ಚಾಮರಾಜನಗರ: ಗ್ರಾಮೀಣ ಭಾಗದ ಪ್ರತಿಯೊಂದು ಕುಟುಂಬಕ್ಕೂ ಶುದ್ಧ ಕುಡಿಯುವ ನೀರು ಒದಗಿಸುವುದೇ ಜಲ ಜೀವನ ಮಿಷನ್ ಯೋಜನೆ ಉದ್ದೇಶವಾಗಿದೆ ಎಂದು ಜಿಪಂ ಸಿಇಒ ಕೆ.ಎಂ.ಗಾಯತ್ರಿ ಹೇಳಿದರು.
ತಾಲೂಕಿನ ಶಿವಪುರ ಗ್ರಾಮದಲ್ಲಿ ಜಿಲ್ಲಾ ಪಂಚಾಯಿತಿಯಿಂದ ಏರ್ಪಡಿಸಿದ್ದ ಜಲ ಜೀವನ ಮಿಷನ್ ಯೋಜನೆಯ ವಿವಿಧ ಅನುಷ್ಠಾನ ಹಂತದಲ್ಲಿನ ತಾಂತ್ರಿಕ ಸಿಬ್ಬಂದಿಗೆ ಜಿಲ್ಲಾ ಮಟ್ಟದ ಎರಡು ದಿನದ ತರಬೇತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಅವರು ಮಾತನಾಡಿ, ಜಲ ಜೀವನ್ ಮಿಷನ್ ಯೋಜನೆ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿದ್ದು, ಇದಕ್ಕೆ ಕೇಂದ್ರ ಸರ್ಕಾರ ಶೇ.42.50, ರಾಜ್ಯ ಸರ್ಕಾರ ಶೇ 42.50, ಶೇ.5 ಹದಿನೈದನೇ ಹಣಕಾಸು ಯೋಜನೆಯಿಂದ ಒದಗಿಸಲಾಗುತ್ತಿದೆ. ಶೇ.10ರಷ್ಟು ಹಣವನ್ನು ಗ್ರಾಮದ ಜನರಿಂದ ವಂತಿಕೆಯನ್ನು ಸಂಗ್ರಹಿಸಬೇಕು. ಇದಕ್ಕೆ ಸ್ಥಳೀಯ ಗ್ರಾಮ ಪಂಚಾಯಿತಿ ಅಧ್ಯಕ್ಷರು ಮತ್ತು ಸದಸ್ಯರ ಸಹಕಾರವನ್ನು ಪಡೆಯಬೇಕು. ಕಾಮಗಾರಿ ನಡೆಯುವಾಗ ಗ್ರಾಮದ ಜನರು ಕಾಮಗಾರಿಯ ಗುಣಮಟ್ಟ ಹಾಗು ಶುದ್ದ ಕುಡಿಯುವ ನೀರಿನ ಗುಣಮಟ್ಟವನ್ನು ನೋಡಿಕೊಳ್ಳಬೇಕು ಎಂದು ಸೂಚಿಸಿದರು. ಶಿವಪುರ ಗ್ರಾಮದಲ್ಲಿ 2628 ನಲ್ಲಿ ಸಂಪರ್ಕವಿದೆ. ಈ ಪೈಕಿ 1518 ನಲ್ಲಿ ಸಂಪರ್ಕಕಲ್ಪಿಸುವ ಗುರಿ ಹೊಂದಿದ್ದು, ಈಗಾಗಲೇ 1110 ನಲ್ಲಿ ಅಳವಡಿಕೆಯಾಗಿದೆ. ಬಾಕಿ ಉಳಿದಿರುವ ಕಾಮಗಾರಿಯು ಪ್ರಗತಿಯಲ್ಲಿದೆ ಎಂದರು.
ಗ್ರಾಪಂನಲ್ಲಿ ಸಮಿತಿ ರಚನೆ: ಪ್ರತಿ ಗ್ರಾಮ ಪಂಚಾಯಿತಿಗಳಲ್ಲಿ ನೀರು ಮತ್ತು ನೈರ್ಮಲ್ಯ ಸಮಿತಿಯನ್ನು ರಚಿಸಲಾಗಿದೆ. ಸಮಿತಿಯಲ್ಲಿ ಶೇಕಡ 50ರಷ್ಟು ಮಹಿಳಾ ಸದಸ್ಯರನ್ನು ಒಗ್ಗೂಡಿಸಿ, ಗ್ರಾಮದ ತಮ್ಮ ವಾರ್ಡ್‌ಗಳಲ್ಲಿ ಕಾಮಗಾರಿ ಸರಿಯಾಗಿ ನಡೆಯುತ್ತಿದೆಯೇ ಕಾಮಗಾರಿಯಲ್ಲಿ ಏನಾದರೂ ಸಮಸ್ಯೆ ಇದೆಯೇ? ಇತ್ಯಾದಿ ಜವಾಬ್ದಾರಿಗಳನ್ನು ಸದಸ್ಯರು ನಿರ್ವಹಿಸಬೇಕು. ಶಿವಪುರ ಗ್ರಾಮದಲ್ಲಿ 11 ಜನ ಮಹಿಳಾ ಸದಸ್ಯರನ್ನು ಒಗ್ಗೂಡಿಸಿ ನೀರಿನ ಮಾದರಿ ಗುಣಮಟ್ಟವನ್ನು ಪರೀಕ್ಷಿಸಲಾಗುತ್ತಿದೆ. ಜಲ ಜೀವನ್ ಮಿಷನ್ ಯೋಜನೆಯಲ್ಲಿ ಸಮುದಾಯದ ಸಹಭಾಗಿತ್ವ ಅಗತ್ಯ. ಶೇಕಡ 10ರಷ್ಟು ಸಮುದಾಯ ವಂತಿಕೆ ಸಂಗ್ರಹಿಸಿ, ಸಂಗ್ರಹಿಸಿದ ಸಮುದಾಯ ವಂತಿಕೆಯನ್ನು ಸರ್ಕಾರಕ್ಕೆ ಸಂದಾಯ ಮಾಡಲಾಗುತ್ತದೆ, ಸಂದಾಯ ಮಾಡಿದ ವಂತಿಕೆ ಮೊತ್ತವು ಆನ್‌ಲೈನ್‌ನಲ್ಲಿ ಡಿಸ್‌ಪ್ಲೇ ಆಗಲಿದೆ. ಈಗಾಗಲೇ ಗ್ರಾಮ ಪಂಚಾಯಿತಿಗಳಿಂದ ನೀಡಿರುವ 15ನೇ ಹಣಕಾಸು ಹಾಗೂ ಸಾರ್ವಜನಿಕರಿಂದ ಸಂಗ್ರಹಿಸಿದ 10ರಷ್ಟುವಂತಿಕೆಯ ನಿರ್ವಹಣೆಯನ್ನು ಕೇಂದ್ರ ಸರ್ಕಾರ ಗಮನಿಸಲಿದೆ. ಹಾಗಾಗಿ ಯೋಜನೆ ಅನುಷ್ಠಾನದಲ್ಲಿ ಸಹಕಾರ, ಸಮುದಾಯದ ಸಹಭಾಗಿತ್ವ ಎಲ್ಲವು ಅಗತ್ಯವಾಗಿದೆ ಎಂದರು.
ನಿಗದಿಯಂತೆ ಕಾಮಗಾರಿ ಪೂರ್ಣಗೊಳಿಸಿ: ಶಿವಪುರ ಗ್ರಾಮದಲ್ಲಿ ಪ್ರಗತಿಯಲ್ಲಿರುವ ಜಲ ಜೀವನ್ ಮಿಷನ್ ಯೋಜನೆಯ ಕಾಮಗಾರಿಯನ್ನು ಪರಿಶೀಲಿಸಿ, ನಿಗದಿತ ವೇಳೆಗೆ ಕಾಮಗಾರಿಯನ್ನು ಪೂರ್ಣಗೊಳಿಸಿ ಗುಣಮಟ್ಟವನ್ನು ಕಾಯ್ದುಕೊಳ್ಳುವಂತೆ ಸೂಚಿಸಿದರು.ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾದ ರಾಮಚಂದ್ರಯ್ಯ, ಶಿವಶಂಕರಯ್ಯ, ಕಾರ್ಯಪಾಲಕಇಂಜಿನಿಯರ್ ಗಂಗಾಧರಯ್ಯ, ಸಹಾಯಕಕಾರ್ಯಪಾಲಕ ಇಂಜಿನಿಯರ್‌ಗಳಾದ ನಾಗರಾಜು,ಆನಂದಮೂರ್ತಿ, ನಿಂಗರಾಜು, ಎಸ್. ಜಗದೀಶ್,ಪುರುಷೋತ್ತಮ್ ಶಿವಪುರ ಗ್ರಾ.ಪಂ.ಉಪಾದ್ಯಕ್ಷಕುಮಾರಸ್ವಾಮಿ, ಜಿ.ಪಂ. ಲೆಕ್ಕಾಧಿಕಾರಿ ರಮೇಶ್,ಪಿಡಿಓ ಮಹದೇವಶೆಟ್ಟಿ, ಗ್ರಾ.ಪಂ.ಸದಸ್ಯರು ಹಾಜರಿದ್ದರು.
ಫೆಬ್ರವರಿ ಅಂತ್ಯಕ್ಕೆ ಕಾಮಗಾರಿ ಪೂರ್ಣಗೊಳಿಸಿ : ಈಗಾಗಲೇ ಜಿಲ ಜೀವನ್ ಮಿಷನ್ ಮೊದಲ ಹಂತದ ಕಾಮಗಾರಿ ಪೂರ್ಣಗೊಳ್ಳುವ ಹಂತಕ್ಕೆ ಬಂದಿದ್ದು,
ಫೆಬ್ರವರಿ ತಿಂಗಳ ಅಂತ್ಯಕ್ಕೆ ಸಂಪೂರ್ಣವಾಗಿ ಮುಗಿಸಬೇಕು. ಈ ಯೋಜನೆಯಿಂದ ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆಯನ್ನು ನೀಗಿಸಬಹುದಾಗಿದೆ. ಈ ಯೋಜನೆಯಿಂದ ಗ್ರಾಮೀಣ ಭಾಗದಲ್ಲಿ ನೀರಿನ ಸೋರಿಕೆಯನ್ನು ತಡೆಗಟ್ಟಿ ಪ್ರತಿಯೊಂದು ಕುಟುಂಬಕ್ಕೂ ಸಮನಾಗಿ ನೀರು ಪೂರೈಸಬಹುದು ಎಂದು ಗ್ರಾಮೀಣ ಕುಡಿಯುವ ನೀರು ವåತ್ತು ನೈರ್ಮಲ್ಯ ಇಲಾಖೆಯ ಮೈಸೂರು ವೃತ್ತದ ಅಧೀಕ್ಷಕ ಎಂಜಿನೀಯರ್ ಎಂ.ಎನ್. ಕೃಷ್ಣಮೂರ್ತಿ ಹೇಳಿದರು.