Advertisement

ಗುಬ್ಬಿಗಳ ಇರುವಿಕೆ ಸ್ವತ್ಛ ಪರಿಸರದ ಸಂಕೇತ

03:48 PM Mar 22, 2017 | Team Udayavani |

ಧಾರವಾಡ: ಮನುಷ್ಯ ತನ್ನ ಜೀವನ ಶೈಲಿಯಲ್ಲಿ ಆಧುನಿಕತೆ ಅಳವಡಿಸಿಕೊಳ್ಳುತ್ತ ಹೇಗೆ ಬದಲಾವಣೆ ಹೊಂದುತ್ತಿದ್ದಾನೆಯೋ ಅಷ್ಟೇ ವೇಗವಾಗಿ ಅದರ ವ್ಯತಿರಿಕ್ತ ಪರಿಣಾಮ ಗುಬ್ಬಿಗಳ ಮೇಲಾಗುತ್ತಿದ್ದು, ಗುಬ್ಬಿಗಳು ಮನುಷ್ಯನಿಂದ ದೂರವಾಗುತ್ತಿವೆ ಎಂದು ಪಕ್ಷಿ ತಜ್ಞ ಆರ್‌.ಈ. ತಿಮ್ಮಾಪುರ ಹೇಳಿದರು. 

Advertisement

ಇಲ್ಲಿನ ನೇಚರ್‌ ರಿಸರ್ಚ್‌ ಸೆಂಟರ್‌ ಹಳ್ಳಿಗೇರಿಯ ನೇಚರ್‌ ಫಸ್ಟ್‌ ಇಕೋ ವಿಲೇಜಿನಲ್ಲಿ ಹಮ್ಮಿಕೊಂಡಿದ್ದ ವಿಶ್ವ ಗುಬ್ಬಿಗಳ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಗುಬ್ಬಿಗಳು ಒಂದು ಸ್ವಚ್ಚ ಸುಂದರ ಪರಿಸರದ ಸಂಕೇತ. ಎಲ್ಲಿ ಗುಬ್ಬಿಗಳು ಮಾಯವಾಗುತ್ತಿವೆಯೋ ಅಲ್ಲಿ ಪರಿಸರ ಕಲುಷಿತಗೊಂಡಿರುವುದು ನಿಶ್ಚಿತ. 

ಗುಬ್ಬಚ್ಚಿಗಳು ಮತ್ತು ಮನುಷ್ಯ ಅವಿನಾಭಾವ ಸಂಬಂಧ ಹೊಂದಿರುವ ಜೀವಿಗಳು. ನಮ್ಮಿಂದ ದೂರ ಹೋಗಿರುವ ಗುಬ್ಬಿಗಳನ್ನು ಮರಳಿ ತರುವತ್ತ ಆದ್ಯತೆ ನೀಡಬೇಕು ಎಂದರು. ನಾಗಠಾಣ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ವಿಶ್ವನಾಥ ನಾಗಠಾಣ ಮಾತನಾಡಿ, ಗುಬ್ಬಿಗಳ ಸಂರಕ್ಷಣೆಗಾಗಿ ಗುಬ್ಬಿಗೂಡುಗಳ ನಿರ್ಮಾಣಕ್ಕಾಗಿ ತಮ್ಮ ಶಾಲಾ ಮಕ್ಕಳಿಗೆ ಒಂದು ಕಾರ್ಯಾಗಾರ ಹಮ್ಮಿಕೊಳ್ಳಲಾಗುವುದು ಎಂದರು. 

ಸಾವಯವ ಕೃಷಿ ತಜ್ಞ ಡಾ| ಬಿ.ಆರ್‌. ಅಥಣಿ ಮಾತನಾಡಿ, ಗುಬ್ಬಿಗಳು ಕೃಷಿ ಮಿತ್ರ ಪಕ್ಷಿಗಳು. ಬೆಳೆಗಳಿಗೆ ಬಾಧೆ ತರುವ ಹಲವು ಕೀಟಗಳನ್ನು ಗುಬ್ಬಿಗಳು ತಿನ್ನುತ್ತವೆ. ಇದರಿಂದ ನೈಸರ್ಗಿಕವಾಗಿ ಕೀಟಗಳನ್ನು ನಿಯಂತ್ರಿಸಬಹುದಿತ್ತು. ಆದರೆ, ಗುಬ್ಬಿಗಳ ಸಂತತಿ ಕಡಿಮೆ ಆಗುತ್ತಿರುವುದರಿಂದ ಬೆಳೆಗಳಿಗೆ ಕೀಟಗಳ ಬಾಧೆ ಹೆಚ್ಚುತ್ತಿದ್ದು, ಗುಬ್ಬಿಗಳು ಮತ್ತೆ ಮನುಷ್ಯನಿಗೆ ಬೇಕಾದಂತಹ ಸಂದರ್ಭ ಒದಗಿಬಂದಿದೆ ಎಂದು ಹೇಳಿದರು. 

ನೇಚರ್‌ ರಿಸರ್ಚ್‌ ಸೆಂಟರ್‌ನ ಅಧ್ಯಕ್ಷ ಪಂಚಯ್ಯ ಹಿರೇಮಠ ಮಾತನಾಡಿ,  ಗುಬ್ಬಿಗಳ ಸಂರಕ್ಷಣೆಗಾಗಿ ತಮ್ಮ ಸಂಸ್ಥೆ ಎಲ್ಲ ತರಹದ ಅನುಕೂಲಗಳನ್ನು ಮಾಡಲು ತಯಾರಿದ್ದು, ಯಾರಿಗಾದರೂ ಗುಬ್ಬಿ ಗೂಡುಗಳು ಬೇಕಾದಲ್ಲಿ ತಮ್ಮನ್ನು ಸಂಪರ್ಕಿಸಬಹುದು ಎಂದರು. 

Advertisement

ಸೆಂಟರ್‌ನ ಕಾರ್ಯದರ್ಶಿ ಪ್ರಕಾಶ ಗೌಡರ ನಿರೂಪಿಸಿದರು. ಜಯಶ್ರೀ ಪಾಟೀಲ ಪ್ರಾರ್ಥಿಸಿದರು. ಕುಮಾರ ಹಿರೇಮಠ ವಂದಿಸಿದರು. ಪೂರ್ಣಿಮಾ ನಾಗಠಾಣ, ಜಗದೀಶ ತೊಟಿಗೇರ, ಶಂಕರ ದಾಸನಕೊಪ್ಪ, ಸಕ್ಕೂಬಾಯಿ ಮೇತ್ರಿ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next