ಸ್ವಚ್ಛತೆ ಎನ್ನುವುದು ವೈಯುಕ್ತಿಕವಾಗಿ ಮೂಡುವಂತಹ ಒಂದು ಗುಣ. ಇದನ್ನು ಹುಟ್ಟಿನಿಂದಲೇ ಜಪಾನೀಯರು ರೂಢಿಸಿಕೊಂಡು ಬಿಟ್ಟಿದ್ದಾರೆ. ಅಲ್ಲಿ ಇವರಿಗೆ ಯಾವ ಸರಕಾರವಾಗಲಿ, ಸಂಘಸಂಸ್ಥೆಗಳಾಗಲಿ ಹೇಳಿಕೊಡುವ ಆವಶ್ಯಕತೆ ಇಲ್ಲ. ಎಳವೆಯಲ್ಲೇ ಪ್ರಾಥಮಿಕ ಶಾಲೆಯಲ್ಲೇ ಮಕ್ಕಳಿಗೆ ಅವರ ಕೊಠಡಿಗಳನ್ನು ಸ್ವತ್ಛವಾಗಿಟ್ಟುಕೊಳ್ಳುವುದು, ಮಧ್ಯಾಹ್ನದ ಊಟವನ್ನು ಹಂಚುವುದು, ಊಟದ ನಂತರ ಪಾತ್ರೆಗಳನ್ನು ಸ್ವತ್ಛಗೊಳಿಸುವುದು, ತರಗತಿಯ ನೆಲವನ್ನು ಒರೆಸುವುದು ಇತ್ಯಾದಿಗಳನ್ನು ಹೇಳಿಕೊಡುವುದರಿಂದ ಅವರಿಗೆ ಸ್ವಚ್ಛತೆ ರಕ್ತದಲ್ಲೇ ಮೈಗೂಡಿರುತ್ತದೆ. ಈ ಕೆಲಸವನ್ನು ಮಕ್ಕಳಾಗಲಿ, ಪೋಷಕರಾಗಲಿ, ಶಾಲೆಯ ಶಿಕ್ಷಕರಾಗಲಿ ಕೀಳರಿಮೆಯೆಂದು ಭಾವಿಸುವುದಿಲ್ಲ. ಹಾಗಾಗಿ, ಈ ಮಕ್ಕಳು ಬೆಳೆದು ದೇಶದ ನಾಗರಿಕರಾದಾಗ, ಇವರ ನಡವಳಿಕೆಗಳು ಸಮಾಜಮುಖೀಯಾಗಿರುತ್ತದೆ. ಜಪಾನಿನ ಯಾವುದೇ ರಸ್ತೆಗಳಾಗಲಿ, ಜನನಿಬಿಡ ಸ್ಥಳಗಳಾದ ಮೆಟ್ರೋ ನಿಲ್ದಾಣವಾಗಲಿ, ಬಸ್ ನಿಲ್ದಾಣವಾಗಲಿ, ಮಾಲ್‌ಗಳಾಗಲಿ, ಪಾರ್ಕ್‌ಗಳಾಗಲಿ, ಆಫೀಸಿನಲ್ಲಾಗಲಿ ನೀವು ಹುಡುಕಿದರೂ ಕಸ ಸಿಗುವುದಿಲ್ಲ. ಇಲ್ಲಿ ಸಿಗರೇಟು ಸೇದುವವರು ಸಹ ಸಿಗರೇಟಿನ ಬೂದಿ ನೆಲದ ಮೇಲೆ ಬೀಳದಂತೆ ಆ ಬೂದಿಯನ್ನು ಇನ್ನೊಂದು ಪೊಟ್ಟಣದಲ್ಲಿ ಚಿಮುಕಿಸಿಕೊಳ್ಳುತ್ತಾರೆ.
ಎಲ್ಲ ಕನ್‌ವೀನಿಯನ್ಸ್ ಸ್ಟೋರ್‌ಗಳಲ್ಲಿ ತರಕಾರಿಗಳನ್ನು ಪ್ಲಾಸ್ಟಿಕ್ ತೆಳುಹಾಳೆಗಳಲ್ಲಿ ಸುತ್ತಿಟ್ಟಿರುತ್ತಾರೆ. ವ್ಯಾಪಾರ ಮುಗಿಸಿ ಹೊರಬರುವಾಗಲು ಪ್ಲಾಸ್ಟಿಕ್ ಕೈಚೀಲವನ್ನೇ ಕೊಡುತ್ತಾರೆ. ಆದರೂ ಜಪಾನೀಯರು ವ್ಯವಸ್ಥಿತವಾಗಿ ಮರುಬಳಕೆ ಮಾಡುವುದರಿಂದ ಇವರಿಗೆ ಪ್ಲಾಸ್ಟಿಕ್ ತಲೆನೋವಾಗಿರುವ ವಸ್ತುವಾಗಿ ಪರಿಗಣಿತವಾಗುವುದಿಲ್ಲ.
ನಾವು ತಿಳಿದುಕೊಳ್ಳಬೇಕಾದ ಅಂಶವೆಂದರೆ ಸ್ವಚ್ಛತೆ ಎಂಬುದು ಕೇವಲ ಘೋಷಣೆಗಳಿಂದಾಗಲಿ, ವಾಟ್ಸಾಪ್ ಸಂದೇಶದಿಂದಾಗಲಿ, ಶಾರ್ಟ್ ಫಿಲ್ಮ್ನಿಂದಾಗಲಿ, ಸಂಘಸಂಸ್ಥೆಗಳ ಒಂದು ದಿನದ ಕಾರ್ಯಕ್ರಮದಿಂದಾಗಲಿ ಮೂಡುವ ಭಾವನೆಯಲ್ಲ. ಅದು ತನ್ನೊಳಗೆಯೇ ಮೂಡುವ ಒಂದು ಎಚ್ಚರ.
ಸಿ. ಎಸ್. ಶ್ರೀನಾಥ್