌ ಸಂಪನ್ಮೂಲ ವ್ಯಕ್ತಿಗಳಾಗಿ ಕಲಾಮೇಳದಲ್ಲಿ ಪಾಲ್ಗೊಂಡರು.

ಪ್ರತಿಭೆ ವ್ಯಕ್ತವಾಗಲಿ
ಆಶೀರ್ವಚನ ನೀಡಿದ ರಾಮಕೃಷ್ಣ ಮಠದ ಅಧ್ಯಕ್ಷ ಸ್ವಾಮಿ ಜಿತಕಾಮಾನಂದಜಿ ಅವರು, ಈ ಬಾರಿ 4 ಕಾರ್ಯಕ್ರಮಗಳನ್ನು ಜಿಲ್ಲೆಯ ವಿವಿಧೆಡೆಯಲ್ಲಿ ಆಯೋಜಿಸುತ್ತಿದೆ. ವಿದ್ಯಾಭ್ಯಾಸ ನಮ್ಮಲ್ಲಿರುವ ಕಲೆಯನ್ನು ಹೊರತರುವ ಕೆಲಸ ಮಾಡಬೇಕು ಎಂದು ಆಶಿಸಿದರು. ಎಂಆರ್‌ಪಿಎಲ್‌ ಜಿಜಿಎಂ ಬಿ.ಎಚ್‌.ವಿ. ಪ್ರಸಾದ್‌ ಮುಖ್ಯ ಅತಿಥಿಯಾಗಿದ್ದರು. ಕಲಾವಿದ ಗಣೇಶ್‌ ಸೋಮಯಾಜಿ ಉಪಸ್ಥಿತರಿದ್ದರು. ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮಾಜಿ ನಿರ್ದೇಶಕ ಎಂ.ಆರ್‌. ವಾಸುದೇವ ಸ್ವಾಗತಿಸಿದರು. ಕಾರ್ಯಕ್ರಮ ಸಂಯೋಜಕ ರಂಜನ್‌ ಬಿ.ಯು. ವಂದಿಸಿದರು. ಲಲಿತಾ ಕಲ್ಕೂರ್‌ ಕಾರ್ಯಕ್ರಮ ನಿರೂಪಿಸಿದರು. 

ಕಲೆ ಸದ್ಬಳಕೆ ಮಾಡಿ
ಕಲಾಮೇಳವನ್ನು ಉದ್ಘಾಟಿಸಿ ಮಾತನಾಡಿದ ವಿಧಾನ ಪರಿಷತ್‌ ವಿಪಕ್ಷ ಮುಖ್ಯಸಚೇತಕ ಕ್ಯಾ| ಗಣೇಶ್‌ ಕಾರ್ಣಿಕ್‌ ಅವರು, ಪ್ರತಿಯೊಬ್ಬರಲ್ಲಿ ಅದ್ಭುತ ವ್ಯಕ್ತಿತ್ವವಿದೆ. ನಮ್ಮನ್ನು ಸಂಸ್ಕರಣೆ, ಶಿಕ್ಷಣಕ್ಕೊಳಪಡಿಸಿದಾಗ ಅದ್ಭುತ ವ್ಯಕ್ತಿಗಳು ನಿರ್ಮಾಣವಾಗಲು ಸಾಧ್ಯ. ಸೃಜನಶೀಲತೆ ನಮಗೆ ಭಗವಂತನ ಕೊಡುಗೆ. ಅದನ್ನು ಹೊರಗೆ ತೆಗದು ಪೋಷಿಸಿ ಬಳಸಿಕೊಂಡರೆ ಸಮಾಜೋಪಯೋಗಿಯಾಗಲು ಸಾಧ್ಯವಿದೆ. ಆದ್ದರಿಂದ ಕಲೆಯನ್ನು ಸರಿಯಾದ ರೀತಿಯಲ್ಲಿ ಉಪಯೋಗಿಸಿ ಉನ್ನತಸ್ಥಾನಕ್ಕೇರಬೇಕು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next